ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ತಿಳುವಳಿಕೆಗಿಂತ ನಡೆ-ನುಡಿ ಶ್ರೇಷ್ಠ; ಭಕ್ತಿ ಆಚರಣೆಗೆ ಸೀಮಿತವಾಗದೆ ಸತ್ಯ, ಶುದ್ಧತೆ, ಕಾಯಕ–ದಾಸೋಹದ ರೂಪದಲ್ಲಿ ಬದುಕಿನಲ್ಲಿ ಕಾಣಿಸಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

On: September 11, 2026 10:50 PM
Follow Us:

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು):
ಮನುಷ್ಯನ ಬದುಕಿನಲ್ಲಿ ಎಷ್ಟೇ ತಿಳುವಳಿಕೆ, ಸಂಪತ್ತು ಮತ್ತು ಸೌಲಭ್ಯಗಳಿದ್ದರೂ ನೆಮ್ಮದಿ ಇಲ್ಲದಿದ್ದರೆ ಆ ಬದುಕಿಗೆ ಪೂರ್ಣತೆ ದೊರೆಯುವುದಿಲ್ಲ. ಜೀವನದ ಏರಿಳಿತಗಳಲ್ಲಿ ವಿಶ್ವಾಸವನ್ನು ಕಳೆದುಕೊಳ್ಳದೆ ಮುನ್ನಡೆಯುವುದು ಅತ್ಯಂತ ಮುಖ್ಯ. ತಿಳುವಳಿಕೆಯಲ್ಲಿ ಕೆಲವೊಮ್ಮೆ ಸೋಲು ಎದುರಾಗಬಹುದು, ಆದರೆ ಉತ್ತಮ ನಡೆ-ನುಡಿಗೆ ಎಂದಿಗೂ ಸೋಲು ಇರಬಾರದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಶುಕ್ರವಾರ ಶ್ರಾವಣ ಮಾಸದ ಅಂಗವಾಗಿ ನಡೆದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಹಾಗೂ ಇಷ್ಟಲಿಂಗ ಮಹಾಪೂಜಾ ಮಂಗಳ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜೀವನದ ಮೌಲ್ಯಗಳು ಮತ್ತು ಧಾರ್ಮಿಕ ಸಂಸ್ಕಾರಗಳ ಮಹತ್ವವನ್ನು ವಿವರಿಸಿದರು.

ಬದುಕು ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕಿಂತ ಅದು ಎಷ್ಟು ನೆಮ್ಮದಿಯಿಂದ ಕೂಡಿದೆ ಎನ್ನುವುದು ಮುಖ್ಯ. ಮನುಷ್ಯನ ಬದುಕಿನ ಜೀವಜಲವೇ ವಿಶ್ವಾಸ. ಯಾವುದೇ ಸಂದರ್ಭದಲ್ಲಿ ವಿಶ್ವಾಸವನ್ನು ಕಳೆದುಕೊಳ್ಳಬಾರದು. ತಿಳುವಳಿಕೆ, ಅನುಭವ ಮತ್ತು ಜ್ಞಾನ ಜೀವನಕ್ಕೆ ದಾರಿ ತೋರಿಸಿದರೂ, ಉತ್ತಮ ನಡೆ-ನುಡಿ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಅವರು ತಿಳಿಸಿದರು.

ಭಕ್ತಿ ಕೇವಲ ಪೂಜೆ, ಆಚರಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅದು ನಿತ್ಯ ಜೀವನದಲ್ಲಿ ಸತ್ಯ, ಶುದ್ಧತೆ, ಕಾಯಕ ಮತ್ತು ದಾಸೋಹದ ರೂಪದಲ್ಲಿ ವ್ಯಕ್ತವಾಗಬೇಕು. ವ್ಯಕ್ತಿಯ ನಡೆ-ನುಡಿಯಲ್ಲಿ ಧರ್ಮದ ಮೌಲ್ಯಗಳು ಪ್ರತಿಫಲಿಸಿದಾಗ ಮಾತ್ರ ಭಕ್ತಿಗೆ ನಿಜವಾದ ಅರ್ಥ ಬರುತ್ತದೆ ಎಂದು ಜಗದ್ಗುರುಗಳು ಹೇಳಿದರು.

ವೀರಶೈವ ಧರ್ಮ ಪರಂಪರೆಯ ಆಚಾರ, ವಿಚಾರ ಮತ್ತು ಗುರು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಸ್ವೀಕರಿಸುವುದು ಅಗತ್ಯ. ಆದರೆ ಅದರ ಜತೆಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮರೆಯಬಾರದು ಎಂದು ಅವರು ಕರೆ ನೀಡಿದರು.

ಇಂದಿನ ಯುವಜನತೆ ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಿರಿಯರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ತಮ್ಮ ನಡೆ-ನುಡಿ ಹಾಗೂ ಜೀವನ ಮೌಲ್ಯಗಳ ಮೂಲಕ ಯುವ ಸಮುದಾಯದಲ್ಲಿ ಆಸಕ್ತಿ, ಶ್ರದ್ಧೆ ಮತ್ತು ಸಂಸ್ಕಾರದ ಬೀಜ ಬಿತ್ತುವ ಕಾರ್ಯವನ್ನು ಹಿರಿಯರು ಮಾಡಬೇಕು ಎಂದರು.

ಶ್ರಾವಣ ಮಾಸ ಮುಗಿಯಬಹುದು. ಆದರೆ ಧರ್ಮದ ಆಚರಣೆ, ಶಿವಸ್ಮರಣೆ ಮತ್ತು ಸಂಸ್ಕಾರದ ಪಯಣ ಎಂದಿಗೂ ಮುಗಿಯಬಾರದು. ಧಾರ್ಮಿಕ ಆಚರಣೆಗಳು ನಿರ್ದಿಷ್ಟ ಅವಧಿಗೆ ಸೀಮಿತವಾಗದೆ ಜೀವನದ ಅವಿಭಾಜ್ಯ ಭಾಗವಾಗಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

ಅನ್ನದಾನ, ವಿದ್ಯಾದಾನ, ಪರಿಸರ ಸಂರಕ್ಷಣೆ, ಬಡವರು ಮತ್ತು ಅಶಕ್ತರಿಗೆ ನೆರವು ನೀಡುವುದು ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಶಿವನ ಸೇವೆಯೆಂದು ಭಾವಿಸಬೇಕು. ಧರ್ಮನಿಷ್ಠ ಸಂಸ್ಕಾರಗಳನ್ನು ಹೊಂದಿರುವ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಬಾಳೆಹೊನ್ನೂರು ಧರ್ಮಪೀಠದಲ್ಲಿ ನಡೆಯುತ್ತಿರುವ ಶ್ರೀ ರಂಭಾಪುರಿ ಜಗದ್ಗುರುಗಳ 35ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನದ ಪಾವನ ಕಾರ್ಯಕ್ರಮದಲ್ಲಿ ಡಿಟೆಕ್ಟಿವ್ ನ್ಯೂಸ್24 ಮುಖ್ಯ ಸಂಪಾದಕ ಕೆ.ಎಂ. ಸತೀಶ್ ಗೌಡ ಭಾಗವಹಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ದರ್ಶನ ಪಡೆದು, ಅವರ ಆಶೀರ್ವಾದವನ್ನು ಸ್ವೀಕರಿಸಿದರು.

ಶ್ರೀಮದ್ ರಂಭಾಪುರಿ ಜಗದ್ಗುರುಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ಷಷ್ಠಿಪೂರ್ತಿ ಸಮಾರಂಭದ ಸ್ಮರಣಾರ್ಥವಾಗಿ ಪ್ರಕಟಿಸಲಾದ ಅಭಿನಂದನ ಗ್ರಂಥವನ್ನು ಪೂಜ್ಯ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪತ್ರಕರ್ತ ಹಾಗೂ ಡಿಟೆಕ್ಟಿವ್ ನ್ಯೂಸ್24 ಮುಖ್ಯ ಸಂಪಾದಕ ಕೆ.ಎಂ. ಸತೀಶ್ ಗೌಡ ಅವರಿಗೆ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಪ್ರದಾನ ಮಾಡಿದರು. ಜಗದ್ಗುರುಗಳ ಪಾವನ ಸಾನ್ನಿಧ್ಯದಲ್ಲಿ ಅಭಿನಂದನ ಗ್ರಂಥವನ್ನು ಸ್ವೀಕರಿಸಿದ ಸತೀಶ್ ಗೌಡ ಅವರು, ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ಧರ್ಮ, ಆಧ್ಯಾತ್ಮ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಸಮಾಜಕ್ಕೆ ಸಾರುತ್ತಿರುವ ಪೂಜ್ಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಕೆ.ಎಂ. ಸತೀಶ್ ಗೌಡ ಅವರು, ನಾಡಿನ ಶಾಂತಿ, ಸಮೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಆಶೀರ್ವಾದ ಕೋರಿದರು. ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಧರ್ಮಪೀಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದ ಪಡೆದ ಕ್ಷಣವು ಆಧ್ಯಾತ್ಮಿಕ ನೆಮ್ಮದಿ ಹಾಗೂ ಭಕ್ತಿಭಾವವನ್ನು ಮೂಡಿಸಿತು ಎಂದು ಅವರು ತಿಳಿಸಿದರು.

ಶ್ರಾವಣ ಮಾಸದ ಅವಧಿಯಲ್ಲಿ ಬೇರುಗೊಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದ ಮೂಲಕ ಜನರ ಮನಸ್ಸಿನಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ. ಶ್ರಾವಣ ಮಾಸದ ಪೂರ್ತಿ ಅವಧಿಯಲ್ಲಿ ನಡೆದ ಪ್ರವಚನ ಕಾರ್ಯಕ್ರಮಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದ ಮಂಗಳ ಸಮಾರಂಭದಲ್ಲಿ ಬೇರುಗೊಂಡಿ ಮಠದ ಶ್ರೀಗಳು ಮಾತನಾಡಿ, ಯಾರ ಹೃದಯ ನೋಯುತ್ತದೆಯೋ ಅವರಿಗಾಗಿ ಮರುಗುವ ಗುಣ ಹೊಂದಿರುವವರೇ ನಿಜವಾದ ಮಹಾತ್ಮರು ಎಂದು ಹೇಳಿದರು.

ನಂಬಿಕೆ ಗಳಿಸಲು ವರ್ಷಗಳೇ ಬೇಕಾಗಬಹುದು. ಆದರೆ ಅದನ್ನು ಕಳೆದುಕೊಳ್ಳಲು ಒಂದು ಕ್ಷಣ ಸಾಕು. ಆದ್ದರಿಂದ ಪರಸ್ಪರ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಬೇಕಾದರೆ ಪರಸ್ಪರ ಗೌರವ, ವಿಶ್ವಾಸ ಮತ್ತು ಮಾನವೀಯತೆ ಅಗತ್ಯ ಎಂದು ಅವರು ತಿಳಿಸಿದರು.

ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಜೀವನದಲ್ಲಿ ಎದುರಾಗುವ ಕಷ್ಟಗಳು ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಹೇಳಿದರು.

ಚಿನ್ನವನ್ನು ಉಜ್ಜಿ ಪರೀಕ್ಷಿಸಿದಂತೆ, ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಮನುಷ್ಯನ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ. ಮನೆಯ ಅಂಗಣದ ಕಸವನ್ನು ನಾವಾಗಲಿ, ಬೇರೆಯವರಾಗಲಿ ಸ್ವಚ್ಛಗೊಳಿಸಬಹುದು. ಆದರೆ ಮನದೊಳಗಿನ ಕಸವನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ಆತ್ಮಪರಿಶೀಲನೆಯ ಮೂಲಕ ಮನಸ್ಸಿನ ಕಲ್ಮಶಗಳನ್ನು ದೂರ ಮಾಡಿಕೊಂಡಾಗ ಮಾತ್ರ ನಿಜವಾದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಜ್ಞಾನ ಮತ್ತು ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿವೆ. ಆದರೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ಸ್ವಯಂ ರೂಪುಗೊಳ್ಳುವುದಿಲ್ಲ. ಅವುಗಳನ್ನು ಕುಟುಂಬ, ಸಮಾಜ ಮತ್ತು ಧಾರ್ಮಿಕ ಪರಂಪರೆಗಳ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಬೇಕು.

ವೀರಶೈವ ಧರ್ಮದ ಮೌಲ್ಯಗಳು, ಗುರು ಪರಂಪರೆ, ಕಾಯಕ ಮತ್ತು ದಾಸೋಹದ ಚಿಂತನೆಗಳು ಸಮಾಜದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆಯನ್ನು ಬೆಳೆಸುವ ಶಕ್ತಿ ಹೊಂದಿವೆ. ಆದ್ದರಿಂದ ಮಕ್ಕಳಿಗೆ ಆಧುನಿಕ ಶಿಕ್ಷಣದ ಜತೆಗೆ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಪರಿಚಯ ಮಾಡಿಸುವ ಅಗತ್ಯವಿದೆ ಎಂದು ಪೂಜ್ಯ ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಹಾಗೂ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಗಂಗಾಧರ ಹಿರೇಮಠ ಅವರ ನೇತೃತ್ವದಲ್ಲಿ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಶಿಕ್ಷಕ ವೀರೇಶ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಮಲೆಬೆನ್ನೂರು ಜಗದೀಶ ಸಹೋದರರ ವತಿಯಿಂದ ಅನ್ನದಾಸೋಹ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರ್ಜಗಿ ಮುರುಗೇಂದ್ರ ಮಠದ ಶಿವಸೋಮನಾಥ ಶಿವಾಚಾರ್ಯ ಸ್ವಾಮೀಜಿ, ರಾಣೆಬೆನ್ನೂರು ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಗುರುಕುಲದ ಕುಲಪತಿ ಸಿದ್ಧಲಿಂಗ ಶಾಸ್ತ್ರಿಗಳು, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಬೆಂಗಳೂರಿನ ಹರ್ಷ ಗಣೇಶ್ ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಆತ್ಮವಿಶ್ವಾಸ, ಧಾರ್ಮಿಕ ಶ್ರದ್ಧೆ ಮತ್ತು ಸಂಸ್ಕಾರದ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

K.M.Sathish Gowda

Join WhatsApp

Join Now

Facebook

Join Now

Read more

ನೃತ್ಯ ಮನರಂಜನೆಯ ಕಲೆ ಮಾತ್ರವಲ್ಲ; ಆಧ್ಯಾತ್ಮ–ಸಂಸ್ಕೃತಿಯನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಆಸಕ್ತಿ ಕಳೆದುಕೊಂಡು ಬದುಕುವುದು ಕಷ್ಟ; ಜೀವನದಲ್ಲಿ ಗುರಿ ಮತ್ತು ಗುರುವಿನ ಮಾರ್ಗದರ್ಶನ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ನ್ಯೂಜೆರ್ಸಿಯಲ್ಲಿ ಆಧ್ಯಾತ್ಮದ ಸೌರಭ: ವಿದೇಶಿ ನೆಲದಲ್ಲಿ ತಂತ್ರಜ್ಞಾನ-ಪರಂಪರೆಯ ಮಹಾಸಂಗಮ; ಜಾಗತಿಕ ಮನ್ನಣೆ ಪಡೆದ ಶ್ರೀ ತರಳಬಾಳು ಜಗದ್ಗುರುಗಳ ದಿವ್ಯ ಸಂಕಲ್ಪ!

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಭಿತ್ತಿಪತ್ರ ಬಿಡುಗಡೆ

ಫಿಲಡೆಲ್ಫಿಯಾದಲ್ಲಿ ಕನ್ನಡದ ಹಬ್ಬ; ಸಾಗರದಾಚೆ ಮೊಳಗಲಿದೆ ಕನ್ನಡದ ಕಂಪು: ಅಕ್ಕ ರಜತೋತ್ಸವಕ್ಕೆ ಶ್ರೀ ತರಳಬಾಳು ಜಗದ್ಗುರುಗಳ ಅಮೆರಿಕಾ ಪಯಣ

ಆಧ್ಯಾತ್ಮಿಕ ಜ್ಞಾನದಿಂದ ಮನಸ್ಸಿಗೆ ನೆಮ್ಮದಿ; ರಾಗ-ದ್ವೇಷದ ಬಂಧನದಿಂದ ಮುಕ್ತಿಯೇ ನಿಜವಾದ ಶಾಂತಿ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment