ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಉದ್ಯೋಗ ಭರವಸೆ ಈಡೇರಿಸದಿದ್ದರೆ ಹೋರಾಟ – ಸಿಎಂಗೆ ವಿಜಯೇಂದ್ರ ಎಚ್ಚರಿಕೆ

On: February 25, 2026 4:57 PM
Follow Us:

ಬೆಂಗಳೂರು: ರಾಜ್ಯ ಸರ್ಕಾರ ತಕ್ಷಣವೇ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸದಿದ್ದರೆ ಬಿಜೆಪಿ ರಾಜ್ಯವ್ಯಾಪಿ ಹೋರಾಟ ಆರಂಭಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತವ ಸ್ಥಿತಿಯನ್ನು ಬಹಿರಂಗಪಡಿಸಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ತನ್ನ ‘ಪಂಚ ಗ್ಯಾರಂಟಿ’ ಯೋಜನೆಗಳ ಭಾರದಿಂದ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದು, ಅದರಿಂದಾಗಿ ಯಾವುದೇ ಹೊಸ ನೇಮಕಾತಿಗೆ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.

“ನಿಮ್ಮ ಸರ್ಕಾರಕ್ಕೆ ಎರಡೂಮುಕ್ಕಾಲು ವರ್ಷವಾಗುತ್ತಿದೆ. ಇನ್ನೂ ಹಿಂದಿನ ಬಿಜೆಪಿ ಸರ್ಕಾರವನ್ನು ದೂರುವುದೇ ನಿಮ್ಮ ಕೆಲಸವಾಗಿದೆಯೇ? ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ್ದಿರಿ. ಈಗ ಅದನ್ನು ಮರೆತು ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗಿರುವುದು ಯಾಕೆ?” ಎಂದು ಪ್ರಶ್ನಿಸಿದರು.

ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಸಿಬ್ಬಂದಿಯ ಹುದ್ದೆಗಳಿಗೆ ನೇಮಕಾತಿ ಮಾಡಲು ಸರ್ಕಾರ ಅನುಮತಿ ನೀಡಿದರೂ, ಒಂದು ವರ್ಷ ಎಂಟು ತಿಂಗಳು ಕಳೆದರೂ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಟೀಕಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 59 ಸಾವಿರ ಹುದ್ದೆಗಳು ಹಾಗೂ ಆರೋಗ್ಯ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಅವರು ವಿವರಿಸಿದರು.

ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗದಲ್ಲಿ ನಡೆದ ಸಭೆಯಲ್ಲಿ ಶಿಕ್ಷಕರ ನೇಮಕಾತಿ ತ್ವರಿತಗೊಳಿಸುವಂತೆ ಮನವಿ ಮಾಡಿದ್ದರೂ, ಅದಕ್ಕೂ ಸರ್ಕಾರ ಸ್ಪಂದಿಸಿಲ್ಲ ಎಂದು ಹೇಳಿದರು. “ಸುಳ್ಳಿನ ಬಂಡಿಯನ್ನು ಶಾಶ್ವತವಾಗಿ ಓಡಿಸಲು ಸಾಧ್ಯವಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ,” ಎಂದು ಎಚ್ಚರಿಸಿದರು.

ಸುಳ್ಳಾಟ, ಕಳ್ಳಾಟ ನಿಲ್ಲಿಸಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ: ವಿಜಯೇಂದ್ರ ಆಗ್ರಹ ಆರೋಗ್ಯ ಇಲಾಖೆ ಐಸಿಯುನಲ್ಲಿದೆ, ಔಷಧಿ ಕೊರತೆಯಿಂದ ಬಡವರ ಪರದಾಟ

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸುಳ್ಳು ಹೇಳುವ ರಾಜಕಾರಣವನ್ನು ಬಿಟ್ಟು ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ವಿಜಯೇಂದ್ರ ಮತ್ತೊಮ್ಮೆ ಆಗ್ರಹಿಸಿದರು. “16 ಬಜೆಟ್ ಮಂಡಿಸಿ ಅನುಭವ ಪಡೆದ ಮುಖ್ಯಮಂತ್ರಿಗಳು ಇಂತಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ,” ಎಂದು ಟೀಕಿಸಿದರು.

ರಾಜ್ಯದ ಆರೋಗ್ಯ ಇಲಾಖೆಯ ದುಸ್ಥಿತಿ ಕುರಿತು ಮಾತನಾಡಿದ ಅವರು, 108 ಆಂಬುಲೆನ್ಸ್ ಸಿಬ್ಬಂದಿಗೆ ಎಂಟು–ಒಂಬತ್ತು ತಿಂಗಳಿನಿಂದ ವೇತನ ಬಾಕಿ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ತೀವ್ರವಾಗಿದೆ. ಬಡ ರೋಗಿಗಳು ಖಾಸಗಿ ಫಾರ್ಮಸಿಗಳಿಂದ ಔಷಧಿ ಖರೀದಿಸಲು ವೈದ್ಯರೇ ಸೂಚಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸಿ.ಟಿ.ಸ್ಕ್ಯಾನ್ ಮತ್ತು ಎಂಆರ್‌ಐ ಸೇವೆ ಒದಗಿಸುವ ಸಂಸ್ಥೆಗೆ 143 ಕೋಟಿ ರೂಪಾಯಿ ಬಾಕಿ ಉಳಿದಿರುವುದರಿಂದ ಸೇವೆಗಳು ಅಸ್ತವ್ಯಸ್ತವಾಗಿವೆ. ಗರ್ಭಿಣಿಯರು ಸೇರಿದಂತೆ ಅನೇಕ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. “ರಾಜ್ಯದ ಆರೋಗ್ಯ ಇಲಾಖೆ ಐಸಿಯುನಲ್ಲಿದೆ,” ಎಂದು ಕಟುವಾಗಿ ಟೀಕಿಸಿದರು.

ಔಷಧಿ ಖರೀದಿಯಲ್ಲಿ ತುಂಡು ಗುತ್ತಿಗೆ ಪದ್ಧತಿ ಅನುಸರಿಸಿ ಕಮಿಷನ್ ಹಾವಳಿ ನಡೆಯುತ್ತಿದೆ. ಮಾರುಕಟ್ಟೆ ದರಕ್ಕಿಂತ ಮೂರರಷ್ಟು ಹೆಚ್ಚಾಗಿ ಔಷಧಿ ಖರೀದಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದರು. “ಒಬ್ಬ ಖಾಸಗಿ ವ್ಯಕ್ತಿಯ ಪ್ರಭಾವದಿಂದ ಔಷಧಿ ಟೆಂಡರ್ ವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುತ್ತಿದೆ,” ಎಂದು ದೂರಿದರು. ಸಂಬಂಧಿಸಿದ ಸಚಿವರು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸವಾಲು ಹಾಕಿದರು.

ಯುವಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿ ಮತ್ತು ನಿರುದ್ಯೋಗಿ ಯುವಕರು ಹೋರಾಟ ನಡೆಸುತ್ತಿರುವುದನ್ನು ಉಲ್ಲೇಖಿಸಿದ ವಿಜಯೇಂದ್ರ, ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿ ಇದೆ ಎಂದು ಟೀಕಿಸಿದರು. “ಬೆಂಗಳೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಯುವಕರು ಬೀದಿಗಿಳಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಇಚ್ಛಾಶಕ್ತಿ ಕಾಣುತ್ತಿಲ್ಲ,” ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಾಗೂ ರಾಹುಲ್ ಗಾಂಧಿ ಅವರು ಬೆಳಗಾವಿಯಲ್ಲಿ ನೀಡಿದ ಭರವಸೆಯಂತೆ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮಾತು ಈಡೇರಿಲ್ಲ ಎಂದು ಹೇಳಿದರು. ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿರುವ 24,300 ಹುದ್ದೆಗಳ ನೇಮಕಾತಿಯೂ ಇನ್ನೂ ಆರಂಭವಾಗಿಲ್ಲ ಎಂದು ಪ್ರಶ್ನಿಸಿದರು.

“ಯುವಜನರ ಪ್ರತಿಭಟನೆ ಆರಂಭವಾಗಿ ಎರಡು ವರ್ಷವಾಗುತ್ತಿದೆ. ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎನ್ನಲು ಮುಖ್ಯಮಂತ್ರಿಗಳಿಗೆ ಇಷ್ಟು ಸಮಯ ಬೇಕಾಯಿತೇ? ಕುರ್ಚಿ ಕಾಳಗದಲ್ಲೇ ಸಮಯ ಕಳೆಯುತ್ತಿರುವ ಸರ್ಕಾರಕ್ಕೆ ಯುವಜನರ ಭಾವನೆ ಅರ್ಥವಾಗುತ್ತಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಪುನರುಚ್ಚರಿಸಿದ ವಿಜಯೇಂದ್ರ, “ಬಡವರು, ಯುವಕರು, ರೋಗಿಗಳು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು” ಎಂದು ಒತ್ತಾಯಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

​ಸಾವಿರ ರೂಪಾಯಿಯಿಂದ ಕೋಟ್ಯಂತರ ರೂ. ವಹಿವಾಟು: ಬಸವೇಶ್ವರ ಸಹಕಾರ ಸಂಘದ ಶತಮಾನದ ಬೆಳವಣಿಗೆ ಹಾಗೂ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸಾರಥ್ಯಕ್ಕೆ ಸಿ.ಎಸ್.ಷಡಾಕ್ಷರಿ ಶ್ಲಾಘನೆ

ಶಿವಮೊಗ್ಗದಲ್ಲಿ ಇತಿಹಾಸ ಪ್ರಸಿದ್ಧ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬಿ.ಎಸ್.ವೈ ಅಭಿನಂದನಾ ಸಮಾರಂಭ ಯಶಸ್ವಿಗೊಳಿಸಲು ಆಯನೂರು ಮಂಜುನಾಥ್ ಕರೆ

ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ: ಶೋಷಿತರ ಪಾಲಿಗೆ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ – ಸಂಸದ ಬಿ.ವೈ. ರಾಘವೇಂದ್ರ

ಸರ್ವೆ ಸ್ಥಗಿತ, ರಸಗೊಬ್ಬರ ಕೊರತೆ ತಕ್ಷಣ ಬಗೆಹರಿಸಿ: ಇಲ್ಲದಿದ್ದರೆ ಉಗ್ರ ಹೋರಾಟ – ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ

“ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಬಸವ ತತ್ವದ ಕಾಯಕ-ದಾಸೋಹಕ್ಕೆ ಸಿಕ್ಕ ವಿಜಯೋತ್ಸವ” – ಬಿ.ಎಸ್. ಯಡಿಯೂರಪ್ಪ ಶ್ಲಾಘನೆ

ಬಂಗಾರಪ್ಪನವರಿಗೆ ದಕ್ಷಿಣ ಕನ್ನಡದಲ್ಲಿ ಬ್ಯಾರಿ ಸಮುದಾಯವೇ ರಾಜಕೀಯ ಶಕ್ತಿಯಾಗಿತ್ತು: ಸಚಿವ ಮಧು ಬಂಗಾರಪ್ಪ

Leave a Comment