ಬೆಂಗಳೂರು: ಆಧುನಿಕ ಜೀವನಶೈಲಿ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಸಮಾಜದ ಉದಾತ್ತ ಮೌಲ್ಯಗಳು, ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ಸಂಸ್ಕಾರಗಳು ನಿಧಾನವಾಗಿ ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಯುವ ಪೀಳಿಗೆಗೆ ಧಾರ್ಮಿಕ ಅರಿವು, ಗುರುಪರಂಪರೆಯ ಮಹತ್ವ ಮತ್ತು ಬಸವತತ್ತ್ವದ ಮೌಲ್ಯಗಳನ್ನು ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರಸ್ತುತ ಹಾಗೂ ಶ್ಲಾಘನೀಯವಾಗಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಯಲಹಂಕದ ಹಾರೋಹಳ್ಳಿಯ ನಿವಾಸದಲ್ಲಿ ವಿನಾಯಕ ಫೈನಾನ್ಸಿಯಲ್ ಸರ್ವಿಸಸ್‌ನ ಮಾಲೀಕರಾದ ಎನ್.ಎಸ್. ಆಂಜನೇಯ (ನಿಂಬೇಗೊಂದಿ) ಮತ್ತು ಶ್ರೀಮತಿ ಚೈತ್ರಾ ದಂಪತಿಗಳ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ, ಇಷ್ಟಲಿಂಗ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಪರಿಸರ ಜಾಗೃತಿ ಮೂಡಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಕ್ಕಮಗಳೂರಿನ ಶ್ರೀ ಬಸವತತ್ತ್ವ ಪೀಠ ಹಾಗೂ ಶಿವಮೊಗ್ಗದ ಬಸವಕೇಂದ್ರದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ವಹಿಸಿದ್ದರು.


ಸಂಸ್ಕಾರಗಳ ಉಳಿವಿಗೆ ಕುಟುಂಬಗಳ ಪಾತ್ರ ಮಹತ್ವದ್ದು: ಬಸವತತ್ತ್ವದ ಅರಿವು ಮೂಡಿಸುವ ಕುಟುಂಬದ ಪ್ರಯತ್ನ ಶ್ಲಾಘನೀಯ – ಸಿ.ಎಸ್. ಷಡಾಕ್ಷರಿ
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಸ್. ಷಡಾಕ್ಷರಿ ಅವರು, ಇಂದಿನ ಆಧುನಿಕ ಜೀವನಶೈಲಿಯ ನಡುವೆ ಸಮಾಜದ ಸಂಸ್ಕಾರ, ಗುರುಪರಂಪರೆ, ಧಾರ್ಮಿಕ ಆಚರಣೆಗಳು ಹಾಗೂ ಕುಟುಂಬ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
“ವೀರಶೈವ ಲಿಂಗಾಯತ ಸಮಾಜದ ಶ್ರೀಮಂತ ಗುರುಪರಂಪರೆ, ಸಂಸ್ಕೃತಿ, ಆಚರಣೆ-ವಿಚಾರಗಳು ಹಾಗೂ ಬಸವತತ್ವದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಕುಟುಂಬ ಮಟ್ಟದಲ್ಲಿ ಮಾಡುವುದೇ ನಿಜವಾದ ಸಮಾಜ ಸೇವೆಯಾಗಿದೆ. ಆ ನಿಟ್ಟಿನಲ್ಲಿ ಶ್ರೀಮತಿ ಚೈತ್ರಾ ಮತ್ತು ಶ್ರೀ ಎನ್.ಎಸ್. ಆಂಜನೇಯ ದಂಪತಿಗಳು ತಮ್ಮ ಮನೆಯಲ್ಲಿ ಇಷ್ಟಲಿಂಗ ಪೂಜೆ, ಗುರುವಂದನೆ ಹಾಗೂ ಬಸವೇಶ್ವರ ಜಯಂತಿಯಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನತೆಯಲ್ಲಿ ಧಾರ್ಮಿಕ ಜಾಗೃತಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಸಂಸ್ಕಾರಗಳ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ ಎಂದು ಅವರು ಹೇಳಿದರು.



ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ವಿಶ್ವದಾದ್ಯಂತ ಬಸವತತ್ತ್ವ ಪ್ರಸಾರ ಸೇವೆಗೆ ಸಿ.ಎಸ್. ಷಡಾಕ್ಷರಿ ಶ್ಲಾಘನೆ
ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ಸಮಾಜಮುಖಿ ಕಾರ್ಯ, ಸರಳ ವ್ಯಕ್ತಿತ್ವ ಹಾಗೂ ದಿವ್ಯ ಸಂಸ್ಕಾರದ ನಡೆ-ನುಡಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು, “ಪೂಜ್ಯ ಸ್ವಾಮೀಜಿಗಳು ಹಗಲು-ರಾತ್ರಿ ಎನ್ನದೆ ವೀರಶೈವ ಲಿಂಗಾಯತ ಸಮಾಜದ ಆಚಾರ-ವಿಚಾರಗಳು, ಉದಾತ್ತ ಗುರುಪರಂಪರೆ ಹಾಗೂ ವಿಶ್ವಗುರು ಬಸವಣ್ಣನವರ ಮಾನವೀಯ ತತ್ತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪ್ರವಚನಗಳು, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಯುವಜನತೆಗೆ ದಾರಿ ತೋರುವ ಜ್ಞಾನದ ದೀಪವಾಗಿ, ಸಮಾಜಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
“ದೇಶದ ಗಡಿಗಳನ್ನು ಮೀರಿ ಯುರೋಪ್ ಸೇರಿದಂತೆ ವಿದೇಶಗಳಲ್ಲಿಯೂ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ, ಬಸವತತ್ತ್ವದ ವಿಶ್ವಮಾನವೀಯ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಬಸವಣ್ಣನವರ ಸಮಾನತೆ, ಮಾನವೀಯತೆ ಮತ್ತು ಕಾಯಕ ತತ್ತ್ವಗಳನ್ನು ವಿಶ್ವದ ಮೂಲೆಮೂಲೆಗೂ ತಲುಪಿಸುವ ಪೂಜ್ಯರ ಅವಿರತ ಪರಿಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ಇಂತಹ ಜ್ಞಾನಸಂಪನ್ನ, ದೂರದೃಷ್ಟಿಯುಳ್ಳ ಹಾಗೂ ಸಮಾಜದ ಒಳಿತನ್ನೇ ಧ್ಯೇಯವಾಗಿಟ್ಟುಕೊಂಡಿರುವ ಶ್ರೇಷ್ಠ ಗುರುಗಳು ನಮ್ಮ ಸಮಾಜಕ್ಕೆ ದೊರೆತಿರುವುದು ನಮ್ಮೆಲ್ಲರ ಪುಣ್ಯದ ಫಲ” ಎಂದು ಭಕ್ತಿಪೂರ್ವಕವಾಗಿ ನುಡಿದರು.


ಶ್ರೀ ಬಸವಕೇಂದ್ರ ಗುರುಗಳ ಆಗಮನ ನಮ್ಮ ಕುಟುಂಬದ ಮಹಾ ಸೌಭಾಗ್ಯ: ಆಂಜನೇಯ
ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಎನ್.ಎಸ್. ಆಂಜನೇಯ ಅವರು ಮಾತನಾಡಿ, ಪೂಜ್ಯ ಗುರುಗಳ ಮೇಲಿರುವ ಅಪಾರ ಭಕ್ತಿಯನ್ನು ಹಂಚಿಕೊಂಡರು.
“ನಾವು ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳನ್ನು ಭೇಟಿಯಾಗಿ ನಮ್ಮ ಮನೆಗೆ ಆಗಮಿಸಲು ಬಿನ್ನಹ ಮಾಡಿದಾಗ, ಗುರುಗಳು ತಾವು ಯುರೋಪ್ ಪ್ರವಾಸಕ್ಕೆ ಹೋಗುವ ಮುನ್ನ ಬರುವುದಾಗಿ ತಿಳಿಸಿದ್ದರು. ಆದರೆ ನಾವು, ‘ಪೂಜ್ಯ ಗುರುಗಳಲ್ಲಿ, ನೀವು ಯುರೋಪ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬರುವ ಶುಭ ದಿನಾಂಕವನ್ನೇ ನಮಗೆ ನೀಡಿ. ನಮ್ಮ ಬಂಧು-ಬಳಗ ಮತ್ತು ಸಹೋದ್ಯೋಗಿಗಳನ್ನು ಆಹ್ವಾನಿಸಿ ಆ ದಿನವೇ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ’ ಎಂದು ಪ್ರಾರ್ಥಿಸಿದ್ದೆವು. ನಮ್ಮ ಭಕ್ತಿಗೆ ಒಲಿದ ಪೂಜ್ಯ ಗುರುಗಳು ಅದರಂತೆಯೇ ಒಪ್ಪಿ, ಇಂದು ನಮ್ಮ ಮನೆಗೆ ಪಾದಾರ್ಪಣೆ ಮಾಡಿ ಇಷ್ಟಲಿಂಗ ಪೂಜೆ, ಗುರುವಂದನೆ ಹಾಗೂ ಬಸವೇಶ್ವರ ಜಯಂತಿಯ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟಿರುವುದು ನಮ್ಮ ಜನ್ಮ ಸಾರ್ಥಕಗೊಳಿಸಿದೆ. ಗುರುಗಳ ಪೂಜಾ ವಿಧಾನ, ಸಮಾಜದ ಮೇಲಿರುವ ಅವರ ಕಾಳಜಿ ನಮಗೆ ಸದಾ ದಾರಿದೀಪ” ಎಂದರು.


ಸರ್ಕಾರಿ ನೌಕರರ ಧ್ವನಿಯಾಗಿರುವ ಸಿ.ಎಸ್. ಷಡಾಕ್ಷರಿ ಅವರಿಗೆ ಆಂಜನೇಯ ಕೃತಜ್ಞತೆ
ಮುಂದುವರಿದು ಮಾತನಾಡಿದ ಎನ್.ಎಸ್. ಆಂಜನೇಯ ಅವರು, “ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ ಅಮೂಲ್ಯ ಸಮಯ ಮೀಸಲಿಟ್ಟು ನಮ್ಮ ಮನೆಗೆ ಆಗಮಿಸಿರುವುದು ನಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ” ಎಂದರು.
“ಸಿ.ಎಸ್. ಷಡಾಕ್ಷರಿ ಅವರು ಕೇವಲ ಸರ್ಕಾರಿ ನೌಕರರ ಹಕ್ಕುಗಳ ಪರ ಧ್ವನಿಯಾಗಿರುವ ನಾಯಕರು ಮಾತ್ರವಲ್ಲ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಸಮಾಜಕ್ಕೆ ಪ್ರೇರಣೆಯಾಗಿರುವ ವ್ಯಕ್ತಿತ್ವ ಹೊಂದಿದ್ದಾರೆ. ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ಅವರು ಸದಾ ಮುಂಚೂಣಿಯಲ್ಲಿದ್ದಾರೆ. ನಮ್ಮ ಮನೆಗೆ ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ, ಕಾರ್ಯಕ್ರಮಕ್ಕೆ ಮೆರುಗು ತಂದಿರುವುದು ನಮಗೆ ಆನೆಬಲ ನೀಡಿದಂತಾಗಿದೆ.”
ಇದೇ ಸಂದರ್ಭದಲ್ಲಿ, ತಮ್ಮ ಆಹ್ವಾನಕ್ಕೆ ಸ್ಪಂದಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಧು-ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ನೇರ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.


ಕಾರ್ಯಕ್ರಮದಲ್ಲಿ ಎಲ್.ಐ.ಸಿ. ಮುಖ್ಯ ಜೀವ ವಿಮಾ ಸಲಹೆಗಾರರು ಹಾಗೂ ಎಂ.ಡಿ.ಆರ್.ಟಿ., ಚೇರ್ಮನ್ ಕ್ಲಬ್ ಸದಸ್ಯರಾದ ಹೆಚ್. ಈಶ್ವರ, ನಾಗರಾಜ್ ಶಿಕ್ಷಕರು ನಿಂಬೇಗೊಂದಿ, ಹೈಕೋರ್ಟ್ ವಕೀಲರಾದ ಕಾಶಿ, ಡಿಟೆಕ್ಟಿವ್ ನ್ಯೂಸ್ 24 ಮುಖ್ಯ ಸಂಪಾದಕ ಕೆ.ಎಂ. ಸತೀಶ್ ಗೌಡ, ಜೀವ ವಿಮಾ ಸಲಹೆಗಾರರು, ಜಾನಪದ ಕಲಾವಿದರಾದ ಯಂಕೇಶ್ವರಪ್ಪ (ಕೆಂಚಿಕೊಪ್ಪ) ಬೆಂಗಳೂರು, ಬ್ಯುಸಿನೆಸ್ ಸಲ್ಯೂಷನ್ಸ್ ಸಂಸ್ಥೆಯ ಮಾಲೀಕರಾದ ಪ್ರವೀಣ್, ಅರುಣ್, ಶರತ್, ವಿಜಯ್, ಸೋಮನಾಥ್ ಸೇರಿದಂತೆ ಸಮಾಜದ ಅನೇಕ ಮುಖಂಡರು, ಗಣ್ಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು.






