ಶಿವಮೊಗ್ಗದ ಇತಿಹಾಸದಲ್ಲೇ ಅಚ್ಚೊತ್ತಿದ ಭಕ್ತಿ ಸಾಗರ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನೆನಪಿಸಿದ ಅಡ್ಡಪಲ್ಲಕ್ಕಿ ಮಹೋತ್ಸವದ ವೈಭವ!


ಶಿವಮೊಗ್ಗ ನಗರದಲ್ಲಿ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯನ್ನು ನೆನಪಿಸುವಂತೆ ಹರಿದುಬಂದ ಭಕ್ತಿಸಾಗರ, ಮೊಳಗಿದ ಜೈಕಾರಗಳ ನಡುವೆ ಪಂಚಪೀಠಾಧೀಶ್ವರರ ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವವು ಅತ್ಯಂತ ರಮಣೀಯವಾಗಿ ಸಂಪನ್ನಗೊಂಡಿತು. ಗಾಂಧಿಬಜಾರ್‌ನ ಶ್ರೀ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಈ ದಿವ್ಯ ಮೆರವಣಿಗೆಗೆ ಉರಿ ಬಸಿಲಿನ ಧಗೆಯೂ ಅಡ್ಡಿಯಾಗಲಿಲ್ಲ. ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ ಹಾಗೂ ಜೈಲ್ ರಸ್ತೆಗಳ ಮೂಲಕ ಸಾಗಿದ ನಯನಮನೋಹರ ದೃಶ್ಯವನ್ನು ಸಹಸ್ರಾರು ಭಕ್ತರು ಕಣ್ಣುತುಂಬಿಕೊಂಡು ಭಕ್ತಿಭಾವದಿಂದ ಪುಳಕಿತರಾದರು.
ಗುರು ಪರಂಪರೆಯ ಶಕ್ತಿ, ಭಕ್ತಿಯ ಗರಿಮೆ: ಶಿವಮೊಗ್ಗದಲ್ಲಿ ಮೊಳಗಿದ ವೀರಶೈವ ಲಿಂಗಾಯತ ಧರ್ಮದ ತಾಕತ್ತು!
ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ನಮ್ಮ ಸನಾತನ ವೀರಶೈವ ಧರ್ಮದ ‘ಅಡ್ಡಪಲ್ಲಕ್ಕಿ ಮಹೋತ್ಸವ’ದ ಅಸಲಿ ತಾಕತ್ತು ಮತ್ತು ಸಾಂಸ್ಕೃತಿಕ ಗರಿಮೆ ಏನೆಂಬುದನ್ನು ಶಿವಮೊಗ್ಗದ ರಸ್ತೆ ರಸ್ತೆಗಳಲ್ಲಿ ನೆರೆದಿದ್ದ ಆ ಜನಸ್ತೋಮವೇ ಜಗತ್ತಿಗೆ ಸಾರಿ ಹೇಳುತ್ತಿತ್ತು.

ವರುಣನ ಆರ್ಭಟಕ್ಕೂ ಮಣಿಯದ ಭಕ್ತಿಪ್ರವಾಹ: ಜಗದ್ಗುರುಗಳ ಭವ್ಯ ಪ್ರವೇಶಕ್ಕೆ ಎದ್ದು ನಿಂತು ಜೈಕಾರ ಹಾಕಿದ ಸಹಸ್ರಾರು ಭಕ್ತರು!
ಮೆರವಣಿಗೆಯು ಅಲ್ಲಮಪ್ರಭು ಮೈದಾನವನ್ನು ತಲುಪುತ್ತಿದ್ದಂತೆ ವರುಣದೇವನು ಧೋ ಎಂದು ಸುರಿಯತೊಡಗಿದರೂ, ಭಕ್ತರ ಭಕ್ತಿಯ ಪ್ರವಾಹಕ್ಕೆ ಆ ಮಳೆಯೂ ಸೋತಂತೆ ಭಾಸವಾಯಿತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪೂಜ್ಯ ಜಗದ್ಗುರುಗಳು ಸಭಾಂಗಣದ ಒಳಭಾಗದ ವೇದಿಕೆಯತ್ತ ಹೆಜ್ಜೆ ಇಡುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಏಕಕಾಲಕ್ಕೆ ಎದ್ದು ನಿಂತು ಹರ್ಷೋದ್ಗಾರ ಮಾಡಿದರು.
ಪಂಚಪೀಠಾಧೀಶ್ವರರ ದಿವ್ಯ ದರ್ಶನದಿಂದ ಭಕ್ತಿಭಾವದಲ್ಲಿ ತೇಲಿದ ಅಲ್ಲಮಪ್ರಭು ಮೈದಾನದ ಸಭಾಂಗಣ! : “ನಾವೇ ಪುಣ್ಯವಂತರು” ಎಂದ ಭಾವುಕ ಭಕ್ತಸಮೂಹ!
ಇಡೀ ಸಭಾಂಗಣವು ಭಕ್ತರ ಚಪ್ಪಾಳೆಗಳ ಸುರಿಮಳೆ ಹಾಗೂ ಹರ್ಷೋದ್ಗಾರಗಳ ಮೂಲಕ ಪ್ರತಿಧ್ವನಿಸಿತು. ‘ಶ್ರೀ ಪಂಚಾಚಾರ್ಯ ಜಗದ್ಗುರುಗಳಿಗೆ ಜಯವಾಗಲಿ’, ‘ಮಾನವ ಧರ್ಮಕ್ಕೆ ಜಯವಾಗಲಿ’ ಮತ್ತು ‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಗಗನಚುಂಬಿ ಜೈಕಾರಗಳ ಮಹಾಪೂರವೇ ಅಲ್ಲಿ ಹರಿದುಬಂದಿತು. ಆ ಧ್ವನಿಗೆ ಇಡೀ ವಾತಾವರಣವೇ ಮಂತ್ರಮುಗ್ಧವಾಗಿತ್ತು.
ಅಲ್ಲಿದ್ದ ಪ್ರತಿಯೊಬ್ಬ ಭಕ್ತನೂ ಮೈಮನ ರೋಮಾಂಚನಗೊಂಡು, “ಈ ದಿವ್ಯ ದರ್ಶನ ಪಡೆದ ನಾವೇ ಪುಣ್ಯವಂತರು, ನಮ್ಮ ಜನ್ಮವೇ ಪಾವನ” ಎಂದು ಕೃತಜ್ಞತಾ ಭಾವದಿಂದ ಕಣ್ಣೀರು ತುಂಬಿಕೊಂಡರು. ಭಕ್ತಿ ಮತ್ತು ಧನ್ಯತೆಯ ಪರಾಕಾಷ್ಠೆಗೆ ಸಾಕ್ಷಿಯಾದ ಆ ಅಪೂರ್ವ ಕ್ಷಣ, ನಿಜಕ್ಕೂ ಒಂದು ಅದ್ಭುತ ವಿಸ್ಮಯವಾಗಿ ಶಿವಮೊಗ್ಗದ ಇತಿಹಾಸದ ಪುಟ ಸೇರಿತು.

ಮಾನವ ಧರ್ಮ ಪರಿಪಾಲನೆಯಿಂದ ಜಗತ್ಕಲ್ಯಾಣ: ಶ್ರೀ ರಂಭಾಪುರಿ ಜಗದ್ಗುರುಗಳು
“ಮಾನವ ಜೀವನದ ಉನ್ನತಿ ಹಾಗೂ ಶ್ರೇಯಸ್ಸಿಗೆ ಧರ್ಮವೇ ಮೂಲಾಧಾರ. ‘ತಾನು ಎಲ್ಲರಿಗಾಗಿ’ ಎಂದು ಬದುಕುವುದು ನಿಜವಾದ ಧರ್ಮವಾಗಿದೆ. ತತ್ವವನ್ನು ಅರಿತವನಿಗೆ ಮಾತ್ರ ಸತ್ಯದ ಬೆಳಕು ಗೋಚರಿಸಲು ಸಾಧ್ಯ. ಇಂದಿನ ಜಗತ್ತಿಗೆ ಮಾನವ ಧರ್ಮದ ಪರಿಪಾಲನೆ ಅತ್ಯಂತ ಅಗತ್ಯವಿದ್ದು, ಇದರಿಂದ ಮಾತ್ರ ಜಗತ್ಕಲ್ಯಾಣ ಸಾಧ್ಯ ಹಾಗೂ ಎಲ್ಲಾ ಧರ್ಮಗಳು ಒಟ್ಟಾಗಿ ಬೆಳೆಯಲು ಸಾಧ್ಯ,” ಎಂದು ಬಾಳೇಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಧರ್ಮ ಜಾಗೃತಿ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೃತಜ್ಞತಾ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮದ ರಕ್ಷಾ ಕವಚ ಅನಿವಾರ್ಯ: ಜಗದ್ಗುರುಗಳ ಸಂದೇಶ
ಸಮಾವೇಶದಲ್ಲಿ ಭಾಗವಹಿಸಿದ್ದ ಜಗದ್ಗುರುಗಳು ಧರ್ಮ ಮತ್ತು ಸಮಾಜದ ಕುರಿತು ನುಡಿಗಳನ್ನಾಡಿದರು:
ಶ್ರೀ ರಂಭಾಪುರಿ ಜಗದ್ಗುರುಗಳು: “ಯಾವಾಗಲೂ ನಾಶವಾಗದೇ ಉಳಿಯುವುದೇ ನಿಜವಾದ ಧರ್ಮ. ಇದನ್ನು ನಾಶಮಾಡುವ ಶಕ್ತಿ ಯಾರಿಗೂ ಇಲ್ಲ. ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಧರ್ಮಪ್ರಜ್ಞೆ ಅತ್ಯಗತ್ಯ. ಜಾತಿ, ಜನಾಂಗಗಳ ಗಡಿ ಮೀರಿ ವಿಶ್ವ ಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ‘ದಶಧರ್ಮ ಸೂತ್ರಗಳು’ ಸಕಲ ಮಾನವರಿಗೂ ಹಿತಕಾರಿ. ವೈಚಾರಿಕತೆಯ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶವಾಗಬಾರದು. ವೀರಶೈವ ಧರ್ಮದ ರಾಷ್ಟ್ರೀಯ ಗುರುಪೀಠಗಳಾದ ಪಂಚಪೀಠಗಳು ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿವೆ.” ಎಂದು ಹೇಳಿದರು.

ನಾಡು-ನುಡಿಗೆ ಐದು ದಶಕಗಳ ಸೇವೆ ಸಲ್ಲಿಸಿದ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ:ಶ್ರೀ ರಂಭಾಪುರಿ ಜಗದ್ಗುರುಗಳು
ರಾಜ್ಯ ಕಂಡ ಧೀಮಂತ ಜನನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಐದು ದಶಕಗಳಿಗೂ ಹೆಚ್ಚು ಕಾಲ ನಾಡು-ನುಡಿಗೆ ಸಮರ್ಪಿತವಾಗಿ ಶ್ರಮಿಸಿ, ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರಲ್ಲಿರುವ ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವವು ರಾಜ್ಯದ ಸಮಗ್ರ ಪ್ರಗತಿಗೆ ದಾರಿ ಮಾಡಿಕೊಟ್ಟಿದೆ. ವಿಶೇಷವಾಗಿ ಶಿವಮೊಗ್ಗ ನಗರಕ್ಕೆ ಅವರು ನೀಡಿರುವ ಅಪಾರ ಕೊಡುಗೆ ಸದಾ ಸ್ಮರಣೀಯವಾಗಿದೆ. ಅವರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಶಿವಮೊಗ್ಗದ ಜನತೆ ಹಮ್ಮಿಕೊಂಡಿರುವ ಕೃತಜ್ಞತಾ ಸಮಾರಂಭ ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.

ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜವಾದ ಧರ್ಮ: ಶ್ರೀ ಉಜ್ಜಯಿನಿ ಜಗದ್ಗುರುಗಳು
ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು: ”ಕೇವಲ ಆಚರಣೆಗಳು ಧರ್ಮವಲ್ಲ, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವ ಮತ್ತು ಒಂದು ಪರಿಪಕ್ವ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯವೇ ನಿಜವಾದ ಧರ್ಮವಾಗಿದೆ. ಪ್ರತಿಯೊಬ್ಬ ಮಾನವನ ಜೀವನವೂ ಸತ್ಯ ಮತ್ತು ಸೈದ್ಧಾಂತಿಕ ತಳಹದಿಯ ಮೇಲೆ ರೂಪಿತಗೊಳ್ಳಬೇಕಾದ ಅಗತ್ಯವಿದೆ. ಯಾರು ತತ್ವ ಮತ್ತು ಸತ್ಯದ ಹಾದಿಯಲ್ಲಿ ನಡೆಯುತ್ತಾರೋ ಅವರ ಬದುಕು ಸಾರ್ಥಕವಾಗುತ್ತದೆ.
ಬಿ.ಎಸ್. ಯಡಿಯೂರಪ್ಪನವರ ಸುದೀರ್ಘ ರಾಜಕೀಯ ಬದುಕನ್ನು ಗಮನಿಸಿದರೆ ಅವರ ರೈತಪರ ಹೋರಾಟಗಳು ಮತ್ತು ಸಮಾಜದ ಎಲ್ಲಾ ವರ್ಗದ ಜನರ ಬಗ್ಗೆ, ಸಾಮರಸ್ಯದ ಬಗ್ಗೆ ಅವರಿಗಿರುವ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಅದ್ಭುತವಾದ ಧರ್ಮ ಸಮಾವೇಶವನ್ನು ಹಮ್ಮಿಕೊಂಡಿರುವುದು ಮತ್ತು ಸಮಾಜದ ಜನರು ಒಟ್ಟಾಗಿ ಸೇರಿರುವುದು ಸಾರ್ವಜನಿಕರ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ.”ಎಂದು ಹೇಳಿದರು.

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲ ನಂಬಿಕೆಯನ್ನು ಮರೆಯಬಾರದು: ಶ್ರೀ ಶ್ರೀಶೈಲ ಜಗದ್ಗುರುಗಳು
ಶ್ರೀ ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು: ”ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒಂದು ವಿಚಿತ್ರ ಪ್ರವೃತ್ತಿ ಬೆಳೆಯುತ್ತಿದೆ. ನಮ್ಮ ಹಿರಿಯರು ನಂಬಿಕೊಂಡು ಬಂದ ಮೂಲ ನಂಬಿಕೆಗಳನ್ನು ಮತ್ತು ಸಂಸ್ಕಾರಗಳನ್ನು ಕೆಲವರು ‘ಮೂಢನಂಬಿಕೆಗಳು’ ಎಂದು ಕರೆದು ಅಸತ್ಯದ ಮಾತುಗಳನ್ನು ಆಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಸತ್ಯವೇ ನಿಜವಾದ ಒಂದು ಧರ್ಮವಾಗಿದೆ. ಈ ಸತ್ಯ ಮತ್ತು ಧರ್ಮವೇ ಮನುಷ್ಯ ಕುಲವನ್ನು ಕಾಯುವ ನಿಜವಾದ ರಕ್ಷಾ ಕವಚ.
ಒಂದು ವೇಳೆ ಧರ್ಮದ ಈ ರಕ್ಷಾ ಕವಚವೇ ಕಳಚಿ ಬಿದ್ದರೆ, ಈ ನಾಡಿನಲ್ಲಿ ಸಂಸ್ಕೃತಿ, ಸಂಸ್ಕಾರ ಎನ್ನುವ ಪವಿತ್ರವಾದದ್ದು ಏನೂ ಉಳಿಯಲು ಸಾಧ್ಯವಿಲ್ಲ. ಮನುಷ್ಯ ತನ್ನ ಶ್ರಮ ಮತ್ತು ಸಾಧನೆಯಿಂದ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ತನಗೆ ಜನ್ಮ ನೀಡಿದ, ಸಂಸ್ಕಾರ ನೀಡಿದ ತನ್ನ ಮೂಲವನ್ನು ಮತ್ತು ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು.”ಎಂದು ಹೇಳಿದರು

ಕೋಟಿ ಕೊಟ್ಟರೂ ಆಯುಷ್ಯದ ಒಂದು ಕ್ಷಣವನ್ನೂ ಖರೀದಿಸಲಾಗದು: ‘ಸರ್ವರಿಗೂ ಸಮಪಾಲು-ಸಮಬಾಳು’ ತತ್ವವನ್ನು ಬದುಕಿನಲ್ಲಿ ಆಚರಿಸಿದ ಧೀಮಂತ ನಾಯಕ.
ಶ್ರೀ ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು: ”ಮನುಷ್ಯನ ಬದುಕಿನಲ್ಲಿ ಕಾಲ ಮತ್ತು ಆಯುಷ್ಯ ಅತ್ಯಂತ ಅಮೂಲ್ಯವಾದದ್ದು. ಮೌಲ್ಯಯುತವಾದ ಆಯುಷ್ಯದ ಕೇವಲ ಒಂದು ಕ್ಷಣವನ್ನು ಸಹ ಯಾರೂ ಸಾವಿರ ಸುವರ್ಣ ಮುದ್ರೆಗಳನ್ನು ಕೊಟ್ಟರೂ ಖರೀದಿಸಲು ಸಾಧ್ಯವಿಲ್ಲ. ಅಂತಹ ಅತ್ಯಂತ ಅಮೂಲ್ಯವಾದ ತನ್ನ ಆಯುಷ್ಯದ 50 ಸುದೀರ್ಘ ವರ್ಷಗಳನ್ನು ಸಾರ್ವಜನಿಕ ಜೀವನದಲ್ಲಿ, ಸಮಾಜ ಸೇವೆಯಲ್ಲಿ ಸವೆಸಿದ ಅಪೂರ್ವ ಮತ್ತು ಧೀಮಂತ ವ್ಯಕ್ತಿ ಬಿ.ಎಸ್. ಯಡಿಯೂರಪ್ಪನವರಾಗಿದ್ದಾರೆ.
’ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಸಾಮಾಜಿಕ ಘೋಷವಾಕ್ಯವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ತಮ್ಮ ಆಡಳಿತ ಮತ್ತು ಬದುಕಿನಲ್ಲಿ ನಿಜವಾಗಿ ಆಚರಣೆಗೆ ತಂದು, ಸರ್ವಧರ್ಮೀಯರನ್ನು ಸಮಾನವಾಗಿ ಕಂಡ ಅಪರೂಪದ ನಾಯಕ ಅವರಾಗಿದ್ದಾರೆ. ಇಂದು ಪಂಚಪೀಠಗಳ ದಿವ್ಯ ಸಾನ್ನಿಧ್ಯದಲ್ಲಿ ಇಡೀ ಸಮಾಜವೇ ಒಟ್ಟಾಗಿ ಅವರಿಗೆ ಕೃತಜ್ಞತಾ ಗೌರವವನ್ನು ಸಲ್ಲಿಸುತ್ತಿರುವುದು ಸರ್ವರಿಗೂ ಸಂತೋಷವನ್ನುಂಟು ಮಾಡಿದೆ. ಇವರ ಈ ನಿಸ್ವಾರ್ಥ ಸಮಾಜ ಸೇವೆಯು ಮುಂದಿನ ತಲೆಮಾರಿಗೆ ಆದರ್ಶವಾಗಿದೆ.”ಎಂದು ಹೇಳಿದರು.

ಪುಟಗಳನ್ನು ಬದಲಾಯಿಸಬಹುದು, ಆದರೆ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ: ಶ್ರೀ ಕಾಶಿ ಪೀಠದ ನೂತನ ಜಗದ್ಗುರುಗಳು
ಶ್ರೀ ಕಾಶಿ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯರು: “ನಾವು ಈ ಭೂಮಿಯ ಮೇಲೆ ಹೇಗೆ ಬದುಕುತ್ತೇವೆ ಎಂಬುದು ಮುಖ್ಯ. ನಮ್ಮ ಬದುಕು ಸದಾ ಇನ್ನೊಬ್ಬರಿಗೆ ಮಾದರಿಯಾಗಬೇಕೇ ಹೊರತು ಯಾವುದೇ ಕಾರಣಕ್ಕೂ ಸಮಾಜಕ್ಕೆ ಮಾರಕವಾಗಬಾರದು. ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅತಿ ವೇಗವಾಗಿ ಬೆಳೆಯುತ್ತಿವೆ, ಆದರೆ ಅದಕ್ಕೆ ತಕ್ಕಂತೆ ಮನುಷ್ಯನ ಒಳಗಣ್ಣು ಮತ್ತು ಮಾನವೀಯ ಭಾವನೆಗಳು ಬೆಳೆಯುತ್ತಿಲ್ಲ ಎಂಬುದು ವಿಷಾದನೀಯ.
ನಮ್ಮ ಪೂರ್ವಜರು ತಮ್ಮ ಅನುಭವದ ಮೂಲಕ ನುಡಿದ ನುಡಿಗಳು ಮತ್ತು ಹಾಕಿಕೊಟ್ಟ ದಾರಿ ಇಂದಿನ ದಾರಿ ತಪ್ಪುತ್ತಿರುವ ತಲೆಮಾರಿಗೆ ದಾರಿದೀಪ ಹಾಗೂ ಆಶಾಕಿರಣವಾಗಿದೆ. ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಕಾಲಕ್ಕೆ ತಕ್ಕಂತೆ ನಾವು ಪುಸ್ತಕದ ಪುಟಗಳನ್ನು ಬದಲಾಯಿಸಬಹುದು. ಆದರೆ ನಮ್ಮ ಹಿರಿಯರು, ಶರಣರು ಮತ್ತು ಧೀಮಂತ ನಾಯಕರು ಸಮಾಜಕ್ಕಾಗಿ ಬರೆದ ಸುವರ್ಣ ಇತಿಹಾಸವನ್ನು ಬದಲಾಯಿಸಲು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ.”ಎಂದು ಹೇಳಿದರು.
ಈ ಐದೂ ಜಗದ್ಗುರುಗಳ ಅಮೃತ ಸಂದೇಶಗಳು ಸಮಾವೇಶದಲ್ಲಿದ್ದ ಸಹಸ್ರಾರು ಭಕ್ತರ ಮನ ಮುಟ್ಟುವಲ್ಲಿ ಯಶಸ್ವಿಯಾದವು ಮತ್ತು ಧರ್ಮ ಹಾಗೂ ಸಮಾಜದ ಮುನ್ನಡೆಗೆ ಹೊಸ ದಿಕ್ಸೂಚಿಯನ್ನು ನೀಡಿದವು.

ರಾಜ್ಯಾದ್ಯಂತ ಜನಕಲ್ಯಾಣದ ಹೊಸ ಮನ್ವಂತರದ ಸಂಕಲ್ಪ ವ್ಯಕ್ತಪಡಿಸಿದ ಬಿ.ಎಸ್. ಯಡಿಯೂರಪ್ಪ
ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸುದೀರ್ಘ ರಾಜಕೀಯ ಸೇವೆಯನ್ನು ಗೌರವಿಸಿ ಕೃತಜ್ಞತಾ ಸನ್ಮಾನ ನೆರವೇರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ದಿನ ತಮ್ಮ ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣವೆಂದು ಭಾವುಕರಾಗಿ ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಂಚರಿಸಿ ಹೊಸ ಚಿಂತನೆ ಮತ್ತು ಹೊಸ ಮನ್ವಂತರಕ್ಕೆ ದಾರಿ ಮಾಡಿಕೊಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಪಕ್ಷಭೇದ ಹಾಗೂ ಜಾತಿಭೇದಗಳನ್ನು ಮರೆತು, ಜನಕಲ್ಯಾಣವೇ ತಮ್ಮ ಜೀವನದ ಗುರಿಯಾಗಿರಲಿದೆ ಎಂದು ಅವರು ಹೇಳಿದರು.


ವಿವಿಧ ಮಠಗಳ 70ಕ್ಕೂ ಹೆಚ್ಚು ಮಠಾಧೀಶರ ಸಾನ್ನಿಧ್ಯದಲ್ಲಿ ನಡೆದ ಈ ಧಾರ್ಮಿಕ ಸಮಾರಂಭವು ಆಧ್ಯಾತ್ಮಿಕ ವೈಭವಕ್ಕೆ ಸಾಕ್ಷಿಯಾಯಿತು
ಈ ಧರ್ಮ ಸಭೆಯಲ್ಲಿ ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸಿಂದಗಿ ಪ್ರಭು ಸಾರಂಗದೇವ ಶಿವಾಚಾರ್ಯರು ಸೇರಿದಂತೆ ಹೊನ್ನಾಳಿ, ಬಿಳಕಿ, ಮಳಲಿ, ತೊಗರ್ಸಿ, ತಾವರೆಕೆರೆ, ಕಣಸೋಗಿ, ಶಿಕಾರಿಪುರ (ಶಿರಾಳಕೊಪ್ಪ), ವೀರಾಪುರ, ಹಿರೇಮಾಗಡಿ, ಕೆಲದಿ, ಸಾಲೂರು, ಜಡೆ, ತಾಳಗುಪ್ಪ, ದಿಂಡದಹಳ್ಳಿ, ಕವಲೇದುರ್ಗ, ಗೊಗ್ಗಿಹಳ್ಳಿ, ಮೂಡಿ, ಕೋಣಂದೂರು, ಹಾರನಹಳ್ಳಿ, ಕಡೇನಂದಿಹಳ್ಳಿ, ಶಾಂತಪುರ ಮಠ ಸೇರಿದಂತೆ ಜಿಲ್ಲೆ ಹೊರ ಜಿಲ್ಲೆಗಳ 70ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.
ಈ ಧರ್ಮ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ,
ಶಾಸಕರಾದ ಚನ್ನಬಸಪ್ಪ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ್ರು, ಹೆಚ್.ಎಂ.ಚಂದ್ರಶೇಖರಪ್ಪ, ಹೆಚ್. ಹಾಲಪ್ಪ , ರೇಣುಕಾಚಾರ್ಯ, ಲಕ್ಷ್ಮೀನಾರಾಯಣ, ಮಡಾಳು ಮಲ್ಲಿಕಾರ್ಜುನ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ರುದ್ರುಮನಿ ಸಜ್ಜನ್, ಮಹೇಶ್ವರಯ್ಯ, ವಿರೂಪಾಕ್ಷಪ್ಪ, ಬಳ್ಳೇಕೆರೆ ಸಂತೋಷ್, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್.ಪಿ. ದಿನೇಶ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.









