ಚಿಕ್ಕಮಗಳೂರು, ಜುಲೈ 9: ದೇಶ ಮತ್ತು ಧರ್ಮವು ಮಾನವನ ಬದುಕಿನ ಎರಡು ಕಣ್ಣುಗಳಿದ್ದಂತೆ. ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತದ ಶ್ರೇಷ್ಠ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮರೆಯಬಾರದು. ಭಗವಂತನು ಕರುಣಿಸಿರುವ ಸಂಪತ್ತೇ ಬಾಳಿನ ನಿಜವಾದ ಸಂಪತ್ತು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತೇ ಶ್ರೇಷ್ಠ ಎಂಬ ಸತ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.
ಚಿಕ್ಕಮಗಳೂರು ನಗರದ ವೀರಶೈವ ಲಿಂಗಾಯತ ಸಮಾಜದ ನೂತನ ಭವನದ ಆವರಣದಲ್ಲಿ ನಿರ್ಮಿಸಲಾದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವರು ಮತ್ತು ಧರ್ಮವನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು.

ಮಾನವ ಪರಿಪೂರ್ಣತೆಯೇ ನಿಜವಾದ ಧರ್ಮ: ರಂಭಾಪುರಿ ಶ್ರೀಗಳು
ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಧರ್ಮದ ಮಹತ್ವವನ್ನು ವಿವರಿಸುತ್ತಾ, “ದೇವರು ಮತ್ತು ಧರ್ಮವನ್ನು ಮನುಷ್ಯ ಎಂದಿಗೂ ಮರೆಯಬಾರದು. ದೇವರ ಮೇಲಿನ ಅಚಲ ನಂಬಿಕೆಯು ಮಾನವನ ಜೀವನಕ್ಕೆ ಶಾಶ್ವತ ನಂದಾದೀಪವಾಗಿದೆ. ದೇವರು ಎಲ್ಲರಲ್ಲೂ ನೆಲೆಸಿದ್ದಾನೆ, ಆದರೆ ಎಲ್ಲರೂ ದೇವರಲ್ಲಿ ಲೀನವಾಗಿಲ್ಲ. ಮಾನವನು ಪರಿಪೂರ್ಣತೆಯ ಕಡೆಗೆ ಸಾಗುವುದೇ ನಿಜವಾದ ಧರ್ಮ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಖಂಡತೆಗೆ ಇರುವ ಬೆಲೆ ಮತ್ತು ಗೌರವ ಎಂದಿಗೂ ಒಡಕಿಗೆ ಸಿಗಲಾರದು ಎಂಬ ಸತ್ಯವನ್ನು ಅರಿತು ಮನುಷ್ಯ ಬಾಳಬೇಕಿದೆ,” ಎಂದರು.
“ಚಿಕ್ಕಮಗಳೂರು ನಗರದಲ್ಲಿ ತಾಲೂಕು ವೀರಶೈವ ಸಮಾಜದ ವತಿಯಿಂದ ನಿರ್ಮಾಣಗೊಂಡಿರುವ ಭವ್ಯವಾದ ‘ಶ್ರೀಮತಿ ಮೈತ್ರಾದೇವಿ ಶ್ರೀ ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಭವನ’ ಸಮಾಜ ಬಾಂಧವರ ಸೌಭಾಗ್ಯವಾಗಿದೆ. ಈ ಸುಂದರ ಕಟ್ಟಡ ನಿರ್ಮಾಣಕ್ಕಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಇನ್ನಿತರ ಗಣ್ಯರು ನೀಡಿದ ಸಹಕಾರ ಶ್ಲಾಘನೀಯ. ಇದು ಅವರಲ್ಲಿರುವ ಸಮಾಜಾಭಿಮಾನ ಮತ್ತು ಧರ್ಮಶ್ರದ್ಧೆಗೆ ಸಾಕ್ಷಿಯಾಗಿದೆ. ಈ ಕಾರ್ಯಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಸಮಾಜ ಬಾಂಧವರಿಗೂ ಹಾರೈಸುತ್ತೇವೆ,” ಎಂದು ಹರಸಿದರು.


ಪರಿಪಕ್ವ ಸಮಾಜ ನಿರ್ಮಾಣವೇ ಧರ್ಮದ ಗುರಿ: ಸಂಸದ ಬಿ.ವೈ. ರಾಘವೇಂದ್ರ
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, “ಒಂದು ಪರಿಪಕ್ವ ಸಮಾಜವನ್ನು ನಿರ್ಮಿಸುವ ಕಾರ್ಯವೇ ನಿಜವಾದ ಧರ್ಮವಾಗಿದೆ. ಮನುಷ್ಯನ ಜೀವನವನ್ನು ಸುಂದರ ಹಾಗೂ ಶುದ್ಧಗೊಳಿಸುವುದೇ ಧರ್ಮದ ಪರಮ ಗುರಿಯಾಗಿದೆ. ಚಿಕ್ಕಮಗಳೂರು ನಗರದ ವೀರಶೈವ ಸಮಾಜ ಬಾಂಧವರು ಸಂಘಟಿತರಾಗಿ ಮಾಡಿರುವ ಈ ಮಹತ್ಕಾರ್ಯವು ಉಳಿದ ಭಾಗಗಳ ಸಮಾಜ ಬಾಂಧವರಿಗೂ ಪ್ರೇರಣೆಯಾಗಿದೆ. ನನ್ನ ತಂದೆ-ತಾಯಿಯವರ ಹೆಸರಿನಲ್ಲಿ ನಿರ್ಮಾಣಗೊಂಡ ಈ ಭವನಕ್ಕೆ ಅಳಿಲು ಸೇವೆ ಸಲ್ಲಿಸುವ ಪುಣ್ಯ ನನ್ನದಾಗಿದೆ. ಇದಕ್ಕಾಗಿ ಸಹಕರಿಸಿದ ಎಲ್ಲ ಸಮಾಜ ಬಾಂಧವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ,” ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜವನ್ನು ಗಟ್ಟಿಗೊಳಿಸುವ ಶಕ್ತಿ ಧರ್ಮಕ್ಕಿದೆ: ಶಾಸಕ ಎಚ್.ಡಿ. ತಮ್ಮಯ್ಯ
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, “ಚಿಕ್ಕಮಗಳೂರು ನಗರಕ್ಕೆ ಈ ಭವ್ಯ ಭವನವು ಹೊನ್ನ ಕಳಸ ಇಟ್ಟಂತೆ ಶೋಭಿಸುತ್ತಿದೆ. ಇದು ಎಲ್ಲರಿಗೂ ಅತ್ಯಂತ ಸಂತೋಷ ತಂದಿದೆ. ಇತ್ತೀಚಿನ ದಿನಗಳಲ್ಲಿ ಸಡಿಲಗೊಳ್ಳುತ್ತಿರುವ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಧರ್ಮದ ಮುಖ್ಯ ಗುರಿಯಾಗಿದೆ. ಸಮೃದ್ಧ ಮತ್ತು ಸದೃಢ ನಾಡನ್ನು ಕಟ್ಟುವ ಶಕ್ತಿ ಸಮಾಜಕ್ಕಿದೆ ಎಂಬುದಕ್ಕೆ ಈ ಭವನವೇ ಸಾಕ್ಷಿ. ಶ್ರೀ ರಂಭಾಪುರಿ ಜಗದ್ಗುರುಗಳ ಅಮೃತ ಹಸ್ತದಿಂದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿರುವುದು ಎಲ್ಲರ ಧರ್ಮನಿಷ್ಠೆಗೆ ಸಂದ ಜಯವಾಗಿದೆ,” ಎಂದರು.

ಇತಿಹಾಸ ನಿರ್ಮಿಸಿದ ಸಮಾರಂಭ: ಬಿ.ಎ. ಶಿವಶಂಕರ್
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಎ. ಶಿವಶಂಕರ್ ಮಾತನಾಡಿ, “ನಗರದ ಚಾರಿತ್ರಿಕ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನ. ಈ ಹಿಂದೆ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರಮಾಡಿಕೊಳ್ಳುವ ತೀವ್ರ ಆಕಾಂಕ್ಷೆ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅಂದು ಸಾಧ್ಯವಾಗಿರಲಿಲ್ಲ. ಇಂದು ಭವನದ ಆವರಣದಲ್ಲಿ ಶ್ರೀ ಈಶ್ವರ ದೇವಸ್ಥಾನ ನಿರ್ಮಾಣಗೊಂಡು, ಲಿಂಗ ಪ್ರತಿಷ್ಠಾಪನೆಗೆ ಜಗದ್ಗುರುಗಳು ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಭವನ ಮತ್ತು ದೇವಸ್ಥಾನ ನಿರ್ಮಾಣಕ್ಕೆ ತನು-ಮನ-ಧನದಿಂದ ಸಹಕರಿಸಿದ ಎಲ್ಲ ಸದ್ಭಕ್ತರ ಸೇವೆಯನ್ನು ಸಮಾಜವು ಎಂದಿಗೂ ಮರೆಯುವುದಿಲ್ಲ,” ಎಂದು ಕೃತಜ್ಞತೆ ಸಲ್ಲಿಸಿದರು.


ಗಣ್ಯರಿಗೆ ಸನ್ಮಾನ ಮತ್ತು ಪೂಜ್ಯರ ಉಪಸ್ಥಿತಿ
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹಾಗೂ ಶಿವ ದೇವಾಲಯದ ದಾನಿಗಳಾದ ಶ್ರೀಮತಿ ಸಂಗೀತ ಮತ್ತು ಎಸ್.ಬಿ. ತಿಪ್ಪಾರೆಡ್ಡಿ ಕುಟುಂಬದವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹುಲಿಕೆರೆ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು ಹಾಗೂ ಲಕ್ಷ್ಮೀಪುರದ ಜಯಬಸವಾನಂದ ಸ್ವಾಮೀಜಿ ಸೇರಿದಂತೆ ಹತ್ತಾರು ಮಠಾಧೀಶರು ಉಪಸ್ಥಿತರಿದ್ದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಎಚ್.ಎನ್. ನಂಜೇಗೌಡ, ಸಿ.ಬಿ. ನಂದೀಶ್, ಡಿ.ಎಸ್. ಮಮತಾ, ಎಸ್. ದೇವರಾಜ್, ಯು.ಎಂ. ಬಸವರಾಜ್, ಎಂ.ವಿ. ಷಡಾಕ್ಷರಿ, ಬಿ.ಎನ್. ವಿಶ್ವನಾಥ್, ಸಿ.ಕೆ. ಪ್ರಸಾದ್ ಸಿರಿಮನೆ, ಯು.ಎಸ್. ತೇಜೇಶ್ ಕುಮಾರ್, ಎಚ್.ಸಿ. ಚಂದ್ರಮೌಳಿ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಎಂ.ಎಸ್. ನಿರಂಜನ್ ಸ್ವಾಗತಿಸಿದರು. ಎಂ.ಸಿ. ಶಿವಾನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಪ್ರಸಾದ (ಅನ್ನದಾಸೋಹ) ಏರ್ಪಡಿಸಲಾಗಿತ್ತು.











