ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಧರ್ಮ ಮೌಲ್ಯಗಳನ್ನು ಮೀರಿದ ಸ್ವಾರ್ಥದ ಮನೋಭಾವ ಸಮಾಜಕ್ಕೆ ಅಪಾಯ: ಶ್ರೀ ತರಳಬಾಳು ಜಗದ್ಗುರು

On: March 15, 2026 10:00 PM
Follow Us:

ತಿಪಟೂರು: ಸಮಾಜದಲ್ಲಿ ಧರ್ಮಪ್ರಜ್ಞೆಯನ್ನು ಮೀರಿಸಿ ಸ್ವಾರ್ಥದ ಮನೋಭಾವ ಹೆಚ್ಚುತ್ತಿರುವುದು ಅತ್ಯಂತ ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಕೆ.ಆರ್. ಬಡಾವಣೆ, ಗೋವಿನಪುರ ವೃತ್ತದಲ್ಲಿ ನಿರ್ಮಿಸಲಾದ ಶಿವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನೈತಿಕ ಮೌಲ್ಯಗಳು ಮತ್ತು ಧಾರ್ಮಿಕ ಜಾಗೃತಿ ಸಮಾಜದಲ್ಲಿ ಗಾಢವಾಗಿ ನೆಲೆಸಿದ್ದವು. ಇನ್ನೊಬ್ಬರ ಋಣದಲ್ಲಿ ಸಾಯಬಾರದು ಎಂಬ ಸಿದ್ಧಾಂತವನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಧರ್ಮಪ್ರಜ್ಞೆಯನ್ನು ಮೀರಿಸುವ ಸ್ವಾರ್ಥದ ಮನೋಭಾವ ಹೆಚ್ಚುತ್ತಿರುವುದು ಸಮಾಜದ ಮೌಲ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಲಿಯುಗದಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಆದರೆ ಸ್ವಾರ್ಥಕ್ಕೆ ಒಳಗಾದ ಮನುಷ್ಯ ಯಾವುದೇ ವಿಚಾರದಲ್ಲೂ ಹಿಂದೆ ಮುಂದೆ ನೋಡದೆ ನಡೆದುಕೊಳ್ಳುವ ಪರಿಸ್ಥಿತಿ ಸಮಾಜದಲ್ಲಿ ಕಾಣಿಸುತ್ತಿದೆ. ಇದು ಮಾನವೀಯ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ “ಆಸ್ತಿಗೆ ಒಬ್ಬ ಮಗ, ಆಸರೆಗೆ ಒಬ್ಬ ಮಗಳು” ಎಂಬ ಮಾತು ಸಮಾಜದಲ್ಲಿ ಪ್ರಚಲಿತದಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಹೆಣ್ಣುಮಕ್ಕಳು ತಂದೆಯ ಆಸ್ತಿಗಾಗಿ ನ್ಯಾಯಾಲಯದ ಮೊರೆ ಹೋಗುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ಸಂಬಂಧಗಳ ಮೌಲ್ಯವನ್ನು ಕುಗ್ಗಿಸುವ ಕ್ರೌರ್ಯ ಮತ್ತು ಅಮಾನವೀಯತೆಯಾಗಿದೆ. ಇಂತಹ ಘಟನೆಗಳಿಂದ ಕುಟುಂಬ ಸಂಬಂಧಗಳಲ್ಲಿ ಬಿರುಕುಗಳು ಉಂಟಾಗಿ, ಬಂಧಗಳು ದೂರವಾಗುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು.

ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧವು ಅತ್ಯಂತ ಅಮೂಲ್ಯವಾದದ್ದು. ಆಸ್ತಿ-ಪಾಸ್ತಿಗಳ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗುವುದಕ್ಕಿಂತ ಕುಟುಂಬದ ಸದಸ್ಯರು ಪರಸ್ಪರ ಕುಳಿತು ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ ಮಾರ್ಗ ಎಂದು ಅವರು ಸಲಹೆ ನೀಡಿದರು.

ಮನುಷ್ಯನ ಜೀವನದಲ್ಲಿ ಮಾನವೀಯ ಸಂಬಂಧಗಳು ಅತ್ಯಂತ ಮಹತ್ವದ್ದಾಗಿವೆ. ಮನುಷ್ಯ ಮತ್ತು ಮನುಷ್ಯರ ನಡುವಿನ ನಂಬಿಕೆ, ಗೌರವ ಮತ್ತು ಸಹಾನುಭೂತಿ ಉಳಿದಾಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ದೊರೆಯುತ್ತದೆ. ಸಮಾಜದಲ್ಲಿ ಸಂಬಂಧಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಪರಸ್ಪರ ಗೌರವ, ಸಹಾನುಭೂತಿ ಮತ್ತು ವಿಶ್ವಾಸದಿಂದ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕಾನೂನು ಮತ್ತು ಧರ್ಮವು ಪರಸ್ಪರ ಸಂಬಂಧ ಹೊಂದಿದ್ದು, ಧರ್ಮದ ಮೂಲ ತತ್ವಗಳೇ ಕಾನೂನಿನಲ್ಲಿ ಅಡಕವಾಗಿವೆ. ಸಮಾಜದಲ್ಲಿ ಶಿಸ್ತು ಮತ್ತು ನ್ಯಾಯ ಸ್ಥಾಪನೆಗೆ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನುಗಳು ಉತ್ತಮ ಉದ್ದೇಶದಿಂದ ರೂಪಿಸಲ್ಪಟ್ಟಿದ್ದರೂ, ಅವುಗಳನ್ನು ತಪ್ಪಿಸುವ ಮಾರ್ಗಗಳನ್ನು ಹುಡುಕುವ ಮನೋಭಾವ ಕೆಲವರಲ್ಲಿ ಕಾಣಿಸುತ್ತಿರುವುದು ದುಃಖಕರ ಸಂಗತಿಯಾಗಿದೆ. ಕಾನೂನನ್ನು ಗೌರವಿಸಿ ಅದರ ಪಾಲನೆ ಮಾಡುವ ಮನೋಭಾವ ಸಮಾಜದಲ್ಲಿ ಬೆಳೆಸಬೇಕು ಎಂದು ಜಗದ್ಗುರುಗಳು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಬಿ. ಆನಂದಮೂರ್ತಿ, ಸಹಕಾರ ಸಂಘಗಳು ಸಮಾಜದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿವೆ ಎಂದು ಹೇಳಿದರು. ಸಾಮಾನ್ಯ ಜನರು ಪರಸ್ಪರ ಸಹಕಾರದ ಮೂಲಕ ತಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ. ಸದಸ್ಯರ ಉಳಿತಾಯವನ್ನು ಉತ್ತೇಜಿಸುವುದರ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸಲು ಸಹಕಾರ ಸಂಘಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಪಿ.ಬಿ. ನಂಜುಡಪ್ಪ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಈಶ್ವರಪ್ಪ ಬೈರನಾಯಕನಹಳ್ಳಿ, ಗಿರೀಶ್ ಮತ್ತಿಹಳ್ಳಿ, ನವೀನ್ ಕುಮಾರ್ ಹಾಲ್ಕುರಿಕೆ, ಈಶ್ವರಪ್ಪ ಎಂ.ಸಿ. ಮತ್ತಿಹಳ್ಳಿ, ಬಸವರಾಜು ಪಟ್ರೇಹಳ್ಳಿ, ಭವ್ಯ ಸೂರಗೊಂಡನಹಳ್ಳಿ, ಲೋಲಾಕ್ಷಮ್ಮ, ಓಂಕಾರಮೂರ್ತಿ ಕರೀಕೆರೆ, ಕಾರ್ಯದರ್ಶಿ ದಿವಾಕರ್, ಸಿಬ್ಬಂದಿಗಳಾದ ಟಿ.ಆರ್. ರಮೇಶ್, ಪುಟ್ಟೇಗೌಡ, ಮಾಜಿ ಅಧ್ಯಕ್ಷರಾದ ರಾಜಶೇಖರ್, ಸೋಮಶೇಖರ್, ರೇಣುಕಮ್ಮ, ಲಿಂಗರಾಜು, ದಿನೇಶ್, ನಾಗರಾಜು, ಗಂಗಾಧರ್, ನಗರಸಭೆಯ ಮಾಜಿ ಸದಸ್ಯ ಪ್ರಸನ್ನಕುಮಾರ್, ಯೋಗೀಶ್, ಮನೋಹರ್, ವಿಜಯ್, ಹರೀಶ್, ನಂಜುಡಪ್ಪ, ಬಸವರಾಜು, ಚಂದ್ರಶೇಖರ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಸಂಘದ ಷೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment