ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಕ್ರಿಕೆಟ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲಿಯೇ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಸರ್ಕಾರದಿಂದ ಅಮಾನತು ಮಾಡಲಾಗಿತ್ತು. ಇದೀಗ ಒಬ್ಬ ಅಧಿಕಾರಿಯನ್ನು ಹೊರತುಪಡಿಸಿ ಉಳಿದ ನಾಲ್ವರು ಅಧಿಕಾರಿಗಳ ಅಮಾನತು ರದ್ದುಪಡಿಸಿ ಸೇವೆಗೆ ಮರು ಹಾಜರಾಗಲು ಆದೇಶ ಹೊರಡಿಸಿದೆ.
ಕಳೆದ 18 ವರ್ಷಗಳಿಂದ ಇಂಡಿಯನ್ ಪ್ರೀಪಿಯರ್ ಲೀಗ್ (ಐಪಿಎಲ್) ನಡೆಯುತ್ತಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಪಿ ಗೆಲ್ಲದೇ ಸೋಲಿನ ಹತಾಶೆಯನ್ನು ಅನುಭವಿಸುತ್ತಿತ್ತು. ಆದರೆ, ಈ ವರ್ಷ ಆರ್‌ಸಿಬಿ 18ನೇ ಸೀಸನ್‌ನ ಟ್ರೋಫಿ ಗೆದ್ದಿದೆ. ಆದರೆ, ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲು ಸರ್ಕಾರ, ಪೊಲೀಸ್ ಇಲಾಖೆ, ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಹೊಂದಾಣಿಕೆ ಕೊರತೆಯನ್ನು ಅನುಭವಿಸಿದ್ದವು. ಇದರಿಂದಾಗಿ ಜನರು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಹಾಗೂ ಟ್ರೋಪಿ ಗೆದ್ದ ತಂಡದ ಕ್ರಿಕೆಟ್ ಆಟಗಾರರನ್ನು ನೋಡಲು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು.
ಈ ಘಟನೆಯ ಬೆನ್ನಲ್ಲಿಯೇ ರಾಜ್ಯ ಸರ್ಕಾರ ಇದಕ್ಕೆ ಹೊಣೆಗಾರರನ್ನಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್, ಅಧೀನ ಅಧಿಕಾರಿಗಳಾಗಿದ್ದ ವಿಕಾಸ್ ಕುಮಾರ್, ಶೇಖರ್ ಹೆಚ್.ಟಿ, ಬಾಲಕೃಷ್ಣ ಹಾಗೂ ಗಿರೀಶ್ ಅವರನ್ನು ಅಮಾನತು ಮಾಡಿತ್ತು. ಇದಾದ ನಂತರ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಗಳ ಮೇಲೆ ಎಫ್‌ಐಆರ್ ದಾಖಲಿಸಿತ್ತು. ಹೀಗಾಗಿ, ಈ ಮೂರೂ ಸಂಸ್ಥೆಗಳ ಮುಖ್ಯಸ್ಥರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಲ್ಲರೂ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ, ಇನ್ನೂ ಈ ಪ್ರಕರಣ ಇತ್ಯರ್ಥವಾಗಿಲ್ಲ.
ರಾಜ್ಯ ಸರ್ಕಾರ ಅಮಾನತು ಮಾಡಿದ್ದ ಪೊಲೀಸ್ ಅಧಿಕಾರಿಗಳ ಪೈಕಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರು ಮಾತ್ರ ರಾಜ್ಯ ಸರ್ಕಾರದ ಅಮಾನತು ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದಾರೆ. ಈಗ ವಿಕಾಸ್ ಕುಮಾರ್ ಅವರನ್ನು ಹೊರತುಪಡಿಸಿ ಉಳಿದಂತೆ ಬಿ. ದಯಾನಂದ್, ಶೇಖರ್ ಹೆಚ್.ಟಿ, ಬಾಲಕೃಷ್ಣ ಹಾಗೂ ಗಿರೀಶ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅಮಾನತ್ತಾಗಿದ್ದ ಅಧಿಕಾರಿಗಳನ್ನು ವಾಪಸ್ ಸೇವೆಗೆ ಹಾಜರಾಗಲು ಅನುಮತಿ ನೀಡಿದೆ.