ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನ್ಯಾಮತಿಯಲ್ಲಿ ಶರಣರ ಸಂದೇಶಗಳ ನಡುವೆ ಮಹಿಳಾ ದಿನಾಚರಣೆ: ಅಕ್ಕಮಹಾದೇವಿಗೆ ಗೌರವ ನಮನ

On: March 11, 2026 2:31 PM
Follow Us:

ನ್ಯಾಮತಿ: ನ್ಯಾಮತಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಜಾಗತಿಕ ಲಿಂಗಾಯತ ಮಹಾಸಭಾ ನ್ಯಾಮತಿ ತಾಲೂಕು ಘಟಕ, ಚೀಲೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಅಕ್ಕನ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ ಲಿಂ. ಶ್ರೀಮತಿ ಲಲಿತಮ್ಮ ಮತ್ತು ಶ್ರೀ ಕತ್ತಿಗೆ ಗಂಗಾಧರಪ್ಪ ಅವರ ದತ್ತಿನಿಧಿಯ ನೆರವಿನಿಂದ ಸರ್ವಜ್ಞ ನೆನಹು ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಅಕ್ಕಮಹಾದೇವಿಯ ಧೈರ್ಯ ಮತ್ತು ಸ್ವಾತಂತ್ರ್ಯದ ಸಂದೇಶ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎನ್. ಮಹಾರುದ್ರ ಅವರು, ಇಡೀ ಜಗತ್ತಿನಲ್ಲಿ ಮೂಢನಂಬಿಕೆಗಳ ಪ್ರಭಾವ ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಹೆಣ್ಣನ್ನು ಅಬಲೆ, ಅಶಕ್ತಳೆಂದು ಪರಿಗಣಿಸಲಾಗುತ್ತಿದ್ದ ಸಂದರ್ಭದಲ್ಲೇ ಹೆಣ್ಣು ಅಬಲೆಯಲ್ಲ, ಅಶಕ್ತಳಲ್ಲ ಎಂದು ಘಂಟಾಘೋಷವಾಗಿ ಸಾರಿದ 12ನೇ ಶತಮಾನದ ಮಹಾನ್ ಶರಣಿ ಅಕ್ಕಮಹಾದೇವಿ ಎಂದು ಹೇಳಿದರು. ಆ ಕಾಲದಲ್ಲಿಯೇ ಮನೆ ಬಿಟ್ಟು ಕಾಡು-ಮೇಡುಗಳಲ್ಲಿ ತಪಸ್ಸು ಮಾಡುತ್ತಾ ಸಾಗಿದ ಅಕ್ಕಮಹಾದೇವಿಯು ಮಹಿಳೆಯ ಸ್ವಾತಂತ್ರ್ಯ ಮತ್ತು ಆತ್ಮಗೌರವದ ಸಂಕೇತವಾಗಿ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ. ಇಂದಿನ ದಿನದಲ್ಲಿ ಜಗತ್ತಿನಾದ್ಯಂತ ಅಕ್ಕಮಹಾದೇವಿಯ ಚಿಂತನೆಗಳನ್ನು ಸ್ಮರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸರ್ವಜ್ಞ ತ್ರಿಪದಿಗಳಲ್ಲಿ ಸಮಾಜದ ನಿಜಸ್ವರೂಪ

“ಬಸವ ಪ್ರಣೀತ ಸರ್ವಜ್ಞನ ದೃಷ್ಟಿಯಲ್ಲಿ ಮಹಿಳೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ದಾವಣಗೆರೆ ಸರ್ವಜ್ಞ ಸಂಶೋಧನಾ ಪೀಠದ ಡಾ. ಮಂಜಪ್ಪ ಶರಣರು, ಸರ್ವಜ್ಞನ ಸಾಹಿತ್ಯದ ಮಹತ್ವವನ್ನು ವಿವರಿಸಿದರು. ಸರ್ವಜ್ಞನ ತ್ರಿಪದಿಗಳು ಮಾನವ ಜೀವನದ ನೈಜ ಅನುಭವಗಳನ್ನು, ಸಾಮಾಜಿಕ ಸತ್ಯಗಳನ್ನು ಹಾಗೂ ಬಸವಾದಿ ಶರಣರ ಸಂದೇಶಗಳನ್ನು ಸರಳವಾಗಿ ಜನಸಾಮಾನ್ಯರಿಗೆ ತಲುಪಿಸುವ ಅಪೂರ್ವ ಸಾಹಿತ್ಯವಾಗಿದೆ. ಸರ್ವಜ್ಞನ ಸಾಹಿತ್ಯವನ್ನು ಸಮಗ್ರವಾಗಿ ವಿಶ್ವದ ಮುಂದೆ ಪರಿಚಯಿಸಿದ್ದರೆ, ಅವರು ವಿಶ್ವದ ಪ್ರಮುಖ ಚಿಂತಕರಲ್ಲಿ ಅಗ್ರಸ್ಥಾನ ಪಡೆದಿರುತ್ತಿದ್ದರು ಎಂದು ಹೇಳಿದರು. ಸರ್ವಜ್ಞನ ತ್ರಿಪದಿಗಳು ಜನಸಾಮಾನ್ಯರ ನಾಲಿಗೆಯ ಮೇಲೆ ಜೀವಂತವಾಗಿದ್ದರೂ ಕೆಲವರ ವಿರೋಧದ ಕಾರಣದಿಂದ ಅವರ ಮಹತ್ವಕ್ಕೆ ತಕ್ಕ ಪ್ರಚಾರ ಸಿಗಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮದ ಹಿರಿಯರಾದ ಯತೀಶ್ ಚಂದ್ರ ಕೋರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುಂಬಾರ ಸಂಘದ ಅಧ್ಯಕ್ಷರಾದ ರಾಜಶೇಖರ ಕುಂಬಾರ, ಶಿವಮೊಗ್ಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶ್ರೀಮತಿ ಸುಜಾತ ಬಸವರಾಜ್, ಗ್ರಾಮದ ಹಿರಿಯರಾದ ಹೊತ್ತಿಹಾಳ ಶಿವಪ್ಪ, ಚಂದ್ರಶೇಖರಪ್ಪ ಜವಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಯೋಗಿ ಎಂ.ಬಿ. ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅಕ್ಕನ ಬಳಗದ ಶ್ರೀಮತಿ ಶೀಲಾ ರಾಜು ಸ್ವಾಗತಿಸಿದರು. ಶ್ರೀಮತಿ ಪಾರ್ವತಿ ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಸವಿತಾ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ಹಾಗೂ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಭಕ್ತಿ ಹಾಗೂ ಸಾಹಿತ್ಯದ ಸೊಗಡು ತುಂಬಿದರು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಹಿರಿಯ ಮತ್ತು ಕಿರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಶ್ರೀ ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವ ಸಂಭ್ರಮ: “ಮೂಲ ಸಂಸ್ಕೃತಿ ಮರೆತರೆ ಕಷ್ಟ ತಪ್ಪಿದ್ದಲ್ಲ” – ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂದೇಶ

ಧರ್ಮ ವೃಕ್ಷದ ತಾಯಿಯಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು: ಶ್ರೀ ರಂಭಾಪುರಿ ಜಗದ್ಗುರು

ಎಲ್ಲಾ ಸಮಾಜಗಳಿಗೆ ನೆರಳು ಹಾಗೂ‌ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ: ಬಿ.ವೈ ವಿಜಯೇಂದ್ರ

ಚಿಕ್ಕಮಗಳೂರಿನಲ್ಲಿ ಬಸವತತ್ವ ಸುವರ್ಣ ಮಹೋತ್ಸವ ಸಂಭ್ರಮ; ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿಗೆ ವಿಜಯೇಂದ್ರ ಕರೆ

🌸 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ 🌸

‘ಇಷ್ಟಲಿಂಗ ದೀಕ್ಷೆಗೆ ವರ್ಣ–ವರ್ಗ ಭೇದವಿಲ್ಲ’: ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರುಗಳಿಂದ ಪಶ್ಚಿಮ ಬಂಗಾಳದ ಯುವಕರಿಗೆ ಇಷ್ಟಲಿಂಗ ದೀಕ್ಷೆ

Leave a Comment