ಶಿವಮೊಗ್ಗ: ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯವು, ಆಡಳಿತದ ನಿರಾಸಕ್ತಿಗೂ ತುತ್ತಾಗಿದೆ. ಇದರಿಂದ ಪರಿಷ್ಕರಣೆ ಪ್ರಕ್ರಿಯೆ ಮತ್ತೆ ನೆನೆಗುದಿಗೆ ಬೀಳಲಾರಂಭಿಸಿದೆ!!
ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಈಗಾಗಲೇ ಮೊದಲ ಹಂತದ ವರದಿ ಸಿದ್ದಪಡಿಸಲಾಗಿದೆ. ಈ ನಡುವೆ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿ ಅಧೀನದ ಬಡಾವಣೆಗಳ ನಾಗರೀಕರು, ತಮ್ಮ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಗ್ರಹಿಸಲಾರಂಭಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಗರೀಕರ ಬೇಡಿಕೆ ಪರಿಶೀಲಿಸಿ, ಮತ್ತೊಮ್ಮೆ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಚಿಸಿದ್ದರು. ಆದರೆ ಅವರು ಸೂಚಿಸಿ ತಿಂಗಳುಗಳೇ ಉರುಳಿದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತ ವರದಿ ಸಲ್ಲಿಸಿಲ್ಲವೆಂದು ತಿಳಿದುಬಂದಿದೆ.
ಎಲ್ಲದಕ್ಕಿಂತ ಮುಖ್ಯವಾಗಿ, ವರದಿ ಸಿದ್ದಪಡಿಸುವ ಕಾರ್ಯವನ್ನೇ ಪಾಲಿಕೆ ಆಡಳಿತ ಆರಂಭಿಸಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.
ಮೊದಲೇ ಜನಪ್ರತಿನಿಧಿ ವರ್ಗದ ನಿರಾಸಕ್ತಿಗೊಳಗಾಗಿರುವ ಸದರಿ ಪ್ರಕ್ರಿಯೆಯು, ಇದೀಗ ಪಾಲಿಕೆ ಅಧಿಕಾರಿಗಳ ಕಡೆಗಣನೆಗೊಳಗಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಸದ್ಯಕ್ಕೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ತಾರ್ಕಿಂಕ ಅಂತ್ಯಕ್ಕೆ ಬರುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ.
ಡಿಸಿ ಗಮನಿಸಲಿ : ಬರೋಬ್ಬರಿ ೩೦ ವರ್ಷಗಳ ನಂತರ, ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಸದರಿ ಪ್ರಕ್ರಿಯೆ ಆರಂಭಗೊಂಡು ವರ್ಷವೇ ಉರುಳಿದರೂ ಇಲ್ಲಿಯವರೆಗೂ ಸರ್ಕಾರಕ್ಕೆ ಅಂತಿಮ ಹಂತದ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಇಡೀ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ.
ಸದರಿ ಪರಿಷ್ಕರಣೆ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಸಕಾರಾತ್ಮಕ ನಿಲುವು ಹೊಂದಿದ್ದಾರೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ಧಾರೆ. ಆದರೆ ಅವರ ವೇಗಕ್ಕೆ ಅನುಗುಣವಾಗಿ, ಸಂಬಂಧಿಸಿದ ಇತರೆ ಅಧಿಕಾರಿಗಳು ಕಾರ್ಯನಿರ್ವಹಿಸದಿರುವ ಆರೋಪಗಳಿವೆ.
ತಕ್ಷಣವೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕು. ಕಾಲಮಿತಿಯೊಳಗೆ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕಾರ್ಯ ನಡೆಸಬೇಕು ಎಂಬುವುದು ನಗರದಂಚಿನಲ್ಲಿರುವ ಜನವಸತಿ ಬಡಾವಣೆಗಳ ನಾಗರೀಕರ ಆಗ್ರಹವಾಗಿದೆ.