ಬೆಂಗಳೂರು: ಮಹಿಳೆಯರ ಸಬಲೀಕರಣ ಮತ್ತು ಸಮಾನ ಪಾಲ್ಗೊಳ್ಳಿಕೆ ಇಲ್ಲದೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದಾ ಒತ್ತಿ ಹೇಳುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಭಾರತವು 2047ರೊಳಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಕನಸನ್ನು ಸಾಕಾರಗೊಳಿಸಲು ಪುರುಷರ ಜೊತೆಗೆ ಮಹಿಳೆಯರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂಬುದು ಮೋದಿ ಅವರ ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಮಹಾನಗರ ಮಹಿಳಾ ಘಟಕದ ವತಿಯಿಂದ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಪ್ರಧಾನಮಂತ್ರಿ ಮೋದಿ ಅವರು “ಪ್ರಧಾನ ಸೇವಕ” ಎಂಬ ಮನೋಭಾವದಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು. ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಆಡಳಿತ ನಡೆಸಿದ ಅವಧಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಬಡ ಕುಟುಂಬಗಳಲ್ಲಿ ಜನಿಸುವ ಹೆಣ್ಣುಮಗುವನ್ನು “ಶಾಪ” ಎಂದು ಕಾಣುವ ಮನೋಭಾವವನ್ನು ಬದಲಿಸಲು “ಭಾಗ್ಯಲಕ್ಷ್ಮಿ ಯೋಜನೆ” ಜಾರಿಗೆ ತರಲಾಯಿತು. ಹೆಣ್ಣುಮಗು ಕುಟುಂಬಕ್ಕೆ ಭಾರವಲ್ಲ, ಅದು ಕುಟುಂಬಕ್ಕೆ ಭಾಗ್ಯ ತರುವ ಸಂತತಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಶಾಲೆಗಳು ದೂರದಲ್ಲಿರುವ ಕಾರಣ ಅನೇಕ ಹೆಣ್ಮಕ್ಕಳು ಐದನೇ ಅಥವಾ ಆರನೇ ತರಗತಿಯ ನಂತರ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ವಿದ್ಯಾರ್ಥಿನಿಯರಿಗೆ ಸೈಕಲ್ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಇದರ ಪರಿಣಾಮವಾಗಿ ಸಾವಿರಾರು ಹೆಣ್ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಯಿತು ಎಂದು ವಿಜಯೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಅಮಾನವೀಯ ಘಟನೆಯ ಕುರಿತು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲೇ, ಸುವರ್ಣಸೌಧದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯನ್ನು ಹಾಡಹಗಲೇ ಅವಮಾನಗೊಳಿಸಿದ ಘಟನೆ ನಡೆದಿದೆ. ಆ ಸಮಯದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೇರಿದಂತೆ ಸರ್ಕಾರದ ಪ್ರಮುಖರು ಅಲ್ಲೇ ಇದ್ದರೂ ಕೂಡ ತಕ್ಷಣ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಅವರು ಆರೋಪಿಸಿದರು.

ಆ ಘಟನೆ ನಡೆದ ನಂತರ ಪಕ್ಷದ ರಾಜ್ಯಾಧ್ಯಕ್ಷನಾಗಿ ತಾವು ಆ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ವಿಜಯೇಂದ್ರ ಹೇಳಿದರು. ಮಹಿಳೆಯರ ಸುರಕ್ಷತೆ ಸರ್ಕಾರದ ಪ್ರಮುಖ ಹೊಣೆಗಾರಿಕೆ ಆಗಬೇಕು ಎಂದು ಅವರು ಹೇಳಿದರು.
ಇಂದಿನ ಸಮಾಜದಲ್ಲಿ ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತವಾಗದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಬರಬೇಕು ಎಂಬ ಬಲವಾದ ಇಚ್ಛಾಶಕ್ತಿ ಅವರಲ್ಲಿ ಮೂಡಿದೆ. ಅದರ ಪರಿಣಾಮವಾಗಿ ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವ ವಹಿಸುವ ಮಟ್ಟಕ್ಕೆ ಏರಿದ್ದಾರೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ವಿಷಯದಲ್ಲಿಯೂ ಪ್ರಧಾನಮಂತ್ರಿ ಮೋದಿ ಅವರು ಪ್ರಾಮಾಣಿಕ ಬದ್ಧತೆ ತೋರಿದ್ದಾರೆ ಎಂದು ಅವರು ಹೇಳಿದರು. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ದೃಢ ನಿಲುವನ್ನು ದೇಶಕ್ಕೆ ತೋರಿಸಿದ್ದಾರೆ ಎಂದು ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶದಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು. ಈ ದಿನ ಮಹಿಳೆಯರ ಸಾಧನೆಗಳನ್ನು ಗೌರವಿಸುವುದರ ಜೊತೆಗೆ ಲಿಂಗ ಸಮಾನತೆ, ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತವೆ ಎಂದು ವಿವರಿಸಿದರು.
ಭಾರತದಲ್ಲಿ ಮಹಿಳೆಯರಿಗೆ ಹಿಂದಿನಿಂದಲೂ ಅಪಾರ ಗೌರವ ನೀಡುವ ಸಂಸ್ಕೃತಿ ಇದೆ ಎಂದು ವಿಜಯೇಂದ್ರ ಹೇಳಿದರು. ತಾಯಿಯನ್ನು ದೇವರ ಸ್ಥಾನದಲ್ಲಿ ಕಾಣುವ ಪರಂಪರೆ ಭಾರತಕ್ಕೆ ಇದೆ. ಕನ್ನಡನಾಡು ಶರಣೆಯಾದ ಅಕ್ಕ ಮಹಾದೇವಿ ಅವರನ್ನು ಜನ್ಮ ನೀಡಿದ ಪವಿತ್ರ ನಾಡು. ಜೊತೆಗೆ ವೀರ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ಅವರಂತಹ ಮಹಾನ್ ವ್ಯಕ್ತಿತ್ವಗಳನ್ನು ದೇಶಕ್ಕೆ ನೀಡಿದ ಹೆಮ್ಮೆ ಕರ್ನಾಟಕಕ್ಕಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಸಿ.ಎನ್.ಅಶ್ವಥ್ ನಾರಾಯಣ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕು.ಸಿ. ಮಂಜುಳಾ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದಂ, ಮಹಿಳಾ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಆಯೋಗದ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸೇರಿದಂತೆ ಹಲವು ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.







