ಚಿಕ್ಕಮಗಳೂರು: “ಜೀವನದಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಲು ಧರ್ಮದ ಅವಶ್ಯಕತೆಯಿದೆ. ಗುರುದರ್ಶನ ಪುಣ್ಯದ ಫಲವಾಗಿದ್ದು, ಅವರ ಅನುಗ್ರಹ ಮತ್ತು ಸತ್ಸಂಗದಿಂದ ಮಾತ್ರ ಸಂಸಾರದ ಬಂಧನದಿಂದ ಮುಕ್ತಿ ಹೊಂದಲು ಸಾಧ್ಯ,” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ’ ಹಾಗೂ ಭಕ್ತಿ ಭಂಡಾರಿ ‘ಶ್ರೀ ಬಸವೇಶ್ವರ ಜಯಂತಿ’ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

”ಗುರು-ಶಿಷ್ಯರ ಸಂಬಂಧವೇ ಜೀವನದ ಬೆಳಕು; ಶಿವಪಥದತ್ತ ಸಾಗಲು ಗುರುಪಥವೇ ಮೊದಲ ಮೆಟ್ಟಿಲು.” – ಶ್ರೀ ರಂಭಾಪುರಿ ಜಗದ್ಗುರುಗಳು
ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ರಂಭಾಪುರಿ ಜಗದ್ಗುರುಗಳು, “ಲೌಕಿಕ ಸಂಬಂಧಗಳು ಕಾಲದ ಹೊಳೆಯಲ್ಲಿ ಸವೆದು ಹೋಗಬಹುದು, ಆದರೆ ಗುರು-ಶಿಷ್ಯರ ಸಂಬಂಧ ಶಾಶ್ವತವಾದದ್ದು. ನೋವಿನ ಬದುಕಿಗೆ ಬೆಳಕಾಗಿ ಮಾರ್ಗದರ್ಶನ ನೀಡುವವರು ಗುರು. ವೀರಶೈವ ಧರ್ಮವೆಂಬ ವೃಕ್ಷಕ್ಕೆ ಜಗದ್ಗುರು ರೇಣುಕಾಚಾರ್ಯರು ಮೂಲ ಬೇರಾದರೆ, ಬಸವಣ್ಣನವರಂತಹ ಶರಣರು ಆ ವೃಕ್ಷದ ಫಲ ಪುಷ್ಪಗಳಿದ್ದಂತೆ. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವಪಥವನ್ನು ಅರಿಯಲು ಗುರುಪಥವೇ ಮೊದಲ ಮೆಟ್ಟಿಲು ಎಂದು ಸಾರಿದ ಬಸವಣ್ಣನವರು, ಕಾಯಕದ ಮೂಲಕವೇ ಕೈಲಾಸವನ್ನು ಕಾಣುವ ಮಾರ್ಗವನ್ನು ತೋರಿಸಿಕೊಟ್ಟರು,” ಎಂದು ವಿವರಿಸಿದರು.

ಗುರು ಕರುಣೆಯೇ ಬದುಕಿನ ದಾರಿ: ಶಾಸಕ ಹೆಚ್.ಡಿ.ತಮ್ಮಯ್ಯ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು, “ತಂದೆ ಮೆಚ್ಚಿದರೆ ಮಗನಿಗೆ ಶ್ರೇಯಸ್ಸು, ಗುರು ಮೆಚ್ಚಿದರೆ ಶಿಷ್ಯನಿಗೆ ಸದ್ಗತಿ ದೊರೆಯುತ್ತದೆ. ಗುರುದೇವನ ಕರುಣೆಗೆ ಸಮಾನವಾದದ್ದು ಮತ್ತೊಂದಿಲ್ಲ, ಅದು ಜೀವನದ ದೊಡ್ಡ ಆಸ್ತಿ,” ಎಂದು ಬಣ್ಣಿಸಿದರು.
”ಬದುಕಿಗೆ ಒಂದು ಗುರಿ, ಮಾರ್ಗದರ್ಶನಕ್ಕೆ ಒಬ್ಬ ಗುರು; ಸಾರ್ಥಕ ಜೀವನಕ್ಕೆ ಇದೇ ಮೂಲ ಮಂತ್ರ.” – ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ.
ಬೆಳ್ಳೂಗುಂದ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಭಕ್ತಿ ಭಂಡಾರಿ ಶ್ರೀ ಬಸವೇಶ್ವರರು ಸಮಾಜದ ಕೆಡುಕುಗಳನ್ನು ಮೆಟ್ಟಿ ನಿಂತು, ಒಳಿತಿನ ಕಡೆಗೆ ಸಾಗಲು ಸ್ಫೂರ್ತಿಯಾದ ಮಹಾಪುರುಷರು. ಪ್ರತಿಯೊಬ್ಬರೂ ಬದುಕಿಗೆ ಒಂದು ಗುರಿ ಮತ್ತು ಗುರುವನ್ನು ಹೊಂದುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು,” ಎಂದರು.
ಬದುಕಿನ ವಿಕಾಸಕ್ಕೆ ಬೇಕು ಅಹಿಂಸೆ ಮತ್ತು ಧ್ಯಾನದ ಮೌಲ್ಯಗಳು, ಶ್ರೀ ರೇಣುಕಾಚಾರ್ಯರ ತತ್ವಗಳೇ ನಮ್ಮ ಬದುಕಿನ ದಾರಿದೀಪ: ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಅಹಿಂಸೆಯಿಂದ ಹಿಡಿದು ಧ್ಯಾನದವರೆಗಿನ ದಶಧರ್ಮ ಸೂತ್ರಗಳು ಮಾನವನ ಜೀವನ ವಿಕಾಸಕ್ಕೆ ಬುನಾದಿ. ಭೌತಿಕ ಜೀವನದ ಯಶಸ್ಸಿಗೆ ರೇಣುಕಾಚಾರ್ಯರ ತತ್ವ ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ,” ಎಂದು ಅಭಿಪ್ರಾಯಪಟ್ಟರು.

ಟ್ರಸ್ಟ್ನ ಉಪಾಧ್ಯಕ್ಷ ಜೆ.ಬಿ. ಸುದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೂರ್ಯನ ಬೆಳಕಿಗೆ ಕಮಲ ಅರಳುವಂತೆ, ಗುರುವಿನ ಕರುಣೆಗೆ ಆತ್ಮ ಅರಳುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ನಡೆಯಿತು ಮತ್ತು ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು 16 ಜನ ವಿದ್ಯಾರ್ಥಿಗಳಿಗೆ ಶಿವದೀಕ್ಷೆ ಹಾಗೂ ಮಂತ್ರೋಪದೇಶ ನೀಡಿದರು. ಸಮಾರಂಭದಲ್ಲಿ ರೇಣುಕಾಚಾರ್ಯ ಟ್ರಸ್ಟ್ನ ಪದಾಧಿಕಾರಿಗಳಾದ ಯು.ಎಂ. ಬಸವರಾಜು, ಎಂ.ಡಿ. ಪುಟ್ಟಸ್ವಾಮಿ, ಎಸ್.ಎಂ. ದೇವಣ್ಣಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.











