ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಣ: ಗೊಂದಲಗಳನ್ನು ನಿವಾರಿಸಿ ಒಗ್ಗಟ್ಟಿನಿಂದ ಗೆಲ್ಲುತ್ತೇವೆ – ಬಿ.ವೈ. ವಿಜಯೇಂದ್ರ

On: March 5, 2026 6:47 PM
Follow Us:

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲೇಬೇಕೆಂಬ ದೃಢಸಂಕಲ್ಪದೊಂದಿಗೆ ಕಾರ್ಯಕರ್ತರು ಹಾಗೂ ನಾಯಕರು ಒಗ್ಗಟ್ಟಾಗಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಉಂಟಾಗಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ, ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುವ ಮೂಲಕ ಬಿಜೆಪಿ ಗೆಲುವು ಖಚಿತಪಡಿಸಿಕೊಳ್ಳುವತ್ತ ನಾವು ಪಣ ತೊಟ್ಟಿದ್ದೇವೆ ಎಂದು ಅವರು ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದೊಳಗಿನ ಯಾವುದೇ ವ್ಯತ್ಯಾಸಗಳಿದ್ದರೂ ಅವನ್ನು ಬಗೆಹರಿಸುವ ಶಕ್ತಿ ನಮ್ಮಲ್ಲಿದೆ. ಅದಕ್ಕಾಗಿ ನಾನು ಸ್ವತಃ ದಾವಣಗೆರೆಗೆ ಬಂದಿದ್ದೇನೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಗಳಾದ ರಾಧಾಮೋಹನ್ ದಾಸ್ ಅಗ್ರವಾಲ್ ಕೂಡ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಎಲ್ಲ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಈ ಗೊಂದಲಗಳು ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಆಕಾಂಕ್ಷೆ ಹೊಂದಿರುವ ಹಲವಾರು ನಾಯಕರನ್ನು ಭೇಟಿ ಮಾಡಲಾಗುತ್ತಿದೆ. ಅವರ ಅಭಿಪ್ರಾಯಗಳು ಮತ್ತು ವಿಚಾರಗಳನ್ನು ಗಮನದಿಂದ ಕೇಳಿಕೊಳ್ಳಲಾಗುತ್ತಿದೆ. ಇಂದಿನ ಭೇಟಿಯ ಮುಖ್ಯ ಉದ್ದೇಶವೂ ಅದೇ. ಕ್ಷೇತ್ರದಲ್ಲಿ ಉದ್ಭವಿಸಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಗುತ್ತದೆ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ಸುಮಾರು 8ರಿಂದ 10 ಮಂದಿ ಅಭ್ಯರ್ಥಿಗಳು ಆಕಾಂಕ್ಷಿಗಳು ಇದ್ದಾರೆ. ಅವರಲ್ಲಿ ನಾಲ್ಕೈದು ಮಂದಿಯನ್ನು ಈಗಾಗಲೇ ಭೇಟಿಯಾಗಿದ್ದೇವೆ. ಇದೇ ವೇಳೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರನ್ನೂ ಭೇಟಿಯಾಗಲಿದ್ದೇವೆ. ಕ್ಷೇತ್ರದಲ್ಲಿ ಇನ್ನೂ ಕೆಲವು ಆಕಾಂಕ್ಷಿಗಳು ಇದ್ದು, ಅವರ ಜೊತೆಯಲ್ಲೂ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಪಕ್ಷದ ಸಂಘಟನೆ ಬಲಪಡಿಸುವ ಕೆಲಸ ಸಕ್ರಿಯವಾಗಿ ನಡೆಯುತ್ತಿದೆ. ದಾವಣಗೆರೆ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ‘ವಿಸ್ತಾರಕ್ ಯೋಜನೆ’ ಅಡಿಯಲ್ಲಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಬೂತ್‌ನಲ್ಲಿ ಒಂದು ವಾರ ತಂಗಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು, ಕಾರ್ಯಕರ್ತರಿಗೆ ಧೈರ್ಯ ತುಂಬುವುದು ಹಾಗೂ ಸಂಘಟನಾತ್ಮಕವಾಗಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಮುಂತಾದ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕ್ಷೇತ್ರದ ಕಾರ್ಯಕರ್ತರಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಸಾಕಷ್ಟು ಉತ್ಸಾಹ ಮತ್ತು ರಣೋತ್ಸಾಹ ಇದೆ. ಆದರೆ ಕೆಲವು ಮುಖಂಡರ ಮಟ್ಟದಲ್ಲಿ ಸ್ವಲ್ಪ ಗೊಂದಲ ಇರುವುದೂ ಸತ್ಯ. ಆ ಗೊಂದಲಗಳನ್ನು ನಿವಾರಿಸಿ ಎಲ್ಲರನ್ನು ಒಂದೇ ವೇದಿಕೆಗೆ ತರಬೇಕಾದ ಜವಾಬ್ದಾರಿ ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನ ಮೇಲಿದೆ. ಆದ್ದರಿಂದಲೇ ನಾವು ಎಲ್ಲರೂ ಇಲ್ಲಿ ಸೇರಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲವಾಗಿ ಬೆಳೆಯುತ್ತಿದೆ. ಕಾರ್ಯಕರ್ತರ ಪರಿಶ್ರಮ ಮತ್ತು ಜನರ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸ ನಮಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment