ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾರಿಗೆ ನೌಕರರು ನಾಳೆ (ಆಗಸ್ಟ್ 5) ಬೆಳಗ್ಗೆಯಿಂದ ಮುಷ್ಕರ ನಡೆಸಲು ಆರಂಭಿಸಿದ್ದಾರೆ. ಆದರೆ ಇಂದು ರಾತ್ರಿ ಎಂದಿನಂತೆ ಸಾರಿಗೆ ಬಸ್ ಲಭ್ಯವಿರಲಿದೆ. ಇಂದು ರಾತ್ರಿ ಮೆಜೆಸ್ಟಿಕ್‌ನಿಂದ ಎಲ್ಲಾ ಬಸ್‌ಗಳು ಕಾರ್ಯನಿರ್ವಹಿಸಲಿದೆ ಎಂದು ರಾಜ್ಯ ಸಾರಿಗೆ ನೌಕರರು ಹೇಳಿದ್ದಾರೆ. ಆದರೆ ನಾಳೆ ಬೆಳಗ್ಗೆ 6 ಗಂಟೆಯಿಂದ ಎಲ್ಲಾ ಬಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದಿದ್ದಾರೆ.
ಹೈಕೋರ್ಟ್ ಸ್ಟೇ ಕುರಿತು ಸಾರಿಗೆ ನೌಕರರ ಮುಖಂಡ ಸ್ಪಷ್ಟನೆ
ಸಾರಿಗೆ ನೌಕರರ ಮುಖಂಡ ಮಂಜುನಾಥ್ ಹೈಕೋರ್ಟ್ ನೀಡಿದ ತಡೆಯಾಜ್ಞೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ನೌಕರರು ಹಲವು ದಿನಗಳ ಗಡುವು ನೀಡಿ ಇದೀಗ ಕೊನೆಯ ಅಸ್ತ್ರವಾಗಿ ಮುಷ್ಕರ ಘೋಷಿಸಲಾಗಿದೆ. ಇದೀಗ ವಾಪಸ್ ಪಡೆಯಲು ಸಾಧ್ಯವಿಲ್ಲ. ಜಂಟಿ ಕ್ರಿಯಾ ಸಮಿತಿಗೆ ಮುಂಚಿತವಾಗಿ ಕೋರ್ಟ್ ನೋಟೀಸ್ ಕೊಡಬೇಕಿತ್ತು. ನಮ್ಮ ಅಭಿಪ್ರಾಯವನ್ನು ಕೋರ್ಟ್ ಆಲಿಸಬೇಕಿತ್ತು. ಆದರೆ ಇಲ್ಲಿ ಕೋರ್ಟ್ ನಮ್ಮ ಅಭಿಪ್ರಾಯವೇ ಕೇಳಿಲ್ಲ. ದಿಢೀರ್ ತಡೆಯಾಜ್ಞೆ ನೀಡಿದರೆ ಮುಷ್ಕರ ವಾಪಸ್ ಪಡೆಯುಲ ಸಾಧ್ಯವಿಲ್ಲ ಎಂದು ಮಂಜನಾಥ್ ಹೇಳಿದ್ದಾರೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಗೊಳ್ಳಲಿದೆ. ನೌಕರರು ಭಯ ಬೀಳುವ ಅಗತ್ಯ ಇಲ್ಲ. ಕೋರ್ಟ್ ಗೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.
ಬಿಎಂಟಿಸಿ ನೌಕರರಿಗೆ ಬಿಎಂಟಿಸಿ ಎಂಡಿ ಮನವಿ
ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ನಾಳೆ ಮುಷ್ಕರದಲ್ಲಿ ಭಾಗಿಯಾಗದಂತೆ ಬಿಎಂಟಿಸಿ ಎಂಡಿ ರಾಮಚಂದ್ರನ್ ಮನವಿ ಮಾಡಿದ್ದಾರೆ. ಮಾನ್ಯ ಉಚ್ಛ ನ್ಯಾಯಾಲಯವು ನಾಳಿನ ( ದಿನಾಂಕ: 05-08-2025ರ) ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ತಡೆಯಾಜ್ಞೆ ನೀಡಿರುವುದರಿಂದ, ಮಾನ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಹಾಗೂ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ, ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ರಾಮಚಂದ್ರನ್ ಮನವಿ ಮಾಡಿದ್ದಾರೆ.
ನೌಕರರಿಗೆ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಮನವಿ
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನೌಕರರಿಗೆ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಹೈಕೋರ್ಟ್ ತಡೆ ನೀಡಿದೆ. ಕೆಎಸ್ಆರ್‌ಟಿಸಿ ಸಾರ್ವಜನಿಕರ ಅಗತ್ಯ ಸೇವಾ ಸಂಸ್ಥೆಯಾಗಿದೆ. ಹೀಗಾಗಿ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳದೆ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿದ್ದಾರೆ.