ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮೊದಲ ಮಳೆಗೆ ತತ್ತರಿಸಿದ ಶಿವಮೊಗ್ಗ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಲೂಟಿ?: ಆಡಳಿತದ ನಿಜ ಮುಖ ಬಯಲು – ಅವ್ಯವಸ್ಥೆಗೆ ಜನರ ಆಕ್ರೋಶ,.!

On: March 19, 2026 9:19 PM
Follow Us:

ಶಿವಮೊಗ್ಗ: ಮಲೆನಾಡಿನ ಪ್ರಮುಖ ನಗರವಾಗಿರುವ ಶಿವಮೊಗ್ಗದಲ್ಲಿ ಈ ವರ್ಷದ ಮೊದಲ ಮಳೆಯೇ ಜನಜೀವನವನ್ನು ಬೆಚ್ಚಿಬೀಳಿಸಿದೆ. ಮಳೆ ಬಂತೆಂದರೆ ನಗರದೆಲ್ಲೆಡೆ ರಸ್ತೆಗಳು ಜಲಾವೃತವಾಗುವುದು, ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗುವುದು, ಸಂಚಾರ ಅಸ್ತವ್ಯಸ್ತವಾಗುವುದು ಎಂದರೆ ಇಲ್ಲಿ ಸಾಮಾನ್ಯ ಸಂಗತಿಯೇ ಆಗಿಬಿಟ್ಟಿದೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ಕಳೆದ ಎರಡು ವರ್ಷಗಳಿಂದ ಮಹಾನಗರ ಪಾಲಿಕೆ ಚುನಾವಣೆಯೇ ನಡೆಯದೇ, ಜನಪ್ರತಿನಿಧಿಗಳ ಕೊರತೆಯಿಂದ ಆಡಳಿತ ಸಂಪೂರ್ಣವಾಗಿ ಅಧಿಕಾರಿಗಳ ಕೈಯಲ್ಲಿದೆ. ಇದರಿಂದ ಹೊಣೆಗಾರಿಕೆ ಕಡಿಮೆಯಾಗಿದ್ದು, ಪಾಲಿಕೆಯ ಕಾರ್ಯವೈಖರಿ ಮೇಲೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಅಧಿಕಾರಿಗಳು ಆಡಿದ್ದೇ ಆಟ” ಎಂಬ ಮಾತುಗಳು ಜನರ ನಡುವೆ ಕೇಳಿಬರುತ್ತಿವೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದಿದ್ದರೂ, ಅದರ ಫಲಾನುಭವ ಸಾಮಾನ್ಯ ಜನರಿಗೆ ಸಿಗದೇ ಇರುವುದೇ ದೊಡ್ಡ ಪ್ರಶ್ನೆಯಾಗಿದೆ. ಕೆಲವೊಂದು ರಸ್ತೆಗಳು, ಪಾರ್ಕ್‌ಗಳು ನಿರ್ಮಾಣವಾದರೂ, ಸಮಗ್ರ ನಗರಾಭಿವೃದ್ಧಿ ಕಡೆ ಗಮನ ಹರಿಸಲಾಗಿಲ್ಲ. ಅವೈಜ್ಞಾನಿಕ ಯೋಜನೆಗಳು, ಕಳಪೆ ಕಾಮಗಾರಿಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಜನರಲ್ಲಿ ಅಸಹನೆ ಮೂಡಿಸಿವೆ.

ಮಳೆಗಾಲ ಬಂದಾಗ ಯಾವ ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ವರ್ಷಗಳಿಂದಲೇ ತಿಳಿದಿದ್ದರೂ, ಅದನ್ನು ತಡೆಗಟ್ಟುವ ಯಾವುದೇ ಮುಂಚಿತ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಗಾಂಧೀಬಜಾರ್, ಸಿದ್ದಯ್ಯ ರಸ್ತೆ, ಕುಂಬಾರಗುಂಡಿ, ಕುಂಬಾರ ಬೀದಿ, ಸಿಗೇಹಟ್ಟಿ, ಇಂಜಾಮಮ್ ಬಡಾವಣೆ, ಅಂಗಳಯ್ಯನ ಕೆರೆ, ಇಂದಿರಾನಗರ, ಟ್ಯಾಂಕ್ ಮೋಹಲ್ಲಾ, ಲಕ್ಷ್ಮೀ ಟಾಕೀಸ್ ರಸ್ತೆ, ಜೈಲು ರಸ್ತೆ, ಹೊಸಮನೆ, ವೆಂಕಟೇಶನಗರ, ಗಾಂಧಿನಗರ, ಗೋಪಾಲ ಗೌಡ ಬಡಾವಣೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆ ಬಂದಾಕ್ಷಣವೇ ನೀರು ನಿಂತು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮುಖ್ಯವಾಗಿ ರಾಜಕಾಲುವೆಗಳು ಮತ್ತು ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಸಮಸ್ಯೆಯ ಮೂಲ ಕಾರಣವಾಗಿದೆ. ಹಲವೆಡೆ ಒತ್ತುವರಿ, ಮಣ್ಣು ತುಂಬಿಕೆ, ತ್ಯಾಜ್ಯ ಸಂಗ್ರಹ ಇವುಗಳಿಂದ ನೀರಿನ ಹರಿವು ಅಡ್ಡಿಯಾಗುತ್ತಿದೆ. ಇದನ್ನು ತೆರವುಗೊಳಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ನಿನ್ನೆ ಗುಡುಗು-ಸಿಡಿಲು, ಮಿಂಚು ಸಮೇತ ಸುರಿದ ಆಲಿಕಲ್ಲು ಮಳೆ ನಗರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತು. ಮುಚ್ಚಿದ ಚರಂಡಿಗಳು ಮತ್ತು ರಾಜಕಾಲುವೆಗಳ ಕಾರಣ ಮಳೆನೀರು ಮನೆಗಳಿಗೆ ನುಗ್ಗಿ, ಯುಗಾದಿ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿತು. ಪ್ರತೀ ವರ್ಷ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದರೂ, ಸಮಸ್ಯೆ ಪರಿಹಾರಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಹನೆ ಉಂಟುಮಾಡಿದೆ.

ಮಳೆ ಬಂದಾಗ ಛತ್ರಿ ಹಿಡಿದು ಪರಿಶೀಲನೆ ನಡೆಸುವ ಪ್ರದರ್ಶನ ಮಾತ್ರ ನಡೆಯುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಕ್ರಮಗಳು ಕೈಗೊಳ್ಳಲಾಗುತ್ತಿಲ್ಲ ಎಂಬ ಟೀಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹಲವು ವರ್ಷಗಳಿಂದ ಜನರು ಮನವಿ ಸಲ್ಲಿಸುತ್ತಿದ್ದರೂ, ಅವರ ಕೂಗು ಆಡಳಿತಕ್ಕೆ ಕೇಳಿಸದಿರುವುದು ವಿಷಾದಕರವಾಗಿದೆ.

ಶಿವಮೊಗ್ಗ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಇಲ್ಲಿಂದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಂಸದರು ಆಯ್ಕೆಯಾಗಿದ್ದಾರೆ. ಆದರೂ ನಗರದ ಮೂಲಭೂತ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ವಿಪರ್ಯಾಸವೇ ಸರಿ.

ಇನ್ನಾದರೂ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗ ತಮ್ಮ ಸ್ವಾರ್ಥವನ್ನು ಬಿಟ್ಟು, ನಗರದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಮಳೆಗಾಲಕ್ಕೂ ಮುನ್ನವೇ ಮುಖ್ಯ ರಸ್ತೆಗಳು, ಚರಂಡಿಗಳು ಹಾಗೂ ರಾಜಕಾಲುವೆಗಳನ್ನು ಶುದ್ಧೀಕರಿಸಿ, ನೀರಿನ ಹರಿವು ಸುಗಮಗೊಳಿಸುವಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರತಿ ವರ್ಷ ಮಳೆ ಬಂದಾಗ ಭಯದಲ್ಲಿ ಬದುಕುವ ಪರಿಸ್ಥಿತಿಗೆ ಅಂತ್ಯಕಾಣಿಸುವುದು ಆಡಳಿತದ ಹೊಣೆಗಾರಿಕೆ. ಇಲ್ಲವಾದರೆ ಜನರ ಶಾಪ ಮತ್ತು ಆಕ್ರೋಶ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಪರಿಣಾಮಗಳನ್ನು ಉಂಟುಮಾಡುವುದು ಖಚಿತ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

K.M.Sathish Gowda

Join WhatsApp

Join Now

Facebook

Join Now

Read more

ಯುವಕರು ಸಂಘಟಿತರಾಗಿ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಸಚಿವ ಮಧು ಬಂಗಾರಪ್ಪ

ಧರ್ಮ, ಪರಂಪರೆ ಹಾಗೂ ಮಠಮಾನ್ಯಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ: ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಒಂದಾಗ ಬೇಕು: ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಕಾಪಾಡುವುದು ಎಲ್ಲರ ಜವಾಬ್ದಾರಿ: ಬಿ.ವೈ. ವಿಜಯೇಂದ್ರ

ಭಕ್ತಿಯ ಮಹಾಪ್ರವಾಹದಲ್ಲಿ ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಲಕ್ಷಾಂತರ ಜನರ ಸಾಕ್ಷಿ! ಕಾಲಿಡಲೂ ಜಾಗವಿಲ್ಲ, ಬಾನಂಗಳದಲ್ಲಿ ಜೈಕಾರ! ಶಿವಮೊಗ್ಗದಲ್ಲಿ ಮೈ ನವಿರೇಳಿಸಿದ ಗಣೇಶೋತ್ಸವದ ಅದ್ಧೂರಿ ಮೆರವಣಿಗೆ!

ಸೆ.26-27ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಮಹಾಸಮ್ಮೇಳನ: ಪಂಚಪೀಠಾಧೀಶರ ಸಾನ್ನಿಧ್ಯ

ಶಿವಮೊಗ್ಗ ಹಿಂದೂ ಗಣಪತಿ ಮೆರವಣಿಗೆಗೆ ಭಕ್ತಿಯ ಸಾಥ್: ಐದು ಸಾವಿರ ಭಕ್ತರಿಗೆ ಅನ್ನದಾಸೋಹ: ಮೂರನೇ ವರ್ಷವೂ ಸೇವಾ ಪರಂಪರೆ ಮುಂದುವರಿಸಿದ ಎಸ್‌ಆರ್‌ವಿ ಎಂಟರ್‌ಪ್ರೈಸಸ್ ಗೆಳೆಯರ ಬಳಗ

50 ವರ್ಷಗಳ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿ: ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಿ: ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕೆ.ಈ. ಕಾಂತೇಶ್ ಕರೆ

Leave a Comment