ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಮೈ ಬ್ರದರ್’ ನೀತಿಯಿಂದ ರಾಜ್ಯದಲ್ಲಿ ಅಶಾಂತಿ: ಸರ್ಕಾರದ ವಿರುದ್ಧ ಎನ್.ರವಿಕುಮಾರ್ ಖಂಡನೆ

On: February 20, 2026 6:06 PM
Follow Us:

ಬೆಂಗಳೂರು: “ಡಿ.ಕೆ. ಶಿವಕುಮಾರ್ ಅವರ ‘ಮೈ ಬ್ರದರ್’ ನೀತಿಯ ಪರಿಣಾಮವಾಗಿ ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ಹೆಚ್ಚಾಗಿದೆ” ಎಂದು ಎನ್. ರವಿಕುಮಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ನಿಲುವು ಸಮಾನತೆಯ ಆಧಾರದ ಮೇಲೆ ಇಲ್ಲದೆ, ಒಂದೇ ಸಮುದಾಯಕ್ಕೆ ಮೆಲುಕು ಹಾಕುವ ರೀತಿಯಲ್ಲಿ ಇದೆ ಎಂಬ ಆರೋಪವನ್ನೂ ಅವರು ವ್ಯಕ್ತಪಡಿಸಿದರು.

ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಸರಕಾರಿ ನೌಕರರು ಹಾಗೂ ಹಿಂದೂ ಕಾರ್ಯಕರ್ತರಿಗೆ ಸಮರ್ಪಕ ರಕ್ಷಣೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಸರಕಾರ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ನೀಡುವಂತೆ ವರ್ತಿಸುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ” ಎಂದು ಟೀಕಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ತಕ್ಷಣ ಕ್ರಮ ಕೈಗೊಳ್ಳದಿರುವುದು ಸರ್ಕಾರದ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು. “ಅಂತಹ ಸಂದರ್ಭದಲ್ಲೇ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸಿರಲಿಲ್ಲ” ಎಂದು ಹೇಳಿದರು.

ಮೆರವಣಿಗೆಗಳ ವಿಚಾರದಲ್ಲಿ ಆರೋಪ

ಗಣಪತಿ ಉತ್ಸವ, ಶಿವಾಜಿ ಜಯಂತಿ, ಕನಕದಾಸ ಹಾಗೂ ಬಸವೇಶ್ವರರ ಭಾವಚಿತ್ರಗಳ ಮೆರವಣಿಗೆಗಳಿಗೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಕ್ಷೇಪಿಸಿದರು. “ಕರ್ನಾಟಕದಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಗಳು ಮಸೀದಿ ಮುಂಭಾಗದಿಂದ ಸಾಗಬಾರದೆಂಬ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದೇನು ಪಾಕಿಸ್ತಾನವೇ?” ಎಂದು ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಯ ವೇಳೆ ಕಲ್ಲೆಸೆತ ನಡೆದಿರುವುದಾಗಿ ಉಲ್ಲೇಖಿಸಿದ ಅವರು, ಎಸ್ಪಿ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಹೇಳಿದರು. “ಆರಂಭದಲ್ಲಿ ಯಾರನ್ನೂ ಬಂಧಿಸದ ಸರ್ಕಾರ, ಹಿಂದೂ ಕಾರ್ಯಕರ್ತರ ಒತ್ತಡದ ನಂತರ ಎಂಟು ಮಂದಿಯನ್ನು ಬಂಧಿಸಿದೆ” ಎಂದು ದೂರಿದರು.

ಮೇಲುಕೋಟೆ, ಮಂಡ್ಯ, ಶಿವಮೊಗ್ಗ, ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪದೇಪದೇ ಗಲಾಟೆಗಳು ನಡೆಯುತ್ತಿವೆ ಎಂದು ಹೇಳಿದ ಅವರು, “ಇದು ತುಷ್ಟೀಕರಣ ರಾಜಕಾರಣದ ಪರಿಣಾಮ” ಎಂದು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಕುರಿತು ಟೀಕೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿಗಳ ಕುರಿತು ಮಾತನಾಡಿದ ಅವರು, “ಉಚಿತ ಚಿಕಿತ್ಸೆಗೆ ತೆರಳುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನರಕಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.

ಕೋಲಾರ, ದಾವಣಗೆರೆ, ಚಿತ್ರದುರ್ಗ, ಕಲಬುರ್ಗಿ, ಹಾಸನ ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿರುವುದಾಗಿ ತಿಳಿಸಿದರು. “ಸ್ಕ್ಯಾನಿಂಗ್ ಸೇವೆಗಳಿಗಾಗಿ ಕೊಡಬೇಕಾದ 140 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. 95 ಬಾರಿ ಇಮೇಲ್ ಕಳುಹಿಸಿದ್ದರೂ ಸ್ಪಂದನೆ ಇಲ್ಲ” ಎಂದು ಆರೋಪಿಸಿದರು.

“ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳೇ, ಸರ್ಕಾರದ ಬಳಿ 140 ಕೋಟಿ ರೂಪಾಯಿ ಇಲ್ಲವೇ?” ಎಂದು ಪ್ರಶ್ನಿಸಿದರು. ಇದರ ಪರಿಣಾಮವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಜನೌಷಧಿ ಕೇಂದ್ರಗಳಲ್ಲೂ ಔಷಧಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ಆಕ್ಷೇಪಿಸಿದ ಅವರು, “ಹಿಂದೆ ಲಭ್ಯವಿದ್ದ ಸುಮಾರು 800 ಔಷಧಿಗಳ ಬದಲು ಈಗ ಕೇವಲ 150 ಮಾತ್ರ ಲಭ್ಯವಿವೆ” ಎಂದು ಹೇಳಿದರು.

ಮಾಧ್ಯಮಗಳಿಗೆ ನಿರ್ಬಂಧದ ವಿರುದ್ಧ ಆಕ್ರೋಶ

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿಧಿಸಿರುವ ನಿರ್ಬಂಧವನ್ನು ಖಂಡಿಸಿದ ಅವರು, “ಮಾಧ್ಯಮಗಳಿಗೇ ನಿರ್ಬಂಧ ಹೇರಿದರೆ ಸಾಮಾನ್ಯ ನಾಗರಿಕರ ಸ್ಥಿತಿ ಏನು?” ಎಂದು ಪ್ರಶ್ನಿಸಿದರು. ಹಿಂದಿನಂತೆ ಮಾಧ್ಯಮ ಪ್ರವೇಶವನ್ನು ಅನುಮತಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಡಾ. ರಂಗಪ್ಪ ಮಾತನಾಡಿ, “ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ನೀತಿ ಅನುಸರಿಸುತ್ತಿದೆ” ಎಂದು ಟೀಕಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ವೇತನದಲ್ಲಿ ಭಾರೀ ವ್ಯತ್ಯಾಸವಿದ್ದು, ವೈದ್ಯರು ಮನವಿ ಮಾಡಿದರೂ ಪರಿಹಾರ ಸಿಗುತ್ತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಹರತಾಳ್ ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯ ರಾಜಕೀಯವೇ? ಸಿದ್ದರಾಮಯ್ಯ ಹೇಳಿಕೆಗಳ ಹಿಂದೆ ಮೂಡಿದ ಪ್ರಶ್ನೆಗಳು

ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಂಕಲ್ಪ: 2028ರಲ್ಲಿ ಪ್ರಚಂಡ ಬಹುಮತ – ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಶ್ವಾಸ

ಮಹಾಯೋಜನೆ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಸರಳೀಕರಣ: ಕೃಷಿ ಜಮೀನುಗಳಿಗೆ ಭವಿಷ್ಯದ ಆತಂಕವೇ?

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪದಗ್ರಹಣ: ಧರ್ಮ–ಸಂಸ್ಕೃತಿ ಸಂರಕ್ಷಣೆಗೆ ಯುವಕರ ಸಂಘಟನೆ ಅಗತ್ಯ – ಬೆಕ್ಕಿನಕಲ್ಮಠ ಶ್ರೀ

ಕಸ ತಡೆದರೆ ಕಾನೂನು ಕ್ರಮ ಅನಿವಾರ್ಯ: ಬ್ಲಾಕ್‌ಮೇಲ್ ರಾಜಕೀಯಕ್ಕೆ ತಲೆಬಾಗುವುದಿಲ್ಲ ಬಿಜೆಪಿ ವಿರುದ್ಧ ಡಿಕೆಶಿ ಎಚ್ಚರಿಕೆ

ಸಾರಿಗೆ ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರವೇ ಕಾರಣ: 38 ತಿಂಗಳ ಬಾಕಿ ವೇತನ ತಕ್ಷಣ ಪಾವತಿಸಲಿ – ಬಿ.ವೈ. ವಿಜಯೇಂದ್ರ

Leave a Comment