ಅನೇಕ ವೇಳೆ ನಾವು ಸರಿಯಾದ ರೀತಿಯಲ್ಲಿ, ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ಮಾಡಿದ್ದರೂ ಫಲ ಕಾಣದಿದ್ದಾಗ ಗ್ರಹಚಾರ ಸರಿ ಇಲ್ಲ ಎಂದು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ!
ಅಂತೆಯೇ ಇಂದಿನ ಕಂಪ್ಯೂಟರ್ ಯುಗದಲ್ಲಿ ಸಾರ್ವಜನಿಕ ಕಛೇರಿಗಳ , ಇಲಾಖೆಗಳ ಕೆಲಸ ಕಂಪ್ಯೂಟರ್ ನ ಮೇಲೆಯೇ ಅವಲಂಬಿಸಿದ್ದು, ಸಾರ್ವಜನಿಕರು ಪ್ರತಿನಿತ್ಯ ಒಂದಲ್ಲ ಒಂದು ಕೆಲಸಕ್ಕಾಗಿ ಕಛೇರಿಗಳಿಗೆ ಹೋದಾಗ ಸರ್ವರ್ ಡೌನ್ ಎನ್ನುವ ಇಲಾಖಾ ಸಿಬ್ಬಂದಿ ಗಳ ಉತ್ತರ ‘ಕೈ ಕಟ್, ಬಾಯಿ ಮುಚ್ಚ್’ ಎಂದಂತಾಗಿ ಸುಮ್ಮನೆ ಕೂರುವಂತಾಗುತ್ತದೆ!
ಕಂಪ್ಯೂಟರ್ ಬಳಕೆ ಬಂದ ನಂತರ ಎಷ್ಟೋ ಇಲಾಖೆ ಗಳ ಕೆಲಸಕ್ಕೆ ವೇಗ ಮತ್ತು ನಿಖರತೆ ಬಂದಿದೆಯಾದರೂ ಈ ಸರ್ವರ್ ಡೌನ್ ಎನ್ನುವ ಭೂತ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿಸಿ ನಮಗೆ ಭೂತಕಾಲದ ಪೇಪರು, ಪೆನ್ ಬಳಕೆನೇ ಸರಿ ಎನಿಸುವಂತೆ ಮಾಡಿಬಿಡುತ್ತದೆ!
ಇತ್ತೀಚೆಗೆ ಕೆ.ಎಸ್. ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಬಸ್ ಟಿಕೆಟ್ ರಿಸರ್ವೇಶನ್ ಮಾಡಿಸಲು ಹೋದಾಗ ಬೆಳಗಿನಿಂದ ಸರ್ವರ್ ಇಲ್ಲದಿರುವುದಕ್ಕೆ ‘ಸಹಕರಿಸಿ’ ಎನ್ನುವ ಬೋರ್ಡ್ ನೋಡಿ ‘ಗ್ರಹಚಾರ ಸರಿ ಇಲ್ಲ’ ಎಂದು ಸಮಾಧಾನ ಮಾಡಿ ಕೊಂಡು ವಾಪಾಸು ಬಂದೆ.
ನಂದೇನು ಮಹಾ! ತಾಲ್ಲೂಕು ಆಫೀಸು, ಪಾಲಿಕೆ, ಸಬ್ ರಿಜಿಸ್ಟ್ರಾರ್ ಆಫೀಸು, ಆ ಕಛೇರಿ,ಈ ಕಛೇರಿಗಳಲ್ಲಿ ನಮ್ದೂ ಅದೇ ಕಥೆ ಎನ್ನುವ ದೊಡ್ಡ ಸಂಖ್ಯೆಯ ನಮ್ಮವರ ಮುಂದೆ !
ನಿರುದ್ಯೋಗಿಗಳದ್ದು ಕೆಲಸಕ್ಕಾಗಿ ಅಲೆದಾಟ, ಸಾರ್ವಜನಿಕರದ್ದೂ ಕೆಲಸಕ್ಕಾಗಿ ಅಲೆದಾಟ; ಅಲ್ಲಲ್ಲ, ತಂತ್ರಜ್ಞಾನದ ಹಿಂದೆ ಓಡಾಟ!!!!
- ತ್ಯಾಗರಾಜ ಮಿತ್ಯಾಂತ.