ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 2028ರ ಚುನಾವಣೆಯಲ್ಲಿ ಜನರು ನಂಜೇಗೌಡರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಲೂರು (ಕೋಲಾರ): ಹಾಸನದಲ್ಲಿ ನನ್ನ ಮುಂದಿನ ಸ್ಪರ್ಧೆ ಕುರಿತು ತೀರ್ಮಾನ ಮಾಡಿಲ್ಲ. ಎಷ್ಟೇ ಸಲ ಸೋತರೂ ಕಳೆಗುಂದುವುದು ನಮ್ಮ ರಕ್ತದಲ್ಲೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಾಲೂರು-ಹೊಸೂರು ರಸ್ತೆಯ ಆರ್.ಜಿ ಕಲ್ಯಾಣ ಮಂಟಪದಲ್ಲಿ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜನತಾದಳದಿಂದ ಬೆಳೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಈಗ ಜನತಾದಳ ಎಲ್ಲಿದೆ ಎಂದು ಕೇಳುತ್ತಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಿ ಮನೆಗೆ ಕಳುಹಿಸಲಿದ್ದು, ಒಂದು ವೇಳೆ ಮತ್ತೊಮ್ಮೆ ಅವರೇ ಆಯ್ಕೆಯಾದರೆ ನಾನು ಮಾಲೂರಿನತ್ತ ತಲೆ ಹಾಕುವುದಿಲ್ಲ ಎಂದು ಶಪಥ ಮಾಡಿದರು.
ರಾಜ್ಯದಲ್ಲಿ ಭ್ರಷ್ಟಚಾರ ಮಾಡುವ ಶಾಸಕರು ಹೆಚ್ಚಾಗಿರೋದಕ್ಕೆ ಜನತೆ ಕಷ್ಟ ಅನುಭವಿಸುವಂತಾಗಿದೆ. ಭೂಹಗರಣ, ಡೇರಿ ನೇಮಕಾತಿಯಲ್ಲಿ ಅವ್ಯವಹಾರ ಸೇರಿ ಹೈಕೋರ್ಟ್ನಲ್ಲಿ ನಂಜೇಗೌಡರ ವಿರುದ್ಧ ಪ್ರಕರಣಗಳಿವೆ. ಕೋವಿಡ್ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಜಿ.ಇ.ರಾಮೇಗೌಡರು ತಾಲೂಕಿನ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಆದರೂ ಚುನಾವಣೆ ಫಲಿತಾಂಶ ಅವರಿಗೆ ಆಘಾತ ಉಂಟುಮಾಡಿದೆ. ಸೋಲಿನ ನೋವು ನನಗೂ ಅರ್ಥ ಆಗುತ್ತದೆ ಎಂದರು.
ಕುರ್ಚಿಗಾಗಿ ದೇಹಲಿ ಯಾತ್ರೆ:
ಪ್ರಸ್ತುತ ರಾಜ್ಯದ ನಾಯಕರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆಯಾಗಿದ್ದು, ಒಬ್ಬರು ಸಿಎಂ ಕುರ್ಚಿಗಾಗಿ, ಇನ್ನೊಬ್ಬರು ಡಿಸಿಎಂ ಕುರ್ಚಿಗಾಗಿ, ಮತ್ತೊಬ್ಬರು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗುತ್ತಿದ್ದಾರೆ. ನಮ್ಮ ನಾಡಿನ ಸಂಪತ್ತನ್ನು ನಾಡಿನ ಅಭಿವೃದ್ಧಿಗೆ ಬಳಸದೆ ಗ್ಯಾರಂಟಿ ಹೆಸರಲ್ಲಿ ಸುಳ್ಳು ಭರವಸೆ ನೀಡಿ ವೆಚ್ಚ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.











