ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಗುರುತು ಮೂಡಿಸಿದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ಶಿವಮೊಗ್ಗ ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡುವ ಕಾರ್ಯಕ್ರಮ ಮಾರ್ಚ್ 14ರಂದು ನಡೆಯಲಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಗೋಪಾಲಗೌಡ ಬಡಾವಣೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬಡವರ ಬಂಧುವಾಗಿ ಜನಮನ ಗೆದ್ದ ಎಸ್. ಬಂಗಾರಪ್ಪ
ಬಡವರ ಪರವಾದ ಜನಪರ ಆಡಳಿತ ಮತ್ತು ಸರಳ ವ್ಯಕ್ತಿತ್ವದಿಂದ ಜನಮನ ಗೆದ್ದಿದ್ದ ಎಸ್. ಬಂಗಾರಪ್ಪ ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜರಾಮರ ನಾಯಕರೆಂದು ಗುರುತಿಸಿ ಕೊಂಡಿದ್ದಾರೆ. ಸಾಮಾನ್ಯ ಜನರ ಕಷ್ಟಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು ‘ಬಡವರ ಬಂಧು’ ಎಂಬ ಹೆಸರಿನಿಂದಲೇ ಜನಮನದಲ್ಲಿ ಸ್ಥಾನ ಪಡೆದಿದ್ದರು. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನರೊಂದಿಗೆ ಅವರ ಹೊಂದಾಣಿಕೆ ಹಾಗೂ ಸಮಾಜವಾದಿ ಚಿಂತನೆಗಳು ಇಂದಿಗೂ ಜನರ ನೆನಪಿನಲ್ಲಿ ಉಳಿದಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪ ಹೆಸರಿಗೆ ವಿಶೇಷ ಪ್ರಭಾವ
ಶಿವಮೊಗ್ಗ ಜಿಲ್ಲೆ ಸಮಾಜವಾದಿ ಚಿಂತನೆಯ ನೆಲೆಯಾಗಿದ್ದು, ಇಲ್ಲಿ ಬಂಗಾರಪ್ಪ ಎಂಬ ಹೆಸರಿಗೇ ವಿಶೇಷವಾದ ಪ್ರಭಾವವಿದೆ. ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಸದಾ ಜನರ ಮಧ್ಯೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜನಸಾಮಾನ್ಯರ ನಾಯಕರೆಂದು ಬಂಗಾರಪ್ಪ ಅವರು ಖ್ಯಾತರಾಗಿದ್ದರು.

ಆಲ್ಕೊಳ ಸರ್ಕಲ್‌ನಿಂದ ಡಿ.ವಿ.ಜಿ. ವೃತ್ತದವರೆಗೆ ‘ಎಸ್. ಬಂಗಾರಪ್ಪ ರಸ್ತೆ’
ರಾಜ್ಯ ಸರ್ಕಾರ ಈ ಹಿಂದೆಯೇ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್‌ನಿಂದ ಗೋಪಾಲಗೌಡ ಬಡಾವಣೆಯ ಡಿ.ವಿ.ಜಿ. ವೃತ್ತದವರೆಗೆ ಇರುವ ನೂರು ಅಡಿ ದ್ವಿಪಥ ರಸ್ತೆಗೆ ‘ಎಸ್. ಬಂಗಾರಪ್ಪ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. ಇದರ ನಾಮಫಲಕವನ್ನು ಮಾರ್ಚ್ 14ರಂದು ಬೆಳಿಗ್ಗೆ 11 ಗಂಟೆಗೆ ಗೋಪಾಲಗೌಡ ಬಡಾವಣೆಯಲ್ಲಿ ಅನಾವರಣಗೊಳಿಸಲಾಗುತ್ತದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ತಿಳಿಸಿದೆ.
“ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ಶರಣರ ನುಡಿಯಂತೆ ಸಾರೇಕೊಪ್ಪದ ಬಂಗಾರಪ್ಪ ಅವರ ಹೆಸರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಜಾರಿಗೆ ತಂದಿದ್ದ ಆಶ್ರಯ ಯೋಜನೆ, ಆರಾಧನಾ ಯೋಜನೆ, ವಿಶ್ವ ಯೋಜನೆ, ಗ್ರಾಮೀಣ ಕೃಪಾಂಕ ಯೋಜನೆ ಹಾಗೂ ರೈತರಿಗೆ ಉಚಿತ ವಿದ್ಯುತ್ ಯೋಜನೆಗಳು ಇಂದಿಗೂ ರಾಜ್ಯದಲ್ಲಿ ಮುಂದುವರಿಯುತ್ತಿರುವುದು ಅವರ ದೂರದೃಷ್ಟಿಯ ಆಡಳಿತಕ್ಕೆ ಸಾಕ್ಷಿಯಾಗಿದೆ.
ಬಗರ್ ಹುಕುಂ ಹೋರಾಟಗಾರರಿಗೆ ಹಕ್ಕುಪತ್ರ ತಂದುಕೊಟ್ಟ ನಾಯಕ
ಬಗರ್ ಹುಕುಂ ಹೋರಾಟಗಾರರ ಪರವಾಗಿ ಬಂಗಾರಪ್ಪ ಅವರು ನಡೆಸಿದ ಹೋರಾಟದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ತಮ್ಮ ಉಳುವ ಭೂಮಿಗೆ ಹಕ್ಕುಪತ್ರ ಪಡೆಯುವಂತಾಯಿತು. ರೈತರ ಮತ್ತು ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲು ಅವರು ಕೈಗೊಂಡ ಹಲವು ಕ್ರಮಗಳು ಜಿಲ್ಲೆಯ ಅಭಿವೃದ್ಧಿಗೆ ದಿಕ್ಕು ತೋರಿಸಿದವು.
ನೀರಾವರಿ ಯೋಜನೆಗಳು ಮತ್ತು ಮೆಗ್ಗಾನ್ ಆಸ್ಪತ್ರೆ ಅಭಿವೃದ್ಧಿಗೆ ಕೊಡುಗೆ
ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ಮೆಗ್ಗಾನ್ ಆಸ್ಪತ್ರೆಯ ಅಭಿವೃದ್ಧಿಯಲ್ಲೂ ಅವರ ಮಹತ್ವದ ಕೊಡುಗೆ ಇದೆ. ತುಂಗಾ ಏತ ನೀರಾವರಿ ಯೋಜನೆ, ಬಯಲುನಾಡಿಗೆ ನೀರು ಒದಗಿಸುವ ತುಂಗಾ ಮೇಲ್ದಂಡೆ ಯೋಜನೆಗಳಿಗೆ ಅವರ ಆಡಳಿತಾವಧಿಯಲ್ಲೇ ಅಡಿಗಲ್ಲು ಹಾಕಲಾಗಿತ್ತು. ಇಂದಿನ ದಿನಗಳಲ್ಲಿ ಆ ಯೋಜನೆಗಳು ಸಾವಿರಾರು ರೈತರ ಹೊಲಗಳನ್ನು ಹಸಿರಾಗಿಸುತ್ತಿವೆ.

ಗಾಜನೂರು ಜಲಾಶಯದಿಂದ ನಗರಕ್ಕೆ ನೀರು ತಂದ ಸಾಧನೆ
ಶಿವಮೊಗ್ಗ ನಗರಕ್ಕೆ ಗಾಜನೂರು ಜಲಾಶಯದಿಂದ ಕುಡಿಯುವ ನೀರು ತರಲು ಮಾಡಿದ ಪ್ರಯತ್ನಗಳೂ ಬಂಗಾರಪ್ಪ ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಸೂರಿಲ್ಲದವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿ ಬಡವರಿಗೆ ಬದುಕಿನ ಭರವಸೆ ನೀಡಿದ ನಾಯಕರೆಂದು ಅವರು ಪ್ರಸಿದ್ಧರಾಗಿದ್ದರು.
ಇಂತಹ ಜನಪರ ನಾಯಕನ ಹೆಸರನ್ನು ಶಿವಮೊಗ್ಗ ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಈ ನಿರ್ಧಾರಕ್ಕೆ ಬಂಗಾರಪ್ಪ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಸಾರ್ವಜನಿಕರು ರಾಜ್ಯ ಸರ್ಕಾರ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾರ್ಚ್ 14ರಂದು ನಡೆಯುವ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸ್ಥಳೀಯ ಶಾಸಕರು, ಸಂಸದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜನಪರ ರಾಜಕಾರಣ ನಡೆಸಿ ಜನರ ಹೃದಯದಲ್ಲಿ ಮನೆ ಮಾಡಿದ್ದ ಮಾಸ್ ಲೀಡರ್ ಎಸ್. ಬಂಗಾರಪ್ಪ ಅವರ ಹೆಸರನ್ನು ಪ್ರಮುಖ ರಸ್ತೆಗೆ ನಾಮಕರಣ ಮಾಡುವ ಈ ಕಾರ್ಯಕ್ರಮ ಶಿವಮೊಗ್ಗ ನಗರದ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಲಿದೆ.







