ಪಂಚ ಮಂತ್ರ ಬೋಧಿಸಿದ ಮಹಾವೀರ ಸ್ವಾಮಿ
(ಮಹಾವೀರ ಜಯಂತಿಯ ಶುಭಾಶಯಗಳು)
ಲೇಖನ: ಸಂತೋಷ್ ಬಿದರಗಡ್ಡೆ
ಜೈನ ಧರ್ಮ ಮತ್ತು ತೀರ್ಥಯಾತ್ರೆಯ ಅನುಭವ
ಜಗತ್ತಿಗೆ ಅಹಿಂಸಾ ತತ್ವವನ್ನು ಬೋಧಿಸಿದ ಧರ್ಮಗಳಲ್ಲಿ ಜೈನ ಧರ್ಮವು ಪ್ರಮುಖವಾಗಿದೆ. ಇತ್ತೀಚೆಗೆ ಜೈನ ಮಿತ್ರರ ಸಹಕಾರದಿಂದ ನಾವು ಗುಜರಾತ್ ತೀರ್ಥಯಾತ್ರೆ ಕೈಗೊಂಡು, ಪವಿತ್ರ ಪಾಲಿತಾನ ಶತ್ರುಂಜಯ ಬೆಟ್ಟ ಹಾಗೂ ಗಿರ್ನಾರ್ ಪರ್ವತಗಳಲ್ಲಿ ಯಾತ್ರೆ ಮಾಡಿ ಆದಿನಾಥ, ಮಹಾವೀರ ಮತ್ತು ಪಾರ್ಶ್ವನಾಥ ತೀರ್ಥಂಕರರ ದರ್ಶನ ಪಡೆದಿದ್ದೇವೆ. ಆ ಯಾತ್ರೆಯ ನೆನಪು ಮತ್ತು ಸಾರ್ಥಕತೆ ಇಂದಿಗೂ ನಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಯಾತ್ರೆಯ ಸಮಯದಲ್ಲಿ ನಾವು ಈ ಕೆಳಗಿನ ಮಂತ್ರವನ್ನು ಪಠಿಸುತ್ತಿದ್ದೆವು:
ನಮೋ ಅರಿಹಂತಾಣಂ ನಮೋ ಸಿದ್ಧಾಣಂ ನಮೋ ಆಯಾರಿಯಾಣಂ ನಮೋ ಉವಜ್ಜಾಯಾಣಂ ನಮೋ ಲೋಏ ಸವ್ವ ಸಾಹೂಣಂ ಏಸೋ ಪಂಚ ನಮೋಕ್ಕಾರೋ ಸವ್ವ ಪಾವಪ್ಪಣಾಸಣೋ ಮಂಗಳಾಣಂ ಚ ಸವ್ವೇಸಿಂ ಪದಮಂ ಹವೈ ಮಂಗಳಂ

ಪಂಚ ನಮೋಕಾರ ಮಂತ್ರದ ಮಹತ್ವ
ಜೈನರ ಈ ಪವಿತ್ರ ಮಂತ್ರವನ್ನು ಹೃದಯದಲ್ಲಿ ಸ್ಮರಿಸುತ್ತಾ, ಅರಿಹಂತರಿಗೆ, ಸಿದ್ಧರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ ಹಾಗೂ ಸಾಧು-ಸಂತರಿಗೆ ನಮಸ್ಕರಿಸುತ್ತಾ ಭಗವಾನ್ ಮಹಾವೀರ ಸ್ವಾಮಿಯನ್ನು ಸ್ಮರಿಸುತ್ತೇವೆ.
ಎಲ್ಲಾ ಧರ್ಮಗಳ ಸಾರ – ದಯೆ
ಜಗತ್ತಿನ ಎಲ್ಲಾ ಧರ್ಮಗಳ ಸಾರ ಒಂದೇ – ಅದು “ದಯೆ”. ಮನುಷ್ಯನು ಮನುಷ್ಯತ್ವದಿಂದ, ಪರಸ್ಪರ ಸಹಕಾರ, ಪ್ರೀತಿ ಹಾಗೂ ಸತ್ಯನಿಷ್ಠೆಯಿಂದ ಬದುಕಬೇಕು ಎಂಬ ಸಂದೇಶವನ್ನು ಎಲ್ಲ ಧರ್ಮಗಳೂ ನೀಡುತ್ತವೆ. ದಯಾಮಯಿ ಏಸುಕ್ರಿಸ್ತನು ತನ್ನನ್ನು ಕ್ರೂಶಿಗೆ ಹಾಕುವಾಗಲೂ “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ” ಎಂದು ಹೇಳಿ, “ಇವರು ತಾವು ಮಾಡುತ್ತಿರುವುದೇನು ಎಂಬ ಅರಿವು ಇಲ್ಲ; ಇವರನ್ನು ಕ್ಷಮಿಸು” ಎಂದು ದೇವರಲ್ಲಿ ಪ್ರಾರ್ಥಿಸಿದನು. ಇದೇ ದಯೆಯ ಮಹತ್ವ. ಮಹಮ್ಮದ್ ಪೈಗಂಬರ್, ಸಿಖ್ ಧರ್ಮದ ಸ್ಥಾಪಕ ಗುರು ನಾನಕ್, ಭಕ್ತಿ ಚಳುವಳಿಯ ಮಹಾನ್ ವ್ಯಕ್ತಿ ಬಸವಣ್ಣ – ಎಲ್ಲರೂ ದಯೆಯೇ ಧರ್ಮದ ಮೂಲ ಎಂದು ಸಾರಿದ್ದಾರೆ.

ಸಲ್ಲೇಖನ ವ್ರತ ಮತ್ತು ಅಹಿಂಸೆಯ ಪರಮೋಚ್ಚತೆ
ಜೈನ ಧರ್ಮದ ತತ್ವಗಳಲ್ಲಿ ‘ಸಲ್ಲೇಖನ ವ್ರತ’ವನ್ನು ನೋಡಿದರೆ, ಅಹಿಂಸೆ ಮತ್ತು ಸತ್ಯದ ಪರಮೋಚ್ಚ ಗುರಿ ಸ್ಪಷ್ಟವಾಗುತ್ತದೆ. ಇತರರಿಗೆ ಹಿಂಸೆ ಮಾಡುವುದನ್ನು ಮಾತ್ರವಲ್ಲದೆ, ತಾನು ಸಹ ನಿಯಂತ್ರಣದಿಂದ, ಉಪವಾಸದ ಮೂಲಕ ಜೀವನವನ್ನು ಮುಕ್ತಗೊಳಿಸುವ ಮಹತ್ವದ ಆಧ್ಯಾತ್ಮಿಕ ವಿಧಾನ ಇದಾಗಿದೆ. ಮನುಕುಲದ ಉದ್ಧಾರಕ್ಕೆ ದಾರಿ ತೋರಿಸುವ ಧರ್ಮಗಳಲ್ಲಿ ಜೈನ ಧರ್ಮವೂ ಪ್ರಮುಖವಾಗಿದೆ.
ಮಹಾವೀರರು ಬೋಧಿಸಿದ ಐದು ಮಹಾವ್ರತಗಳು
ಜೈನ ಧರ್ಮದ 24ನೇ ತೀರ್ಥಂಕರರಾದ ವರ್ಧಮಾನ ಮಹಾವೀರರು ಸತ್ಯ, ಅಹಿಂಸೆ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಬೋಧಿಸಿದರು. ಇವುಗಳ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಳ್ಳುವ ದಾರಿಯನ್ನು ತೋರಿಸಿದರು. ಬನ್ನಿ, ಅವರ ಬಗ್ಗೆ ಇನ್ನಷ್ಟು ತಿಳಿಯೋಣ.
ಮಹಾವೀರರ ಜನನ ಮತ್ತು ಪ್ರಾರಂಭಿಕ ಜೀವನ
ಭಗವಾನ್ ಮಹಾವೀರರು ಕ್ರಿ.ಪೂ. 599ರಲ್ಲಿ ಬಿಹಾರದ ಕ್ಷತ್ರಿಯ ಕುಂಡದಲ್ಲಿ ಜನಿಸಿದರು. ಅವರ ತಂದೆ ಸಿದ್ದಾರ್ಥ ಮತ್ತು ತಾಯಿ ತ್ರಿಶಾಲಾ ದೇವಿ. ಅವರಿಗೆ ‘ವರ್ಧಮಾನ’ ಎಂಬ ಹೆಸರು ಇಡಲಾಯಿತು. ರಾಜಮನೆತನದಲ್ಲಿ ಜನಿಸಿದರೂ ಐಶಾರಾಮಿ ಜೀವನವು ಅವರನ್ನು ಆಕರ್ಷಿಸಲಿಲ್ಲ. ಅವರು ಸದಾ ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕತೆಯ ಹುಡುಕಾಟದಲ್ಲಿದ್ದರು.
ತ್ಯಾಗ, ತಪಸ್ಸು ಮತ್ತು ಜ್ಞಾನೋದಯ
30ನೇ ವಯಸ್ಸಿನಲ್ಲಿ ಮಹಾವೀರರು ರಾಜಕೀಯ ಜೀವನ ಮತ್ತು ಕುಟುಂಬವನ್ನು ತ್ಯಜಿಸಿ ತಪಸ್ವಿ ಜೀವನವನ್ನು ಆರಿಸಿಕೊಂಡರು. ಹನ್ನೆರಡು ವರ್ಷಗಳ ಕಠಿಣ ತಪಸ್ಸಿನ ನಂತರ ‘ಕೇವಲ ಜ್ಞಾನ’ವನ್ನು ಪಡೆದರು. ನಂತರ ಅವರು ತಮ್ಮ ಬೋಧನೆಗಳನ್ನು ದಕ್ಷಿಣ ಏಷ್ಯಾದಾದ್ಯಂತ ಪ್ರಸಾರ ಮಾಡಿದರು.

ಐದು ಮಹಾವ್ರತಗಳ ಸಾರಾಂಶ
ಅವರು ಬೋಧಿಸಿದ ಐದು ಮಹಾವ್ರತಗಳು ಇಂತಿವೆ:
೧. ಸತ್ಯ – ಸುಳ್ಳು ಹೇಳಬಾರದು
೨. ಅಹಿಂಸೆ – ಯಾವ ಜೀವಿಗೂ ಹಾನಿ ಮಾಡಬಾರದು
೩. ಅಚೌರ್ಯ – ಕಳ್ಳತನ ಮಾಡಬಾರದು
೪. ಬ್ರಹ್ಮಚರ್ಯ – ಇಂದ್ರಿಯ ನಿಯಂತ್ರಣ
೫. ಅಪರಿಗ್ರಹ – ಆಸೆ-ಆಕಾಂಕ್ಷೆಗಳಿಂದ ದೂರವಿರುವುದು
ಸಕಲ ಜೀವಿಗಳ ಮೇಲೆ ಪ್ರೀತಿ ಮತ್ತು ಗೌರವ
ಮಹಾವೀರರು ಅತಿ ಸೂಕ್ಷ್ಮ ಜೀವಿಗಳಿಂದ ಹಿಡಿದು ಎಲ್ಲಾ ಜೀವಿಗಳ ಮೇಲೂ ಪ್ರೀತಿ ಮತ್ತು ಗೌರವ ತೋರಬೇಕು ಎಂದು ಬೋಧಿಸಿದರು. ಅವರು ದುರಾಶೆ ಮತ್ತು ಆಸೆಗಳನ್ನು ತೊರೆದು, ಸರಳ ಜೀವನ ನಡೆಸುವಂತೆ ಹೇಳಿದರು.
ಮಹಾವೀರ ಜಯಂತಿಯ ಆಚರಣೆಗಳು
ಜೈನ ಧರ್ಮದಲ್ಲಿ ಮಹಾವೀರ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಗವಾನ್ ಮಹಾವೀರರ ವಿಗ್ರಹವನ್ನು ರಥದಲ್ಲಿ ಕೊಂಡೊಯ್ಯುವ ‘ರಥಯಾತ್ರೆ’ ನಡೆಯುತ್ತದೆ. ಭಕ್ತರು ಭಜನೆಗಳು, ಪ್ರಾರ್ಥನೆಗಳ ಮೂಲಕ ಅವರ ಬೋಧನೆಗಳನ್ನು ಸ್ಮರಿಸುತ್ತಾರೆ.
ಪ್ರಮುಖ ಜೈನ ತೀರ್ಥಕ್ಷೇತ್ರಗಳು
ಮಹಾವೀರರಿಗೆ ಸಂಬಂಧಿಸಿದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಪಾವಾಪುರಿ (ನಿರ್ವಾಣ ಸ್ಥಳ), ವೈಶಾಲಿ (ಜನ್ಮಸ್ಥಳ), ಶ್ರವಣಬೆಳಗೊಳ (ಗೊಮ್ಮಟೇಶ್ವರ ಪ್ರತಿಮೆ), ಗಿರ್ನಾರ್ ಪರ್ವತ, ಪಾಲಿತಾನಾ ಶತ್ರುಂಜಯ ಪರ್ವತ ಹಾಗೂ ಚಂಪಾಪುರಿ ಸೇರಿವೆ.
ಮಹಾವೀರರ ತತ್ವಗಳನ್ನು ಅಳವಡಿಸೋಣ
ಈ ರೀತಿ ಜಗತ್ತಿಗೆ ಅಹಿಂಸೆಯ ಮಾರ್ಗವನ್ನು ಬೋಧಿಸಿದ ಮಹಾನ್ ತೀರ್ಥಂಕರರಾದ ಮಹಾವೀರರನ್ನು ಅವರ ಜಯಂತಿಯಂದು ಸ್ಮರಿಸಿ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನವನ್ನು ನಡೆಸೋಣ.

ಶ್ರೀ ಸಂತೋಷ್ ಬಿದರಗಡ್ಡೆ
ಶಿಕ್ಷಕ, ಸಾಹಿತಿ, ಹಾನಗಲ್









