ಇಲ್ಲೊಬ್ಬರು ಆನ್ಲೈನ್ ಜಗತ್ತಿನಲ್ಲಿ ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಬಳಸುವುದು ಎಂಬುದರ ಮಾಹಿತಿ ಇಲ್ಲಿದೆ.
ಇಂದು ಇಂಟರ್ನೆಟ್ (Internet) ಬಳಕೆ ಮಾಡದೇ ಇರುವವರು ಬಹುಶಃ ಯಾರೂ ಇಲ್ಲ ಎನ್ನಬಹುದು. ಅದರಲ್ಲೂ ಸಾಮಾಜಿಕ ಮಾಧ್ಯಮಗಳು, ಅಪ್ಲಿಕೇಶನ್ಗಳು, ಹಣ ವಿನಿಮಯ, ಶಾಪಿಂಗ್ ಎಲ್ಲವೂ ಆನ್ಲೈನ್ನಲ್ಲೇ (Online) ಆಗುತ್ತವೆ. ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಈ ಪ್ಲಾಟ್ಫಾರ್ಮ್ಗಳಿಂದ ಉಪಯೋಗ ಎಷ್ಟಿದೆಯೋ ಅಷ್ಟೇ ದುಷ್ಪರಿಣಾಮಗಳೂ ಅಷ್ಟೇ ಇವೆ ಅನ್ನೋದನ್ನು ಅಲ್ಲಗಳೆಯಲಾಗದು. ಸಾಮಾಜಿಕ ಮಾಧ್ಯಮಗಳನ್ನು (Social Media) ಅತಿಯಾಗಿ ಬಳಸುವುದು ಮಾನಸಿಕ ಆರೋಗ್ಯದ (Mental Health) ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಆದ್ದರಿಂದ ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ, ಮಿತವಾಗಿ ಬಳಸುವುದು ಅತ್ಯಂತ ಅಗತ್ಯವಾಗಿದೆ.
ಪ್ರಯಾಗ್ ಹಾಸ್ಪಿಟಲ್ಸ್ ಗ್ರೂಪ್ನ ಸಿಇಒ ಪ್ರಿತಿಕಾ ಸಿಂಗ್ ಅವರು ಸಾಮಾಜಿಕ ಮಾಧ್ಯಮದ ಬಳಕೆಯ ಮಹತ್ವ ಮತ್ತು ಮಾನಸಿಕ ಆರೋಗ್ಯದ ಮೇಲೆ ಅದರ ಪ್ರಭಾವವನ್ನು ಒತ್ತಿಹೇಳಿದ್ದಾರೆ. ಆನ್ಲೈನ್ ಜಗತ್ತಿನಲ್ಲಿ ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಬಳಸುವುದು?

ಎಷ್ಟು ಸಮಯ ಆನ್ಲೈನ್ ಇರುತ್ತೀರಿ ಎಂಬುದನ್ನು ನಿರ್ಧರಿಸಿ
ಸಾಮಾಜಿಕ ಮಾಧ್ಯಮಗಳ ಪ್ಲಾಟ್ಫಾರ್ಮ್ಗಳಲ್ಲಿ ನೀವು ಎಷ್ಟು ಸಮಯವನ್ನು ಕಳೆಯುತ್ತೀರಿ ಎಂಬುದನ್ನು ನಿರ್ಣಯಿಸಿ. ಅದರಲ್ಲಿನ ನಿರ್ದಿಷ್ಟ ವಿಷಯವು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಗಮನವಿರಲಿ. ಒತ್ತಡದ ಭಾವನೆ ಉಂಟುಮಾಡುವ ಬುದ್ದಿಹೀನ ಸ್ಕ್ರೋಲಿಂಗ್ ತಡೆಯಲು ವಾಸ್ತವಿಕ ಗಡಿಗಳನ್ನು ಹೊಂದಿಸಿ. ಇಂತಿಷ್ಟೇ ಸಮಯ ಸಾಮಾಜಿಕ ಮಾಧ್ಯಮ ನೋಡಬೇಕೆಂಬುದನ್ನು ನಿರ್ಧರಿಸಿ.
ಧನಾತ್ಮಕ ಆನ್ಲೈನ್ ಪರಿಸರ
ಇದು ಸಾಮಾಜಿಕ ಮಾಧ್ಯಮದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತೊಂದು ಪ್ರಮುಖ ಅಂಶವಾಗಿದೆ. ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುವ ಅಥವಾ ಅನಾರೋಗ್ಯಕರ ಹೋಲಿಕೆಗಳನ್ನು ಪ್ರಚೋದಿಸುವ ಖಾತೆಗಳನ್ನು ಅನುಸರಿಸಬೇಡಿ. ನಿಮ್ಮನ್ನು ಪ್ರೇರೇಪಿಸುವ, ಶಿಕ್ಷಣ ನೀಡುವ ಮತ್ತು ಉನ್ನತಿಗೇರಿಸುವ ಪೇಜ್ಗಳನ್ನು ಫಾಲೋ ಮಾಡಿ. ನಿಮ್ಮ ಡಿಜಿಟಲ್ ಜಾಗದ ಮೇಲೆ ನೀವು ನಿಯಂತ್ರಣ ಹೊಂದಿದ್ದೀರಿ ಎಂಬುದನ್ನು ನೆನಪಿಡಿ.
ಲೈಕ್, ಕಾಮೆಂಟ್ಗಳನ್ನು ಲೆಕ್ಕ ಹಾಕಬೇಡಿ
ಲೈಕ್ಸ್ ಮತ್ತು ಕಾಮೆಂಟ್ಗಳ ಮೂಲಕ ಯಾವುದನ್ನೂ ನಿರ್ಣಯಿಸಬೇಡಿ. ಬದಲಾಗಿ ಅರ್ಥಪೂರ್ಣ ಸಂವಹನಗಳಲ್ಲಿ ತೊಡಗಿಸಿಕೊಳ್ಳಿ. ನಿಜವಾದ ಸಂಪರ್ಕಗಳನ್ನು ಬೆಳೆಸುವ ಗುಣಮಟ್ಟದ ಸಂವಹನಗಳು ಮಾನಸಿಕ ಆರೋಗ್ಯಕ್ಕೆ ಧನಾತ್ಮಕ ಕೊಡುಗೆ ನೀಡುತ್ತವೆ. ಪೋಸ್ಟ್ಗಳಿಗೆ ಚಿಂತನಶೀಲವಾಗಿ ಪ್ರತಿಕ್ರಿಯಿಸುವುದು, ಅರ್ಥಪೂರ್ಣ ಸಂಭಾಷಣೆ ಮತ್ತು ಇತರರನ್ನು ಬೆಂಬಲಿಸುವುದು ನಿಮ್ಮ ಮನಸ್ಸಿಗೆ ಹೆಚ್ಚು ಉಲ್ಲಾಸ ತರಬಹುದು.
ಆನ್ಲೈನ್ – ಆಫ್ಲೈನ್ ಗಡಿಗಳು
ನಿಮ್ಮ ಮಾನಸಿಕ ಆರೋಗ್ಯವನ್ನು ರಕ್ಷಿಸಲು ನಿಮ್ಮ ಆನ್ಲೈನ್ ಮತ್ತು ಆಫ್ಲೈನ್ ಜೀವನದ ನಡುವೆ ಗಡಿಗಳನ್ನು ಸ್ಥಾಪಿಸುವುದು ಅತ್ಯಗತ್ಯ. ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಲು ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿ. ಮಲಗುವ ಮುನ್ನ ಸ್ಕ್ರೋಲ್ ಮಾಡುವುದನ್ನು ತಪ್ಪಿಸಿ. ಇದು ನಿದ್ರೆಯ ಮಾದರಿಗಳನ್ನು ಅಡ್ಡಿಪಡಿಸುತ್ತದೆ, ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಇವುಗಳಿಗೆ ನಿರ್ದಿಷ್ಟ ಗಡಿಗಳನ್ನು ಗುರುತಿಸುವ ಮೂಲಕ ಮಾನಸಿಕ ವಿಶ್ರಾಂತಿ ಪಡೆಯಬಹುದು.
ಸಾಮಾಜಿಕ ಮಾಧ್ಯಮದಿಂದ ವಿರಾಮ
ನಿಯಮಿತವಾಗಿ ಡಿಜಿಟಲ್ ಡಿಟಾಕ್ಸ್ ಅಭ್ಯಾಸ ಮಾಡಿ. ಸಾಮಾಜಿಕ ಮಾಧ್ಯಮಗಳಿಂದ ತೆಗೆದುಕೊಳ್ಳುವ ಸಂಕ್ಷಿಪ್ತ ವಿರಾಮವು ತಾಜಾ ದೃಷ್ಟಿಕೋನವನ್ನು ಒದಗಿಸುತ್ತದೆ. ಅತಿಯಾದ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಸಾಮಾಜಿಕ ಮಾಧ್ಯಮದ ಆಯಾಸವನ್ನು ತಡೆಯುತ್ತದೆ. ಆಫ್ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ತೃಪ್ತಿಯನ್ನು ತರುವ ಹವ್ಯಾಸಗಳನ್ನು ಅನುಸರಿಸಲು ಈ ಸಮಯವನ್ನು ಬಳಸಿ.
ಮೈಂಡ್ಫುಲ್ ಪೋಸ್ಟ್
ಸಾಮಾಜಿಕ ಮಾಧ್ಯಮದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಲು ಮೈಂಡ್ಫುಲ್ ಪೋಸ್ಟ್ ಮಾಡುವುದು ಅಷ್ಟೇ ಮುಖ್ಯ. ವೈಯಕ್ತಿಕ ಮಾಹಿತಿಯನ್ನು ಅತಿಯಾಗಿ ಹಂಚಿಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಸುವ ಬಗ್ಗೆ ಜಾಗರೂಕರಾಗಿರಿ. ನಿಮ್ಮ ನಿಜವಾದ ಅನುಭವಗಳನ್ನು ಹಂಚಿಕೊಳ್ಳಿ, ಹೆಚ್ಚು ವಾಸ್ತವಿಕ ಮತ್ತು ಬೆಂಬಲಿತ ಆನ್ಲೈನ್ ಸಮುದಾಯ ಫಾಲೋ ಮಾಡಿ.
ಒಟ್ಟಾರೆಯಾಗಿ ನಿಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಯಾಗದಂತೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ಅದರಲ್ಲಿ ಜಾಗರೂಕತೆಯಿಂದ ತೊಡಗಿಸಿಕೊಳ್ಳುವ ಅಗತ್ಯವಿದೆ. ಸಾಮಾಜಿಕ ಮಾಧ್ಯಮವು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬೇಕೇ ಹೊರತು ಕಡಿಮೆ ಮಾಡಬಾರದು ಎಂಬುದನ್ನು ನೆನಪಿಡಿ.