ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಒಳ ಮೀಸಲಾತಿ ಗೊಂದಲ ತಕ್ಷಣ ಸರಿಪಡಿಸಲಿ ಸರ್ಕಾರ: ಬಸವರಾಜ ಬೊಮ್ಮಾಯಿ ಆಗ್ರಹ

On: March 13, 2026 6:11 PM
Follow Us:

ಬೆಂಗಳೂರು: ರಾಜ್ಯ ಸರ್ಕಾರವು ಒಳ ಮೀಸಲಾತಿ ಸಂಬಂಧ ಉಂಟಾಗಿರುವ ಗೊಂದಲವನ್ನು ತಕ್ಷಣವೇ ನಿವಾರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಶೇ.56 ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ವಿಷಯದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಬಿಜೆಪಿ ಸಿದ್ಧವಿದ್ದು, ಸರ್ಕಾರದ ಸ್ಪಷ್ಟ ನಿರ್ಧಾರಕ್ಕಾಗಿ ಕಾದು ನೋಡುತ್ತಿದ್ದೇವೆ ಎಂದರು.

ಇತ್ತೀಚೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಾರ್ಚ್ 27ರಂದು ಒಳ ಮೀಸಲಾತಿ ಕುರಿತು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ. ಆ ಸಭೆಯ ನಿರ್ಣಯವನ್ನು ಕಾದು ನೋಡುತ್ತೇವೆ. ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಸಂಬಂಧಿಸಿದ ಸಮುದಾಯಗಳು ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಈಗಾಗಲೇ ಈ ವಿಷಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿರುವುದನ್ನೂ ಅವರು ಉಲ್ಲೇಖಿಸಿದರು.

ಕರ್ನಾಟಕದಲ್ಲಿ ಕಾನೂನುಬದ್ಧವಾಗಿ ಶೇ.56 ಒಳ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿದ್ದು, ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅದು ಅನುಷ್ಠಾನದಲ್ಲಿದೆ. ಎಂಜಿನಿಯರಿಂಗ್, ಎಂಬಿಬಿಎಸ್ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ಗಳಲ್ಲಿ ಒಳ ಮೀಸಲಾತಿ ನೀಡಲಾಗಿದೆ. ಆದರೆ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಅದನ್ನು ಸರಿಯಾಗಿ ಜಾರಿಗೆ ತರಲು ವಿಳಂಬವಾಗುತ್ತಿದೆ ಎಂದು ಅವರು ಟೀಕಿಸಿದರು.

ಸರ್ಕಾರದ ವಕೀಲರು ನ್ಯಾಯಾಲಯದಲ್ಲಿ ಈ ವಿಷಯವನ್ನು ದೃಢವಾಗಿ ಮಂಡಿಸಲು ಸಿದ್ಧರಾಗಿಲ್ಲ ಎಂಬುದು ವಿಷಾದಕರ ಸಂಗತಿ. ಸುಪ್ರೀಂ ಕೋರ್ಟ್ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿದ ಶಿಫಾರಸುಗಳನ್ನು ಪರಿಗಣಿಸಿ ಶೇ.56 ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಲವು ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಬೊಮ್ಮಾಯಿ ಹೇಳಿದರು. ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಮನೆ, ಊರು, ಮಠ ಯಾವುದೂ ಇಲ್ಲದೆ ಕಾಡಿನಲ್ಲಿ ವಾಸಿಸುವ ಈ ಸಮುದಾಯಗಳನ್ನು ಕೈಬಿಡುವುದು ಸರಿಯಲ್ಲ. ಅವರು ಸಂಘಟಿತರಲ್ಲವೆಂದು ಅವರ ಮೇಲೆ ಅನ್ಯಾಯ ಮಾಡಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಒಳ ಮೀಸಲಾತಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳದ ಬೇಡಿಕೆಗಾಗಿ ದೊಡ್ಡ ಹೋರಾಟಗಳು ನಡೆದಿದ್ದವು ಎಂದು ಅವರು ನೆನಪಿಸಿದರು. ಹಲವು ಸ್ವಾಮೀಜಿಗಳು ಸಹ ಈ ವಿಷಯದಲ್ಲಿ ಒತ್ತಡ ತಂದಿದ್ದರು. ಕೆಲವರು ಪಾದಯಾತ್ರೆಯನ್ನೂ ನಡೆಸಿದ್ದರು. ಆದರೆ ಅಹಿಂದ ಪರವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಜೀವನದಲ್ಲಿ ದೀರ್ಘಕಾಲಿಕ ಬದಲಾವಣೆ ತರಬಹುದಾದ ಯೋಜನೆಗಳನ್ನು ರೂಪಿಸಿಲ್ಲ ಎಂದು ಅವರು ಆರೋಪಿಸಿದರು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸುತ್ತಿದೆ ಎಂದು ಅವರು ದೂರಿದರು. ಸುಮಾರು 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಅನ್ಯ ಉದ್ದೇಶಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಿಂತ ದೊಡ್ಡ ಅನ್ಯಾಯ ಮತ್ತೊಂದಿಲ್ಲ ಎಂದು ಅವರು ಟೀಕಿಸಿದರು.

ಹಿಂದಿನ ಬಜೆಟ್‌ನಲ್ಲಿ ಒಬಿಸಿ ಸಮುದಾಯಕ್ಕಾಗಿ ಮೀಸಲಾದ 441 ಕೋಟಿ ರೂಪಾಯಿ ಅನುದಾನವನ್ನು ಜಾತಿ ಗಣತಿಗೆ ಬಳಸಲಾಗಿದೆ. ಜಾತಿ ಗಣತಿ ಕೇವಲ ಹಿಂದುಳಿದ ವರ್ಗಗಳಿಗಷ್ಟೇ ಸೀಮಿತವಲ್ಲ. ಎಲ್ಲಾ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕಾಗಿ ಅದು ನಡೆಯುತ್ತಿದೆ. ಹಾಗಿದ್ದರೆ ಆ ಹಣವನ್ನು ರಾಜ್ಯದ ಸಾಮಾನ್ಯ ಬಜೆಟ್‌ನಿಂದಲೇ ನೀಡಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.

ನಿಗಮಗಳಿಗೆ ಮೀಸಲಾದ ಅನುದಾನವನ್ನು ಸರಿಯಾಗಿ ಬಳಸಲಾಗುತ್ತಿಲ್ಲ ಎಂದು ಎಸ್‌ಸಿ ಮತ್ತು ಎಸ್‌ಟಿ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಅನುಕೂಲ ನೀಡಿಲ್ಲ ಎಂಬ ದೂರುಗಳು ಬಂದಿವೆ. ಈ ರೀತಿಯ ಮನೋಭಾವದಿಂದಲೇ ಈಗ ಒಳ ಮೀಸಲಾತಿ ವಿಷಯದಲ್ಲಿಯೂ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ಅವರು ಆಕ್ಷೇಪಿಸಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದಾಗ ಅದನ್ನು ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ನಾವು ನವೆಂಬರ್ ತಿಂಗಳಲ್ಲೇ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೆವು. ಚುನಾವಣೆಯು ಏಪ್ರಿಲ್-ಮೇ ತಿಂಗಳಲ್ಲಿ ನಡೆದಿತ್ತು. ನಮ್ಮ ಕ್ರಮ ಸಂಪೂರ್ಣ ಸಂವಿಧಾನಬದ್ಧವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಜನಸಂಖ್ಯೆಯ ಪ್ರಮಾಣದ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೇಳಿದ್ದರು. 2011ರ ಜನಗಣತಿ ಆಧಾರದ ಮೇಲೆ ವಿವಿಧ ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಹೋರಾಟ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಲಾಗಿತ್ತು ಎಂದು ಅವರು ವಿವರಿಸಿದರು.

ಸಮಿತಿ ವರದಿ ಬಂದ ನಂತರ ಅದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲಾಗಿತ್ತು. ಎಲ್ಲಾ ರಾಜಕೀಯ ಪಕ್ಷಗಳ ಸಭೆ ನಡೆಸಿ, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಕಾನೂನು ಅಂಗೀಕರಿಸಿ, ರಾಜ್ಯಪಾಲರ ಅಂಕಿತ ಪಡೆದು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದು ಅವರು ತಿಳಿಸಿದರು. ಆ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೂಡ ಭಾಗವಹಿಸಿದ್ದರು ಎಂದರು.

ನಂತರ ಸುಪ್ರೀಂ ಕೋರ್ಟ್ ತೀರ್ಪು ಕೂಡ ನಮ್ಮ ನಿಲುವಿಗೆ ಬೆಂಬಲ ನೀಡಿದೆ. ಆದರೆ ಈಗಿನ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಗೊಂದಲ ಸೃಷ್ಟಿಸಿದೆ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿದರೂ ಅದರ ಶಿಫಾರಸುಗಳನ್ನು ಕೂಡ ಸರ್ಕಾರ ಜಾರಿಗೆ ತರಲಿಲ್ಲ ಎಂದು ಅವರು ಆರೋಪಿಸಿದರು.

ಕ್ಯಾಬಿನೆಟ್‌ನಲ್ಲಿ ಕೇವಲ ಮೌಖಿಕ ನಿರ್ಧಾರ ತೆಗೆದುಕೊಂಡು ಕೆಲವು ಮೀಸಲಾತಿ ಘೋಷಣೆ ಮಾಡಲಾಗಿದೆ. ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂಬುದು ಅವರಿಗೆ ಗೊತ್ತಿದ್ದರೂ ಅದೇ ದಾರಿಯನ್ನು ಹಿಡಿದಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.

ಒಳ ಮೀಸಲಾತಿ ವಿರೋಧಿ ಗುಂಪಿನ ಒತ್ತಡಕ್ಕೆ ಸಿಎಂ ಮಣಿದಿದ್ದಾರೆ

ಸರ್ಕಾರದೊಳಗೆ ಒಳ ಮೀಸಲಾತಿ ವಿಷಯದಲ್ಲಿ ಪರ-ವಿರೋಧದ ಎರಡು ಗುಂಪುಗಳಿವೆ. ಒಂದು ಗುಂಪು ಒಳ ಮೀಸಲಾತಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ವಿರೋಧಿ ಗುಂಪಿನ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಇದೇ ಕಾರಣದಿಂದ ಸರ್ಕಾರ ಸ್ಪಷ್ಟತೆ ನೀಡದೆ ಗೊಂದಲ ಸೃಷ್ಟಿಸುತ್ತಿದೆ. ಸಚಿವ ಮುನಿಯಪ್ಪ ಸೇರಿದಂತೆ ಕೆಲವರು ಒತ್ತಡ ತಂದ ಹಿನ್ನೆಲೆಯಲ್ಲಿ ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸರ್ಕಾರ ಈಗಾಗಲೇ 54 ಸಾವಿರ ಹುದ್ದೆಗಳ ಭರ್ತಿಗೆ ಆದೇಶ ನೀಡಿದೆ. ಆದರೆ ಒಳ ಮೀಸಲಾತಿ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚೌಹಾಣ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೆಚ್. ಹನುಮಂತಪ್ಪ ಬಳ್ಳಾರಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment