ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದಾವಣಗೆರೆ ಶೋಭಾಯಾತ್ರೆಯಲ್ಲಿ ಜನಸಾಗರ: ಬಿಜೆಪಿ ಗೆಲುವಿಗೆ ಸುನಾಮಿ ಅಲೆ ಎಂದ ವಿಜಯೇಂದ್ರ

On: April 6, 2026 9:41 PM
Follow Us:

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೇವಲ ಬಿಜೆಪಿಯ ಪರವಾದ ಅಲೆಯಲ್ಲ, ಬದಲಾಗಿ ಒಂದು ರೀತಿಯ “ಸುನಾಮಿ ಅಲೆ” ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಆಯೋಜಿಸಲಾದ ಭವ್ಯ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಪ್ರಜ್ಞಾವಂತ ಮತದಾರರು ಈಗಾಗಲೇ ನಿರ್ಧಾರ ಮಾಡಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸ ಕರಿಯಪ್ಪ ಅವರನ್ನು ಈ ಬಾರಿ ಶಾಸಕರಾಗಿ ಆಯ್ಕೆ ಮಾಡಲೇಬೇಕು ಎಂಬ ಮನೋಭಾವ ಜನರಲ್ಲಿ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಯ ದೃಷ್ಟಿಯಿಂದ ದಾವಣಗೆರೆ ದಕ್ಷಿಣ ಕ್ಷೇತ್ರವು ಹೊಸ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ಹೇಳಿದ ವಿಜಯೇಂದ್ರ, ಆಗರ್ಭ ಶ್ರೀಮಂತರಿಂದ ಕ್ಷೇತ್ರದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಜನಸಾಮಾನ್ಯರ ನಡುವೆ ಇದ್ದು, ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಪ್ರತಿನಿಧಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

“ಹೆಲಿಕಾಪ್ಟರ್‌ನಲ್ಲಿ ಸಂಚರಿಸುವ ಶಾಸಕರು ನಮಗೆ ಬೇಕಿಲ್ಲ; ಬದಲಾಗಿ ಮನೆ ಬಾಗಿಲಿಗೆ ಬಂದು ಜನರ ಸಮಸ್ಯೆ ಕೇಳುವ ಜನಪ್ರತಿನಿಧಿಯೇ ಅಗತ್ಯ” ಎಂದು ಅವರು ಜನಾಭಿಪ್ರಾಯವನ್ನು ಉಲ್ಲೇಖಿಸಿದರು.

ಈ ಸಂದರ್ಭ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ದಾವಣಗೆರೆ ರಾಜಕೀಯದಲ್ಲಿ ಒಂದು ಕುಟುಂಬವೇ ನಿರಂತರವಾಗಿ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಮನೆಯಲ್ಲಿ ತಾತ, ಬಳಿಕ ಮಗ ಹಾಗೂ ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ. ಹೀಗೆ ಒಂದೇ ಕುಟುಂಬಕ್ಕೆ ಅಧಿಕಾರ ಕೇಂದ್ರೀಕೃತವಾಗುವ ಮೂಲಕ ದಾವಣಗೆರೆಯನ್ನು “ಕಬ್ಜಾ” ಮಾಡುವ ಯತ್ನ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಈ ಬಾರಿ ಗೆದ್ದರೂ ಮುಂದಿನ ಹಲವು ದಶಕಗಳ ಕಾಲ ಇತರರಿಗೆ ಅವಕಾಶ ನೀಡದ ರೀತಿಯ ರಾಜಕೀಯ ವಾತಾವರಣ ನಿರ್ಮಾಣವಾಗಬಹುದು ಎಂಬ ಆತಂಕವಿದೆ ಎಂದು ಜೋಶಿ ಹೇಳಿದರು. ಜೊತೆಗೆ, ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕುಸಿತವಾಗಿದೆ, ಅಸ್ಸಾಂ ಸೇರಿದಂತೆ ಹಲವೆಡೆ ಅದರ ಪ್ರಭಾವ ಶೂನ್ಯವಾಗಿದೆ ಎಂದು ಅವರು ಟೀಕಿಸಿದರು.

“ಕಾಂಗ್ರೆಸ್ ಪಕ್ಷದ ರಾಜಕೀಯ ಬ್ಯಾಟರಿ ಸಂಪೂರ್ಣವಾಗಿ ಡೌನ್ ಆಗಿದೆ” ಎಂದು ವ್ಯಂಗ್ಯವಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅಭ್ಯರ್ಥಿ ಶ್ರೀನಿವಾಸದಾಸ ಕರಿಯಪ್ಪ, ಶಾಸಕರಾದ ಬಿ.ಪಿ. ಹರೀಶ್, ಎಸ್.ಆರ್. ವಿಶ್ವನಾಥ್, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಅನೇಕ ನಾಯಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ಕಾಯಿಪೇಟೆಯವರೆಗೆ ನಡೆದ ಬೃಹತ್ ಶೋಭಾಯಾತ್ರೆ ಉತ್ಸವಮಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು. ರಸ್ತೆಯುದ್ದಕ್ಕೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪಕ್ಷದ ಪರ ಉತ್ಸಾಹ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment