ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ಪಂಚಪೀಠದ ಜಗದ್ಗುರುಗಳ ಪಾದಸ್ಪರ್ಶದಿಂದ ಮಲೆನಾಡು ಪಾವನ: ಶಿವಮೊಗ್ಗದ ಐತಿಹಾಸಿಕ ಉತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹರ್ಷ

On: May 18, 2026 5:51 PM
Follow Us:

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರವು ಭಕ್ತಿ, ಧರ್ಮ ಮತ್ತು ಗುರು-ಹಿರಿಯರ ಗೌರವದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಮೇ 17ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ, ಬೃಹತ್ ಧರ್ಮಜಾಗೃತಿ ಸಮಾವೇಶ ಹಾಗೂ ರೈತರ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾ ಸಮರ್ಪಣಾ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿತು.

​ಈ ಐತಿಹಾಸಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಸಮಾಜದ ಒಗ್ಗಟ್ಟು, ಯುವಶಕ್ತಿಯ ದಾರಿ ಹಾಗೂ ಗುರುಭಕ್ತಿಯ ಮಹತ್ವದ ಕುರಿತು ಹೇಳಿದರು.

​ಬಿ.ವೈ.ರಾಘವೇಂದ್ರ ಅವರು ಆರಂಭದಲ್ಲಿ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಧನ್ಯವಾದ ಅರ್ಪಿಸಿದ ಸಂಸದರು, ಶಿವಮೊಗ್ಗದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿದ್ದು, ಜನತೆ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಎಂದು ನೆನಪಿಸಿಕೊಂಡರು. ಆದರೆ, ನಿನ್ನೆ ರಂಭಾಪುರಿ ಶ್ರೀಗಳು ಹಾಗೂ ಕಾಶಿ ಪೀಠದ ಶ್ರೀಗಳು ಈ ಪುಣ್ಯಭೂಮಿಗೆ ಆಗಮಿಸುತ್ತಿದ್ದಂತೆ ವರುಣದೇವನು ಕೃಪೆ ತೋರಿದ್ದಾನೆ. ಇಂದು ಪಂಚಪೀಠಗಳ ಜಗದ್ಗುರುಗಳ ದಿವ್ಯ ಪಾದಸ್ಪರ್ಶದಿಂದಾಗಿ ಮಲೆನಾಡಿನಲ್ಲಿ ತಂಪು ವಾತಾವರಣ ನಿರ್ಮಾಣವಾಗಿದ್ದು, ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಹರ್ಷ ತಂದಿದೆ ಎಂದು ಅವರು ಆನಂದ ವ್ಯಕ್ತಪಡಿಸಿದರು.

ಈ ಐತಿಹಾಸಿಕ ಮಹೋತ್ಸವದಲ್ಲಿ ಪಂಚಪೀಠದ ಜಗದ್ಗುರುಗಳಾದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಪೀಠದ ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಕಾಶಿ ಪೀಠದ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸನ್ನಿಧಾನ ವಹಿಸಿದ್ದರು. ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿದ ಪೂಜ್ಯ ಜಗದ್ಗುರುಗಳ ದಿವ್ಯ ಸಾನಿಧ್ಯಕ್ಕೆ ಸಮಸ್ತ ಭಕ್ತಾದಿಗಳ ಪರವಾಗಿ ಭಕ್ತಿಪೂರ್ವಕ ನಮನಗಳನ್ನು ಬಿ.ವೈ.ರಾಘವೇಂದ್ರ ಸಲ್ಲಿಸಿದರು.

​ಇಂದಿನ ಆಧುನಿಕ ಯುಗದಲ್ಲಿ ಯುವಪೀಳಿಗೆ ಎದುರಿಸುತ್ತಿರುವ ಮಾನಸಿಕ ಸವಾಲುಗಳ ಕುರಿತು ಸಂಸದರು ಕಳವಳ ವ್ಯಕ್ತಪಡಿಸಿದರು. ಇತ್ತೀಚಿನ ಸಮೀಕ್ಷಾ ಲೇಖನವೊಂದನ್ನು ಉಲ್ಲೇಖಿಸಿದ ಅವರು, ಪ್ರಸ್ತುತ ಯುವಕರು ದೈಹಿಕ ಆಟೋಟಗಳಿಂದ ಹಾಗೂ ಸಾಮಾಜಿಕ ಒಡನಾಟದಿಂದ ದೂರ ಉಳಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ತೀವ್ರ ಮಾನಸಿಕ ಖಿನ್ನತೆಗೆ (Depression) ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದರು.

“ನಮ್ಮ ದೇಶದಲ್ಲಿ ಮೂರ್ನಾಲ್ಕು ಸಾವಿರ ಯುವಕರಿಗೆ ಒಬ್ಬ ಮಾನಸಿಕ ತಜ್ಞರಿದ್ದಾರೆ. ಆದರೆ ಯುವಶಕ್ತಿಗೆ ಕೇವಲ ವೈದ್ಯಕೀಯ ಚಿಕಿತ್ಸೆಯೊಂದೇ ಸಾಲದು, ಬದಲಿಗೆ ನಮ್ಮ ಪಂಚಪೀಠಗಳ ಜಗದ್ಗುರುಗಳು ಹಾಗೂ ಪಂಚಾಚಾರ್ಯರು ನೀಡಿದ ದಿವ್ಯ ಸಂದೇಶಗಳು, ಶ್ಲೋಕಗಳು ಮತ್ತು ಧಾರ್ಮಿಕ ವಿಚಾರಗಳು ಯುವಮನಸ್ಸುಗಳನ್ನು ತಲುಪಬೇಕಿದೆ. ಆ ಆಧ್ಯಾತ್ಮಿಕ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಇಂದಿನ ಯುವಶಕ್ತಿ ತಂದೆ-ತಾಯಿಗೆ ಹಾಗೂ ಸಮಾಜಕ್ಕೆ ಭಾರವಾಗದೆ ಸನ್ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯ” ಎಂದು ಅವರು ಕರೆ ನೀಡಿದರು.

ದೇಶದಲ್ಲೇ ಮೊದಲ ಬಾರಿಗೆ ರೈತರಿಗಾಗಿ ಪ್ರತ್ಯೇಕ ‘ಕೃಷಿ ಬಜೆಟ್’ ಮಂಡಿಸುವ ಮೂಲಕ ಹಸಿರು ಶಾಲು ಹೊತ್ತ ಶ್ರೇಷ್ಠ ರೈತ ನಾಯಕರೆನಿಸಿಕೊಂಡ ಬಿ.ಎಸ್. ಯಡಿಯೂರಪ್ಪನವರಿಗೆ ಶಿವಮೊಗ್ಗ ಜಿಲ್ಲೆಯು ರಾಜಕೀಯ ಶಕ್ತಿಯನ್ನು ನೀಡಿದ ಅಪೂರ್ವ ಕರ್ಮಭೂಮಿಯಾಗಿದೆ. ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಜಿಲ್ಲೆಯನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಲು ಅವರು ನೀಡಿದ ಕೊಡುಗೆಗಳು ಅಪ್ರತಿಮ. ಜಿಲ್ಲೆಗೆ ಸುಸಜ್ಜಿತವಾದ ವಿಮಾನ ನಿಲ್ದಾಣ, ಅತ್ಯಾಧುನಿಕ ಮೆಡಿಕಲ್ ಕಾಲೇಜು (SIMS), ಸುವ್ಯವಸ್ಥಿತ ರಸ್ತೆ ಸಂಪರ್ಕಗಳು, ಕುಡಿಯುವ ನೀರಿನ ಬೃಹತ್ ಯೋಜನೆಗಳು ಮತ್ತು ನೀರಾವರಿ ಸೌಲಭ್ಯಗಳನ್ನು ತಂದುಕೊಡುವ ಮೂಲಕ ಶಿವಮೊಗ್ಗವನ್ನು ರಾಜ್ಯಮಟ್ಟದಲ್ಲಿ ಪ್ರಮುಖ ಕೈಗಾರಿಕಾ ಹಾಗೂ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ.

ಸಾಮಾನ್ಯ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಆರಂಭಿಸಿ, ತಳಮಟ್ಟದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಇಡೀ ಜಿಲ್ಲೆಯ ಮೂಲಸೌಕರ್ಯಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸಿದ ಅವರ ಧೀಮಂತ ನಾಯಕತ್ವ ಮತ್ತು ಜನಪರ ಕಳಕಳಿಗೆ ಸಮಸ್ತ ಮಲೆನಾಡಿನ ಜನತೆ ಈ ಐತಿಹಾಸಿಕ ಧರ್ಮಜಾಗೃತಿ ಸಮಾವೇಶದಲ್ಲಿ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿದರು.

​ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿನ ಕುರಿತು ಮಾತನಾಡುತ್ತಾ ಸಂಸದರು ಒಂದು ಸುಂದರ ಉದಾಹರಣೆ ನೀಡಿದರು. “ಮಳೆ ಬಂದಾಗ ಸಣ್ಣ ಸಣ್ಣ ಹಳ್ಳಗಳು ಒಟ್ಟಾಗಿ ಕೆರೆಯಾಗುತ್ತವೆ, ಕೆರೆಗಳೆಲ್ಲವೂ ಕೊನೆಗೆ ವಿಶಾಲವಾದ ಸಮುದ್ರವನ್ನು ಸೇರುತ್ತವೆ. ಬಿಸಿಲಿಗೆ ಕೆರೆಗಳು ಬತ್ತಿ ಹೋಗಬಹುದು, ಆದರೆ ಸಮುದ್ರ ಎಂದಿಗೂ ಬತ್ತುವುದಿಲ್ಲ. ಅದೇ ರೀತಿ ನಮ್ಮ ಸಮಾಜದ ಎಲ್ಲಾ ಒಳಪಂಗಡಗಳು ಒಟ್ಟಾಗಿ ಬೃಹತ್ ಸಮುದ್ರದಂತೆ ಒಂದಾಗಬೇಕು. ನಾವೆಲ್ಲರೂ ಭೇದ-ಭಾವ ಮರೆತು ಒಗ್ಗೂಡಿದಾಗ ಮಾತ್ರ ಸಮಾಜದ ಬಡವರು, ಶೋಷಿತರು ಮತ್ತು ಪೀಡಿತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಈ ಮಹಾವೇದಿಕೆಯ ಸಾಕ್ಷಿಯಾಗಿ ಸಮಾಜವನ್ನು ಒಟ್ಟಾಗಿ ಮುನ್ನಡೆಸುವ ರಥವನ್ನು ಎಳೆಯುವ ಸಂಕಲ್ಪ ಮಾಡೋಣ” ಎಂದರು.

​ಶಿವಮೊಗ್ಗದ ರಾಜಬೀದಿಗಳಲ್ಲಿ ನಡೆದ ಈ ಐತಿಹಾಸಿಕ ಅಡ್ಡಪಲ್ಲಕ್ಕಿ ಉತ್ಸವವು ಯಾವುದೇ ಸಣ್ಣ ಲೋಪದೋಷಗಳಿಲ್ಲದೆ ಅತ್ಯಂತ ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನೆರವೇರಿದ್ದಕ್ಕೆ ಸಂಸದರು ಹರ್ಷ ವ್ಯಕ್ತಪಡಿಸಿದರು. ಇಷ್ಟು ದೊಡ್ಡ ಜನಸಾಗರ ನೆರೆದಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಿದ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಹಗಲಿರುಳು ಶ್ರಮಿಸಿದ ಸ್ವಯಂಸೇವಕರು ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಜೊತೆಗೆ, ಈ ಧಾರ್ಮಿಕ ವೈಭವವನ್ನು ನಾಡಿನ ಮೂಲೆ ಮೂಲೆಗೆ ತಲುಪಿಸಿದ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಸ್ನೇಹಿತರಿಗೆ ಹಾಗೂ ಯೂಟ್ಯೂಬ್ ಲೈವ್ ಮೂಲಕ ಪ್ರಸಾರ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿ.ವೈ. ರಾಘವೇಂದ್ರ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ ಆಶೀರ್ವದಿಸಿದ ನಾಡಿನ ಸಮಸ್ತ ಪೂಜ್ಯ ಗುರುಗಳ ಚರಣಾರವಿಂದಗಳಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸಿ, ಕೃತಜ್ಞತೆಗಳನ್ನು ಸಮರ್ಪಿಸಿದರು.

ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಮಠಾಧೀಶರು ಹಾಗೂ ಪೂಜ್ಯ ಸಂತರ ದಿವ್ಯ ಮಹಾಸಂಗಮವು ಅಲ್ಲಮಪ್ರಭು ಮೈದಾನದಲ್ಲಿ ಅಭೂತಪೂರ್ವ ಆಧ್ಯಾತ್ಮಿಕ ಕಳೆಯನ್ನು ಉಂಟುಮಾಡಿತ್ತು. ವೇದಿಕೆಯ ಬಲಭಾಗದಲ್ಲಿ ಆಸೀನರಾಗಿದ್ದ ನೂರಾರು ಪೂಜ್ಯ ಸ್ವಾಮೀಜಿಗಳ ಭವ್ಯ ಉಪಸ್ಥಿತಿಯು ಧರ್ಮಜಾಗೃತಿ ಸಮಾವೇಶದ ದಿವ್ಯತೆಯನ್ನು ಮತ್ತಷ್ಟು ಹೆಚ್ಚಿಸಿತು.

ಈ ಧರ್ಮ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಚನ್ನಬಸಪ್ಪ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ್ರು, ಹೆಚ್.ಎಂ.ಚಂದ್ರಶೇಖರಪ್ಪ, ಹೆಚ್. ಹಾಲಪ್ಪ , ರೇಣುಕಾಚಾರ್ಯ, ಲಕ್ಷ್ಮೀನಾರಾಯಣ, ಮಡಾಳು ಮಲ್ಲಿಕಾರ್ಜುನ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ರುದ್ರುಮನಿ ಸಜ್ಜನ್, ಮಹೇಶ್ವರಯ್ಯ, ವಿರೂಪಾಕ್ಷಪ್ಪ, ಬಳ್ಳೇಕೆರೆ ಸಂತೋಷ್, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್.ಪಿ. ದಿನೇಶ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಕಣ್ತುಂಬಿಕೊಂಡರೆ ಸಾಕು ಜನ್ಮ ಪಾವನ: ಮಲೆನಾಡ ಹೆಬ್ಬಾಗಿಲಿನಲ್ಲಿ ಇತಿಹಾಸ ನಿರ್ಮಿಸಿದ ಅಡ್ಡಪಲ್ಲಕ್ಕಿ ಮಹೋತ್ಸವ; ಭಕ್ತಿ ಸಾಗರದಲ್ಲಿ ತೇಲಿದ ಶಿವಮೊಗ್ಗ ಜನತೆ

ಗಾಂಧಿಬಜಾರ್ ಬಸವೇಶ್ವರ ದೇವಸ್ಥಾನದಲ್ಲಿ ಸಿದ್ಧತೆಗಳ ಪರಿಶೀಲನೆ: ಅಡ್ಡಪಲ್ಲಕ್ಕಿ ಮಹೋತ್ಸವ ಯಶಸ್ಸಿಗೆ ಸಿ.ಎಸ್. ಷಡಾಕ್ಷರಿ ಕರೆ

ಮಲೆನಾಡು ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣ ಬಂದೇ ಬಿಟ್ಟಿತು.!: ಶಿವಮೊಗ್ಗದಲ್ಲಿ ಇಂದು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಧಾರ್ಮಿಕ ಕ್ರಾಂತಿ

ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನದ ಸಂಭ್ರಮ: ಸಂಘಟನೆ ಬೆಳೆಯಲಿ, ಅಧಿಕಾರದ ಸಂಘರ್ಷ ಬೇಡ: ಶ್ರೀ ರಂಭಾಪುರಿ ಜಗದ್ಗುರುಗಳು

34 ವರ್ಷಗಳ ನಂತರ ಮರುಕಳಿಸಿದ ಐತಿಹಾಸಿಕ ಕ್ಷಣ: ಮೇ 17 ರಂದು ಶಿವಮೊಗ್ಗದಲ್ಲಿ ಪಂಚಪೀಠಾಧೀಶರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ; ಭಕ್ತರಿಗೆ ರಂಭಾಪುರಿ ಶ್ರೀಗಳ ಕರೆ

ತಾಯಿ ಎಂಬುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕರ್ತವ್ಯದ ಪ್ರತಿರೂಪ: ಶ್ರೀ ಶಾಂತವೀರ ಮಹಾಸ್ವಾಮೀಜಿ

Leave a Comment