ಬೆಂಗಳೂರು: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಕರ್ನಾಟಕದ ಪಾತ್ರವನ್ನು ಹಾಗೂ ಬೆಂಗಳೂರಿನ ತಂತ್ರಜ್ಞಾನದ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಐಐಐಟಿ ಆಡಿಟೋರಿಯಂ ನಲ್ಲಿ ನಡೆದ ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆ ಹಾಗೂ 3ನೇ ಹಂತದ ಮೆಟ್ರೋ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಮಾತನಾಡಿದ ನರೇಂದ್ರ ಮೋದಿ, “ಆಪರೇಷನ್ ಸಿಂಧೂರ್ ನಂತರ ನಾನು ಮೊದಲ ಬಾರಿಗೆ ಬೆಂಗಳೂರಿನಲ್ಲಿದ್ದೇನೆ. ಕಾರ್ಯಾಚರಣೆಯ ಯಶಸ್ಸು ಇಡೀ ಜಗತ್ತಿಗೆ ಹೊಸ ಭಾರತವನ್ನು ತೋರಿಸಿತು. ಈ ವಿಜಯದ ಹಿಂದಿನ ಪ್ರಮುಖ ಶಕ್ತಿಯೆಂದರೆ ನಮ್ಮ ಸ್ಥಳೀಯ ತಂತ್ರಜ್ಞಾನ ಮತ್ತು ಮೇಕ್ ಇನ್ ಇಂಡಿಯಾದ ಶಕ್ತಿ. ಇದಕ್ಕೆ ಕರ್ನಾಟಕ ಸಾಕಷ್ಟು ಕೊಡುಗೆ ನೀಡಿದೆ. ಇದಕ್ಕಾಗಿ ರಾಜ್ಯದ ಜನತೆಗೆ ನಾನು ಕೃತಜ್ಞನಾಗಿದ್ದೇನೆ “ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಆಪರೇಷನ್ ಸಿಂದೂರ್ ಬಗ್ಗೆ ಪ್ರಸ್ತಾಪಿಸಿದ ಅವರು, ಯೋಧರ ಶಕ್ತಿ ಸಾಮರ್ಥ್ಯವನ್ನು ಹಾಡಿ ಹೊಗಳಿದರು. ಆಪರೇಷನ್ ಸಿಂದೂರ್‌ನಲ್ಲಿ ನಮ್ಮ ತಂತ್ರಜ್ಞಾನ ಮತ್ತು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸಿದೆ. ಇದರಲ್ಲಿ ಬೆಂಗಳೂರಿನ ಯುವಕರ ಪಾತ್ರ ಇದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಳೆದ ಕೆಲವು ವರ್ಷಗಳಿಂದ ನಮ್ಮ ಆರ್ಥಿಕತೆ ಐದನೇ ಸ್ಥಾನಕ್ಕೆ ಬಂದು ತಲುಪಿದೆ. ನಮ್ಮ ಗುರಿ ಇನ್ನೇನಿದ್ದರೂ ಮೂರನೇ ಸ್ಥಾನಕ್ಕೆ ತಲುಪುವುದು. ಭಾರತ ಈಗ ಪ್ರಪಂಚದ ಮೂರನೇ ಅತಿದೊಡ್ಡ ಮೆಟ್ರೋ ರೈಲ್ವೇ ಸಂಪರ್ಕ ಇರುವ ದೇಶವಾಗಿದೆ. ಕೇವಲ ಐದು ನಗರಗಳಲ್ಲಿ ಮೆಟ್ರೋ ಇತ್ತು. 2014ವರೆಗೆ ಕೇವಲ 74 ಏರ್ಪೋರ್ಟ್‌ಗಳು ಇದ್ದವು. ಈಗ ಅದರ ಸಂಖ್ಯೆ 200ಕ್ಕೂ ಹೆಚ್ಚಾಗಿವೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ಭಾರತ ಮುನ್ನುಗ್ಗುತ್ತಿದೆ. ದೇಶ ಎಷ್ಟು ವೇಗದಲ್ಲಿ ಮುಂದುವರಿಯುತ್ತಿದೆಯೋ ಅಷ್ಟೇ ವೇಗದಲ್ಲಿ ದೇಶದ ಬಡವರ ಬದುಕು ಸುಧಾರಿಸಿದೆ ಎಂದರು.
“ಹೊಸ ಭಾರತದ ಉದಯದ ಸಂಕೇತವಾಗಿ ಹೊರಹೊಮ್ಮುತ್ತಿರುವ ನಗರವಾಗಿ ಬೆಂಗಳೂರು ಹೊರಹೊಮ್ಮುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬೆಂಗಳೂರಿನ ಯಶಸ್ಸಿನ ಹಿಂದೆ ಏನಾದರೂ ಇದ್ದರೆ, ಅದು ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ಪ್ರತಿಭೆ “ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಕರ್ನಾಟಕದ ಪ್ರತಿಭೆಗಳು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮುನ್ನಡೆಸುತ್ತವೆ ಎಂದು ನಾನು ಭಾವಿಸುತ್ತೇನೆ. ಅದು ಕೇಂದ್ರ ಸರ್ಕಾರವಾಗಿರಲಿ ಅಥವಾ ರಾಜ್ಯ ಸರ್ಕಾರವಾಗಿರಲಿ, ಎರಡೂ ಜನರ ಸೇವೆಯಲ್ಲಿವೆ. ನಾವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ನಮ್ಮ ನಾಗರಿಕರ ಒಳಿತಿಗಾಗಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. 15,610 ಕೋಟಿ ವೆಚ್ಚದಲ್ಲಿ ಮೆಟ್ರೋ 3ನೇ ಹಂತದ ಯೋಜನೆ ನಿರ್ಮಾಣ ಮಾಡಲಾಗುತ್ತಿದ್ದು, 44.65 ಕಿಮೀ ಉದ್ದದ ಕಿತ್ತಳೆ ಮಾರ್ಗದಲ್ಲಿ 31 ಎತ್ತರಿಸಿದ ನಿಲ್ದಾಣಗಳು ಇರಲಿವೆ.