ಬೆಂಗಳೂರು: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡದೆ ಗೈರಾಗಿರುವುದು ಸಂಸತ್ತಿನ ಘನತೆಗೆ ಧಕ್ಕೆ ತರುವ ಕ್ರಮವಾಗಿದ್ದು, ಇದು ಪ್ರಜಾಪ್ರಭುತ್ವದ ಮೇಲೆ ನಡೆದ ನೇರ ದಾಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಟೀಕಿಸಿದ್ದಾರೆ.
ಭಾರತದ ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಮಂತ್ರಿಯವರ ಉತ್ತರ ಇಲ್ಲದೇ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಸತ್ತಿನ ಚರ್ಚೆಗೆ ಉತ್ತರಿಸುವುದು ಪ್ರಧಾನಮಂತ್ರಿಯ ಸಾಂವಿಧಾನಿಕ ಜವಾಬ್ದಾರಿಯಾಗಿದ್ದು, ಅದರಿಂದ ದೂರ ಉಳಿಯುವುದು ಜವಾಬ್ದಾರಿಯಿಂದ ಪಲಾಯನ ಮಾಡುವ ನಡೆ ಎಂದು ಅವರು ಹೇಳಿದ್ದಾರೆ.

ಮೊದಲು ಅಧಿಕಾರರೂಢ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳ ಸದಸ್ಯರಿಗೆ ಸಮರ್ಪಕವಾಗಿ ಮಾತನಾಡಲು ಅವಕಾಶ ನೀಡದೆ ತಡೆದಿದೆ. ಬಳಿಕ ಪ್ರಧಾನಮಂತ್ರಿಯವರೇ ಚರ್ಚೆಗೆ ಉತ್ತರಿಸದೆ ಮೌನಕ್ಕೆ ಶರಣಾದರು. ಇದು ಸಂಸತ್ತಿನ ಚರ್ಚಾ ಪರಂಪರೆಗೆ ವಿರುದ್ಧವಾದ ನಡೆ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಂದನಾ ನಿರ್ಣಯದ ಚರ್ಚೆಯಲ್ಲಿ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರ ಪುಸ್ತಕದಲ್ಲಿರುವ, ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾದಾಗ ಅವರ ಭಾಷಣವನ್ನು ತಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
2020ರ ಚೀನಾ ಗಡಿ ಸಂಘರ್ಷದ ವೇಳೆ ನಿರ್ಣಾಯಕ ರಾಜಕೀಯ ನಾಯಕತ್ವ ನೀಡುವ ಬದಲು, ಪ್ರಧಾನಿ ಮೋದಿ ಅವರು ಸೇನಾ ಮುಖ್ಯಸ್ಥರಿಗೆ “ಜೋ ಉಚಿತ್ ಸಮಝೋ, ವೋಹ್ ಕರೋ” ಎಂದು ಹೇಳಿದ್ದಾಗಿ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಈ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗಬಾರದೆಂಬ ಕಾರಣಕ್ಕೇ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ದೇಶದ ಬಹುಸಂಖ್ಯೆಯ ಜನರನ್ನು ಪ್ರತಿನಿಧಿಸುವ ವಿರೋಧ ಪಕ್ಷಗಳ ಮಾತುಗಳನ್ನು ತಡೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಇಂತಹ ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಪ್ರಧಾನಮಂತ್ರಿಯವರು ಲೋಕಸಭೆಗೆ ಗೈರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಹೆದರಿರುವ ಕಾರಣದಿಂದಲೇ ಸಂಸತ್ತಿಗೆ ಹಾಜರಾಗಿಲ್ಲ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಚರ್ಚೆಯಿಂದ ಸದಾ ಹಿಂದೆ ಸರಿಯುವ ನಾಯಕತ್ವದಿಂದ ದೇಶಕ್ಕೆ ಸಮರ್ಥ ಆಡಳಿತ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ, ಪ್ರಧಾನಮಂತ್ರಿಯವರ ಉತ್ತರ ಇಲ್ಲದೇ ವಂದನಾ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ನಡವಳಿಕೆಯನ್ನು ಪ್ರಶ್ನಿಸಿರುವ ಅವರು, ಸ್ಪೀಕರ್ ಅವರು ಸದನದ ಘನತೆಯನ್ನು ಕಾಪಾಡಬೇಕೇ ವಿನಃ ಸರ್ಕಾರದ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಬಾರದು ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳನ್ನು ಮೌನಗೊಳಿಸಿ, ಪ್ರಧಾನಮಂತ್ರಿಯವರು ಚರ್ಚೆಯಿಂದ ದೂರ ಉಳಿಯುವ ಮೂಲಕ ಸಂಸತ್ತನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ಸಾಂವಿಧಾನಿಕ ಸಂಸ್ಥೆಗಳನ್ನು ಹಿಂಸಿಸುವ ಬಿಜೆಪಿ–ಆರೆಸ್ಸೆಸ್‌ನ ಕಾರ್ಯವಿಧಾನದ ಭಾಗವಾಗಿದ್ದು, ಭಯ ಮತ್ತು ಮೌನದಿಂದ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.











