ಶಿವಮೊಗ್ಗ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಶಿವಮೊಗ್ಗ ಮೆಟ್ರೋ ವತಿಯಿಂದ ನಗರದ ಲಿಟಲ್ ಲಾಡ್ಸ್ ಜೆಸಿ ಸ್ಕೂಲ್‌ನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಸಾಧನೆ ಹಾಗೂ ಸಮಾಜದಲ್ಲಿನ ಅವರ ಮಹತ್ವದ ಪಾತ್ರವನ್ನು ಗೌರವಿಸುವ ಉದ್ದೇಶದಿಂದ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪ್ರಗತಿಪರ ರೈತ ಮಹಿಳೆಗೆ ಗೌರವ
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪ್ರಗತಿಪರ ರೈತ ಮಹಿಳೆ ದುಮ್ಮಳ್ಳಿ ಶಿವಮ್ಮ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದರಿಂದ ಕಾರ್ಯಕ್ರಮದಲ್ಲಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಾವಯುವ ಕೃಷಿ ಹಾಗೂ ಮಹಿಳೆಯರ ಪಾತ್ರದ ಕುರಿತು ಶಿವಮ್ಮ ಸಲಹೆ
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿಪರ ರೈತ ಮಹಿಳೆ ದುಮ್ಮಳ್ಳಿ ಶಿವಮ್ಮ ಅವರು ಸಣ್ಣ ಜಾಗದಲ್ಲಿಯೇ ಸಾವಯುವ ಕೃಷಿ ಪದ್ಧತಿಯನ್ನು ಅನುಸರಿಸಿ ಸೊಪ್ಪು ಹಾಗೂ ತರಕಾರಿಗಳನ್ನು ಬೆಳೆಯುವ ಸಾಧ್ಯತೆಗಳ ಬಗ್ಗೆ ಪೋಷಕರಿಗೆ ಸಲಹೆ ನೀಡಿದರು. ಮಕ್ಕಳಲ್ಲಿ ಕೃಷಿ ಜ್ಞಾನ ಬೆಳೆಸುವುದು ಅಗತ್ಯವಾಗಿದ್ದು, ಅವರನ್ನು ಬಾಲ್ಯದಿಂದಲೇ ಕೃಷಿಯ ಮಹತ್ವದ ಬಗ್ಗೆ ತಿಳಿಸುವುದು ಮುಖ್ಯ ಎಂದು ಹೇಳಿದರು. ಮಹಿಳೆಯರು ಸಮಾಜದ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದ ಅವರು, ಜೆಸಿಐ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ಕೃಷಿ ಸಂಬಂಧಿತ ಮಾಹಿತಿಯನ್ನು ನೀಡುವ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಾಗಿ ಆಯೋಜಿಸಬೇಕೆಂದು ಸಲಹೆ ನೀಡಿದರು.

ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ಮಹಿಳೆಯರು ಮುಂದುವರಿಯಲಿ: ಅರ್ಚನಾ ಬಳ್ಳೇಕೆರೆ
ಅರ್ಚನಾ ಬಳ್ಳೇಕೆರೆ ಅವರು ಮಾತನಾಡಿ, ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಲಭ್ಯವಿರುವ ವಿವಿಧ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು ಎಂದು ಹೇಳಿದರು. ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರು ಆತ್ಮವಿಶ್ವಾಸದಿಂದ ಮುಂದುವರಿಯುವುದು ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ–ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆ ಅಗತ್ಯ: ಅನಿತಾ ರವಿಶಂಕರ್
ಅನಿತಾ ರವಿಶಂಕರ್ ಅವರು ಮಾತನಾಡಿ, ಮಹಿಳೆಯರು ಕೇವಲ ಕುಟುಂಬ ಮತ್ತು ಸಂಸಾರಕ್ಕೆ ಮಾತ್ರ ಸೀಮಿತರಾಗದೆ ರಾಜಕೀಯ, ಸಾಮಾಜಿಕ ಹಾಗೂ ಇತರ ಸಾರ್ವಜನಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಮಹಿಳೆಯರ ಭಾಗವಹಿಸುವಿಕೆ ಸಮಾಜದ ಸಮಗ್ರ ಅಭಿವೃದ್ಧಿಗೆ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.


ಪೋಷಕರಿಗೆ ವೈವಿಧ್ಯಮಯ ಸ್ಪರ್ಧೆಗಳು
ಮಹಿಳಾ ದಿನಾಚರಣೆಯ ಅಂಗವಾಗಿ ಪೋಷಕರಿಗೆ ರಂಗೋಲಿ ಸ್ಪರ್ಧೆ, “ರಿಂಗ್ ಆನ್ ದ ನಂಬರ್” ಹಾಗೂ ಫ್ಯಾಶನ್ ಶೋ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪೋಷಕರು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಗಳ ಮೂಲಕ ಮಹಿಳೆಯರ ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜೆಸಿಐ ಶಿವಮೊಗ್ಗ ಮೆಟ್ರೋ ಅಧ್ಯಕ್ಷ ಏಕಾಂತ್ ಪಿ, ಕಾರ್ಯದರ್ಶಿ ನವೀನ್ ವಾರದ್, ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ವಸುಮತಿ ಸೇರಿದಂತೆ ರಮೇಶ್ ತೇಜಕುಮಾರ್, ಪ್ರಿಯಾ, ಪ್ರಜ್ಞ ಹಾಗೂ ಶಾಲೆಯ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.







