ಬೆಂಗಳೂರು: ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಶಾಸಕ ಎಸ್. ಮುನಿರಾಜು ಒತ್ತಾಯಿಸಿದ್ದಾರೆ.
ಅಸ್ಸಾಂ ಭಾಷಣದಿಂದ ರಾಜಕೀಯ ಕಿಡಿ ಹೊತ್ತಿಸಿದ ಖರ್ಗೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸ್ಸಾಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಖರ್ಗೆ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಿದರು. “ನಮಾಜ್ ಮಾಡುವ ವೇಳೆ ವಿಷಸರ್ಪ ಕಾಣಿಸಿದರೆ ಅದನ್ನು ಕೊಲ್ಲಬೇಕು ಎಂಬ ಉದಾಹರಣೆಯನ್ನು ಉಲ್ಲೇಖಿಸಿ, ಅದನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೂ ಹೋಲಿಕೆ ಮಾಡಿರುವುದು ಅತ್ಯಂತ ಆಕ್ಷೇಪಾರ್ಹ. ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಸಾಧ್ಯತೆಯಿದೆ” ಎಂದು ಟೀಕಿಸಿದರು.

ಈ ರೀತಿಯ ಮಾತುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ಅಪಾಯವಿದೆ ಎಂದು ಅವರು ಅಭಿಪ್ರಾಯಪಟ್ಟರು. “ಇದು ಬೆಂಕಿ ಹಚ್ಚುವ ರೀತಿಯ ಹೇಳಿಕೆ. ಇಂತಹ ಪ್ರಚೋದನಕಾರಿ ಮಾತುಗಳಿಂದ ಕೋಮುಗಲಭೆಗಳು ಉಂಟಾಗುವ ಸಾಧ್ಯತೆ ಇದೆ. ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿರುವ ಇಂತಹ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
ಡಿಜಿಪಿಗೆ ದೂರು, ಕ್ರಮಕ್ಕೆ ಒತ್ತಾಯ
ಈ ಹಿನ್ನೆಲೆಯಲ್ಲಿ, ಖರ್ಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಡಿ.ಜಿ.ಪಿ. ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದರು. “ನಾನು ಸೇರಿದಂತೆ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಹಾಗೂ ಶಾಸಕ ಸಿ.ಕೆ.ರಾಮಮೂರ್ತಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಸೇರಿದಂತೆ ಹಲವರು ನಿಯೋಗವಾಗಿ ತೆರಳಿ ದೂರು ನೀಡಿದ್ದೇವೆ. ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ” ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ಸಿ.ಕೆ.ರಾಮಮೂರ್ತಿ “ಖರ್ಗೆ ಅವರು ಮಾಡಿದ ಹೇಳಿಕೆ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಜನಪ್ರತಿನಿಧಿಯಾಗಿ ಇಂತಹ ಹೇಳಿಕೆ ನೀಡುವುದು ಖಂಡನೀಯವಾಗಿದ್ದು. ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ” ಎಂದು ಅಭಿಪ್ರಾಯಪಟ್ಟರು.
ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ರಾಜಕೀಯ ಪ್ರಭಾವ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.








