ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮರಳು ಮಾಫಿಯಾ ದಬ್ಬಾಳಿಕೆ ಹೆಚ್ಚಳ: ಜನರ ಮೇಲೆ ದುಪ್ಪಟ್ಟು ಹೊರೆ, ಸರ್ಕಾರದ ವಿರುದ್ಧ ಡಿ.ಎಸ್.ಅರುಣ್ ಆಕ್ರೋಶ

On: March 26, 2026 2:16 PM
Follow Us:

ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಉಂಟಾಗಿರುವ ಮರಳಿನ ಕೃತಕ ಅಭಾವ, ಹರಾಜು ಪ್ರಕ್ರಿಯೆಯ ವಿಳಂಬ ಹಾಗೂ ಅದರಿಂದ ಉಂಟಾದ ಜನಸಾಮಾನ್ಯರ ಸಂಕಷ್ಟದ ಕುರಿತು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿ ವರದಿಯಾಗಿದ್ದರೂ, ವಿಧಾನ ಪರಿಷತ್ ಅಧಿವೇಶನದ ಕಾರ್ಯಪಟ್ಟಿಯಲ್ಲಿ ವಿಷಯ ದಾಖಲೆಯಾಗಿದ್ದರೂ ಸಹ, ಸಮಯಾಭಾವ ಹಾಗೂ ವಿಧೇಯಕಗಳ ಅಂಗೀಕಾರದ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ದೊರೆಯದೇ ಇಲ್ಲದಿರುವುದು ವಿಷಾದನೀಯವೆಂದು ಅವರು ತಿಳಿಸಿದ್ದಾರೆ.

ಈ ವಿಷಯ ಕಾರ್ಯಪಟ್ಟಿಯಲ್ಲಿ ಅಧಿಕೃತವಾಗಿ ದಾಖಲೆಯಾಗಿರುವುದರಿಂದ ಸರ್ಕಾರದಿಂದ ಸಮಗ್ರ ಹಾಗೂ ಸ್ಪಷ್ಟ ಉತ್ತರ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಈ ಪ್ರಮುಖ ವಿಷಯವನ್ನು ತುರ್ತಾಗಿ ಪರಿಗಣಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ 2025ರ ಜುಲೈ 1ರಂದು 20 ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಇಂದಿಗೂ ಅಧಿಕೃತ ಮರಳುಗಾರಿಕೆ ಪ್ರಾರಂಭವಾಗದಿರುವುದು ಅತ್ಯಂತ ಗಂಭೀರ ಸಂಗತಿಯಾಗಿದ್ದು, ಆಡಳಿತಾತ್ಮಕ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಡಿ.ಎಸ್. ಅರುಣ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ಇಎಂಡಿ (EMD) ಹಾಗೂ ಬ್ಯಾಂಕ್ ಗ್ಯಾರಂಟಿ ಸೇರಿದಂತೆ ಅಗತ್ಯ ಮುಂಗಡ ಹಣವನ್ನು ಪಾವತಿಸಿದ್ದರೂ, ಅಗತ್ಯ ಎನ್‌ಒಸಿ (NOC)ಗಳ ಮಂಜೂರಾತಿಯಲ್ಲಿ ಉಂಟಾದ ಅನಗತ್ಯ ವಿಳಂಬದಿಂದ ಕಾರ್ಯಾರಂಭ ಸಾಧ್ಯವಾಗದೇ ಇರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಈ ವಿಳಂಬದ ಪರಿಣಾಮವಾಗಿ ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದ್ದು, ಅದನ್ನು ದುರುಪಯೋಗಪಡಿಸಿಕೊಂಡ ಮರಳು ಮಾಫಿಯಾ ಅಕ್ರಮವಾಗಿ ದುಪ್ಪಟ್ಟು ದರದಲ್ಲಿ ಮರಳನ್ನು ಮಾರಾಟ ಮಾಡುತ್ತಿರುವುದು ಜನರ ಮೇಲೆ ಭಾರೀ ಆರ್ಥಿಕ ಹೊರೆ ತಂದಿದೆ. ಮನೆ ನಿರ್ಮಾಣ ಕಾರ್ಯಗಳು ಹಾಗೂ ಸರ್ಕಾರಿ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ದಿನನಿತ್ಯದ ಕಾರ್ಮಿಕರು ಸಹ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮರಳುಗಾರಿಕೆ ಸಕಾಲದಲ್ಲಿ ಪ್ರಾರಂಭವಾಗಿದ್ದರೆ ಸರ್ಕಾರಕ್ಕೆ ಅಂದಾಜು 40 ಕೋಟಿ ರೂಪಾಯಿ ಆದಾಯ ಲಭ್ಯವಾಗಬಹುದಾಗಿತ್ತು. ಆದರೆ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಮರ್ಪಕ ಕಾರ್ಯಪದ್ಧತಿಯ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದರು.

ಸರ್ಕಾರ ತಕ್ಷಣವೇ ಬಾಕಿ ಇರುವ ಎಲ್ಲಾ ಎನ್‌ಒಸಿ ಅನುಮತಿಗಳನ್ನು ಮಂಜೂರು ಮಾಡಿ, ಈಗಾಗಲೇ ಹರಾಜಾಗಿರುವ ಮರಳು ಬ್ಲಾಕ್‌ಗಳಲ್ಲಿ ಕಾರ್ಯಾರಂಭಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರಿಗೆ ನಿಗದಿತ ಮತ್ತು ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತೆ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದು ಡಿ.ಎಸ್. ಅರುಣ್ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವರನ್ನು ಆಗ್ರಹಿಸಿದ್ದಾರೆ.

ಜನರ ಜೀವನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೇರವಾಗಿ ಸಂಬಂಧಿಸಿದ ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತ್ವರಿತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಮರಳು ಮಾಫಿಯಾ ದಬ್ಬಾಳಿಕೆಗೆ ಕಡಿವಾಣ ಹಾಕಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment