ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​‘ಅನ್ನ ಕೊಡುವ ರೈತರನ್ನು ಬಿಟ್ಟು ಸರ್ಕಾರ ರಿಯಲ್ ಎಸ್ಟೇಟ್ ಪರ ನಿಂತಿದೆ’: ಬಿಡದಿ ಭೂಸ್ವಾಧೀನದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

On: June 17, 2026 9:47 PM
Follow Us:

ಬಿಡದಿ, ಜೂನ್ 17: ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು. ರೈತರ ಬದುಕು ಮತ್ತು ಕೃಷಿಯನ್ನು ಕಡೆಗಣಿಸಿ ಯಾವುದೇ ಅಭಿವೃದ್ಧಿ ಯೋಜನೆ ಜಾರಿಗೊಳಿಸುವುದನ್ನು ಭಾರತೀಯ ಜನತಾ ಪಕ್ಷ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಫಲವತ್ತಾದ ಭೂಮಿ ಕಸಿಯುವ ಸಂಚು: ಬಿ.ವೈ. ವಿಜಯೇಂದ್ರ ಆರೋಪ

“ಕಳೆದ ಹಲವಾರು ದಿನಗಳಿಂದ ಬಿಡದಿ ಭಾಗದ ರೈತರು ಟೌನ್‌ಶಿಪ್ ಯೋಜನೆ ವಿರೋಧಿಸಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಶೇ. 80ರಷ್ಟು ರೈತರು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ ಮತ್ತು ಇಲ್ಲಿನ ಭೂಮಿ ಬರಡಾಗಿದೆ ಎಂದು ಸುಳ್ಳು ಹೇಳುತ್ತಿದೆ. ನಾವು ಇಂದು ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ವಾಸ್ತವವನ್ನು ಕಣ್ಣಾರೆ ಕಂಡಿದ್ದೇವೆ. ಇಲ್ಲಿನ ರೈತರು ತೆಂಗು, ಅಡಿಕೆ, ರೇಷ್ಮೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ಅತ್ಯಂತ ಫಲವತ್ತಾದ ಜಮೀನನ್ನು ರೈತರಿಂದ ಬಲವಂತವಾಗಿ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ” ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಪ್ರಧಾನಿಗಳು ಇಂತಹ ಯಾವುದೇ ಯೋಜನೆಗೆ ಒಪ್ಪಿಗೆ ನೀಡಿಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಹುಡುಗಾಟಿಕೆ ಮಾಡುತ್ತಿದೆ. ಮೋದಿ ಅವರು ಎಂದಿಗೂ ರೈತ ವಿರೋಧಿ ಧೋರಣೆ ತಳೆದವರಲ್ಲ. ಅವರ ಹೆಸರನ್ನು ಇಲ್ಲಿಗೆ ಎಳೆದುತರುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ನಾಚಿಕೆಯಾಗಬೇಕು” ಎಂದು ವಾಗ್ದಾಳಿ ನಡೆಸಿದರು.

ರಾತ್ರೋರಾತ್ರಿ ರೈತರಿಗೆ ಗೂಂಡಾಗಳ ಬೆದರಿಕೆ!

“ಭೂಮಿ ಬಿಟ್ಟುಕೊಡದಿದ್ದರೆ ರಾತ್ರೋರಾತ್ರಿ ಗೂಂಡಾಗಳು ಮನೆಗಳಿಗೆ ಬಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಕೆಲವು ರೈತರು ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ. ಆದರೆ ರೈತರು ಮಾತ್ರ, ‘ನಮ್ಮ ಪ್ರಾಣ ಬೇಕಾದರೂ ಕೊಡುತ್ತೇವೆ, ಜಮೀನು ಮಾತ್ರ ಬಿಡುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾರೆ. ಅನ್ನ ನೀಡುವ ರೈತರ ಪರವಾಗಿ ನಿಲ್ಲಬೇಕಾದ ಮುಖ್ಯಮಂತ್ರಿಗಳು ಇಂದು ರಿಯಲ್ ಎಸ್ಟೇಟ್ ದಂಧೆಕೋರರ ಪರವಾಗಿ ನಿಂತಿರುವುದು ದುರಂತ. ಡಿ.ಕೆ. ಶಿವಕುಮಾರ್ ಅವರೇ, ನಿಮಗೆ ರಿಯಲ್ ಎಸ್ಟೇಟ್ ಮಾಡಲು ರಾಜ್ಯದಲ್ಲಿ ಸಾಕಷ್ಟು ಜಾಗವಿದೆ. ದಯವಿಟ್ಟು ಇಲ್ಲಿನ ಸಣ್ಣ ಹಿಡುವಳಿದಾರರು, ಹೈನುಗಾರಿಕೆ ಹಾಗೂ ರೇಷ್ಮೆ ಬೆಳೆಗಾರರ ಬದುಕನ್ನು ಕಣ್ಣೀರಿನಲ್ಲಿ ತಳ್ಳಬೇಡಿ. ರೈತರ ಹೊಟ್ಟೆಯ ಮೇಲೆ ಹೊಡೆದರೆ ಭಗವಂತ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ಸರ್ಕಾರಕ್ಕೆ ನಿಜವಾಗಿಯೂ ಅಭಿವೃದ್ಧಿಯ ಇಚ್ಛಾಶಕ್ತಿ ಇದ್ದರೆ ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳನ್ನು ಕೊಂಡೊಯ್ದು ಅಲ್ಲಿನ ಯುವಕರಿಗೆ ಉದ್ಯೋಗ ನೀಡಲಿ. ಅದನ್ನು ಬಿಟ್ಟು ಬೆಂಗಳೂರಿನ ಸುತ್ತಮುತ್ತಲಿನ ಫಲವತ್ತಾದ ಜಮೀನನ್ನು ಕಸಿಯಲು ಮುಂದಾದರೆ ವಿರೋಧ ಪಕ್ಷವಾಗಿ ನಾವು ರೈತರ ಪರವಾಗಿ ಬಲವಾದ ಧ್ವನಿ ಎತ್ತಲಿದ್ದೇವೆ ಎಂದು ಅವರು ಗುಡುಗಿದರು.

ಬಂಡೆ ಒಡೆಯುವವರಿಗೆ ರೈತರ ಕಷ್ಟ ತಿಳಿಯುವುದಿಲ್ಲ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಕೃಷಿ ಮಾಡಿ ಬದುಕಿದವರಿಗೆ ಮಾತ್ರ ರೈತನ ಕಷ್ಟ ಏನೆಂಬುದು ತಿಳಿಯುತ್ತದೆ. ಬಂಡೆ ಒಡೆಯುವವರಿಗೆ ರೈತರ ನೋವು ಅರ್ಥವಾಗುವುದಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರೆತ್ತದೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸೆಕ್ಯುರಿಟಿ ಗಾರ್ಡ್‌ಗಳಾಗಲಿರುವ ರೈತರು:

“ಬಿಡದಿಯ ಈ ಭಾಗದಲ್ಲಿ ಎಲ್ಲೂ ಕೂಡ ಅರ್ಧ ಎಕರೆ ಭೂಮಿಯೂ ಪಾಳು ಬಿದ್ದಿಲ್ಲ. ರೈತರು ತೆಂಗು, ಅಡಿಕೆ, ಮಾವು, ಸಪೋಟಾ ಬೆಳೆಯುತ್ತಿದ್ದಾರೆ, ಡೈರಿ ಉದ್ಯಮ ನಡೆಸುತ್ತಿದ್ದಾರೆ. ಇಂತಹ ಸಮೃದ್ಧವಾದ ಜಮೀನನ್ನು ಟೌನ್‌ಶಿಪ್ ನೆಪದಲ್ಲಿ ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದೆ. ನೀವು ನಿಜವಾದ ರೈತನ ಮಗನಾಗಿದ್ದರೆ ಈ ಪಾಪದ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುತ್ತೀರಿ? ಭೂಮಿ ಮಾರಿದ ಹಣದಲ್ಲಿ ಅವರು ಕೆಲವು ದಿನ ಕಾರು, ಬೈಕು ಕೊಳ್ಳಬಹುದು. ಆದರೆ ಹಣ ಖಾಲಿಯಾದ ಮೇಲೆ, ತಮ್ಮದೇ ಜಮೀನಿನಲ್ಲಿ ನಿರ್ಮಾಣವಾಗುವ ಕಾರ್ಖಾನೆಗಳ ಮುಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

​ಸರ್ಕಾರಕ್ಕೆ ಟೌನ್‌ಶಿಪ್ ಮಾಡುವ ಹಠವಿದ್ದರೆ ಚಿಕ್ಕಬಳ್ಳಾಪುರ ಅಥವಾ ದೇವನಹಳ್ಳಿ ಕಡೆ ಸಾವಿರಾರು ಎಕರೆ ಬರಡು ಭೂಮಿ ಸಿಗುತ್ತದೆ, ಅಲ್ಲಿ ಯೋಜನೆ ಮಾಡಲಿ. ಇದರಿಂದ ಅಲ್ಲಿನ ಭೂಮಿಗೂ ಬೆಲೆ ಸಿಗುತ್ತದೆ ಮತ್ತು ರೈತರಿಗೂ ತೊಂದರೆಯಾಗುವುದಿಲ್ಲ. ಅದನ್ನು ಬಿಟ್ಟು ಹಠಕ್ಕೆ ಬಿದ್ದು ರೈತರ ಶಾಪವನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಸಂಸದ ಡಾ. ಸಿ.ಎನ್. ಮಂಜುನಾಥ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ರಾಮನಗರ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

​ಧರ್ಮ ಮತ್ತು ಕಾಯಕದ ಹಾದಿಯಲ್ಲಿ ‘ಶಿವನ ಕುಮಾರ’: ವೀರಶೈವ-ಲಿಂಗಾಯತ ವೇದಿಕೆಯಲ್ಲಿ ಸಿಎಂ ಡಿ.ಕೆ.ಶಿ ಭಾವನಾತ್ಮಕ ಧರ್ಮಸಂದೇಶ!: ‘ಜಾಗ ನನ್ನದು, ಕಟ್ಟಡ ನಿಮ್ಮದು’ – ಮಠಗಳಿಗೆ 2 ಎಕರೆ ಜಾಗ ನೀಡುವ ಭರವಸೆ

Leave a Comment