ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆ: ಗಾಳಿ–ಧೂಳಿನ ಅಟ್ಟಹಾಸ, ಸಂಚಾರ ಅಸ್ತವ್ಯಸ್ತ – ಯುಗಾದಿ ವ್ಯಾಪಾರಕ್ಕೆ ಹೊಡೆತ

On: March 18, 2026 7:34 PM
Follow Us:

ಶಿವಮೊಗ್ಗ: ಯುಗಾದಿ ಹಬ್ಬದ ಸಂಭ್ರಮದ ಮಧ್ಯೆಯೇ ನಗರದಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆ ಸುರಿದು ವ್ಯಾಪಕ ಅವಾಂತರ ಸೃಷ್ಟಿಸಿದೆ. ಮಧ್ಯಾಹ್ನದ ಬಳಿಕ ಆಕಸ್ಮಿಕವಾಗಿ ಹವಾಮಾನ ಬದಲಾಗಿದ್ದು, ಮೊದಲಿಗೆ ಬಿರುಗಾಳಿ ಬೀಸಿದ ಪರಿಣಾಮ ನಗರದೆಲ್ಲೆಡೆ ಧೂಳು ಎದ್ದುಕೊಂಡು ವಾತಾವರಣ ಮಸುಕಾಗಿತ್ತು. ನಂತರ ಸುರಿದ ಮಳೆಯೊಂದಿಗೆ ಕೆಲವೆಡೆ ಆಲಿಕಲ್ಲುಗಳೂ ಸುರಿದು ಜನರಲ್ಲಿ ಆತಂಕ ಉಂಟುಮಾಡಿತು.

ಬಿರುಗಾಳಿಯ ತೀವ್ರತೆಗೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ರಸ್ತೆಗಳಲ್ಲಿ ಕೊಂಬೆಗಳು ಹರಡಿಕೊಂಡ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರಮುಖ ರಸ್ತೆಗಳಲ್ಲಿಯೂ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸಿದರು. ಕೆಲವು ವಾಹನಗಳಿಗೆ ಹಾನಿಯೂ ವರದಿಯಾಗಿದೆ.

ವಿನೋಬ ನಗರದ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಗಾಳಿಯ ಅಬ್ಬರಕ್ಕೆ ತಗಡಿನ ಶೀಟುಗಳು ಹಾರಿ ಬಂದು ಮರಗಳಿಗೆ ನೇತಾಡಿದ ದೃಶ್ಯ ಕಂಡುಬಂದಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಯಿತು. ಹಲವೆಡೆ ಮರದ ಕೊಂಬೆಗಳು ಬಿದ್ದು ರಸ್ತೆ ತಡೆಗೊಂಡ ಘಟನೆಗಳೂ ಸಂಭವಿಸಿವೆ.

ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಮೂರು ರಸ್ತೆಗಳಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದ್ದಾರೆ. ಎ ಬ್ಲಾಕ್‌ನಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಗೃಹೋಪಯೋಗಿ ವಸ್ತುಗಳನ್ನು ರಕ್ಷಿಸಲು ಹರಸಾಹಸಪಟ್ಟರು.

ಬಿರುಗಾಳಿಯ ರಭಸಕ್ಕೆ ಹಲವೆಡೆ ಮನೆಗಳ ಚಾವಣಿಗಳು ಹಾರಿಹೋಗಿದ್ದು, ನ್ಯೂ ಮಂಡ್ಲಿ ಪ್ರದೇಶದಲ್ಲಿ ಈಶ್ವರಪ್ಪ ಎಂಬುವವರ ಮನೆಗೆ ಹಾನಿಯಾಗಿದೆ. ಹೆಂಚುಗಳು ಹಾರಿದ ಪರಿಣಾಮ ಮನೆಯೊಳಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಜೈಲ್ ರಸ್ತೆಯ ಪ್ರಮುಖ ಭಾಗಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಯಿತು. ನಗರದ ಹಲವೆಡೆ ಇದೇ ರೀತಿಯ ಸ್ಥಿತಿ ಕಂಡುಬಂದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಯುಗಾದಿ ಹಬ್ಬದ ಮುನ್ನ ಸಜ್ಜಾಗಿದ್ದ ಹೂವು, ಹಣ್ಣು, ತರಕಾರಿ ಹಾಗೂ ಹಬ್ಬದ ಸಾಮಗ್ರಿಗಳ ವ್ಯಾಪಾರಿಗಳಿಗೆ ಈ ಮಳೆ ದೊಡ್ಡ ಹೊಡೆತ ನೀಡಿದೆ. ರಸ್ತೆಬದಿ ಅಂಗಡಿಗಳು ಹಾಗೂ ತಾತ್ಕಾಲಿಕ ಮಳಿಗೆಗಳಿಗೆ ನೀರು ನುಗ್ಗಿ ವ್ಯಾಪಾರ ಕುಂಠಿತಗೊಂಡಿದೆ. ಖರೀದಿಗೆ ಬಂದ ಜನರೂ ಮಳೆಯ ಸಮಸ್ಯೆಯಿಂದ ವ್ಯಾಪಾರದಲ್ಲಿ ಕುಸಿತ ಕಂಡುಬಂದಿದೆ.

ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಮನೆಮಠಗಳು ಹಾಗೂ ವ್ಯಾಪಾರ ವಲಯಗಳಲ್ಲಿ ಅಡಚಣೆ ಎದುರಾಗಿದೆ. ಸಂಬಂಧಿತ ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿದ್ದು, ಶೀಘ್ರದಲ್ಲೇ ಪೂರೈಕೆ ಪುನಃಸ್ಥಾಪನೆಯ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ಯುಗಾದಿ ಹಬ್ಬದ ಮುನ್ನವೇ ಬಂದ ಈ ಆಲಿಕಲ್ಲು ಮಳೆ ಶಿವಮೊಗ್ಗ ನಗರದ ಜನಜೀವನ, ಸಂಚಾರ ಮತ್ತು ವ್ಯಾಪಾರ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

K.M.Sathish Gowda

Join WhatsApp

Join Now

Facebook

Join Now

Read more

ಸಾವಿನ ಬಲೆ ಹೆಣೆಯುತ್ತಿರುವ ಕೇಬಲ್‌ಗಳು: ವಿದ್ಯುತ್ ಇಲಾಖೆ–ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಕೋಟೆ ರಸ್ತೆಯಲ್ಲಿ ಹಸು ಬಲಿ; ನಗರದ ವಿದ್ಯುತ್ ಕಂಬಗಳಲ್ಲೇ ಸಾಕ್ಷಾತ್ ಯಮನ ದರ್ಶನ!

ಸಮಾಜಮುಖಿ ಸೇವೆಯಲ್ಲಿ ಶಿವಮೊಗ್ಗ ಸರ್ವೋದಯ ಮಂಡಳಿ ರಾಜ್ಯಕ್ಕೆ ಮಾದರಿ: ಡಾ. ಎಚ್.ಎಸ್. ಸುರೇಶ್

​ವಿದ್ಯೆಯ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಂದಿನ ತುರ್ತು ಅಗತ್ಯ; ಸಿದ್ಧಗಂಗಾ ಶ್ರೀಗಳ ದಾಸೋಹ ಪರಂಪರೆಯೇ ನಮಗೆ ಪ್ರೇರಣೆ: ಸಿ.ಎಸ್. ಷಡಾಕ್ಷರಿ

ಶಿವಮೊಗ್ಗದ ನೀರಾವರಿ ಯೋಜನೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಿ; ರೈತರ ಹಿತಕ್ಕೆ ಆದ್ಯತೆ ನೀಡಿ: ಸಚಿವ ರಾಮಲಿಂಗಾರೆಡ್ಡಿಗೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

‘ಎಂಪಿ, ಎಂಎಲ್‌ಎ ಆಗುವುದಕ್ಕಿಂತ ನೌಕರರ ವಿಶ್ವಾಸ ಗಳಿಸುವುದೇ ದೊಡ್ಡ ಸಾಧನೆ’: ಸಿ.ಎಸ್. ಷಡಾಕ್ಷರಿ ಕಾರ್ಯವೈಖರಿಗೆ ಸಂಸದ ಬಿ.ವೈ. ರಾಘವೇಂದ್ರ ಮೆಚ್ಚುಗೆ

ಜರ್ಮನಿಯಲ್ಲೂ ಶರಣ ಸಂಸ್ಕೃತಿಯ ವೈಭವ: “ವಿದೇಶದಲ್ಲೂ ತಾಯ್ನಾಡಿನ ಸಂಸ್ಕಾರ ಉಳಿಸಿಕೊಳ್ಳುವುದೇ ನಿಜವಾದ ಧರ್ಮನಿಷ್ಠೆ” – ಮ್ಯೂನಿಚ್‌ನಲ್ಲಿ ತರಳಬಾಳು ಶ್ರೀಗಳ ಜಾಗತಿಕ ಕರೆ

Leave a Comment