ವಿಧಾನ ಪರಿಷತ್: ರಾಜ್ಯದಲ್ಲಿ ವಾಣಿಜ್ಯ ಪರವಾನಗಿ (Trade license) ರದ್ಧುಪಡಿಸುವ ಪ್ರಶ್ನೆಯೇ ಇಲ್ಲ. ವ್ಯಾಪಾರಸ್ಥರು ಟ್ರೇಡ್ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಸ್ಪಷ್ಟಪಡಿಸಿದ್ದಾರೆ. ʼಟ್ರೇಡ್ ಲೈಸೆನ್ಸ್ ಪಡೆಯುವುದು ಕಡ್ಡಾಯವೇʼ ಎಂಬ ಬಿಜೆಪಿಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಉತ್ತರಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಪಾರದರ್ಶಕವಾಗಿ ನಿಗದಿತ ಶುಲ್ಕ ಪಡೆದು ವ್ಯಾಪಾರ ಪರವಾನಗಿಯನ್ನು ನೀಡಲಾಗುತ್ತಿದೆ. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸ್ವಲ್ಪ ಮಟ್ಟಿನ ಆದಾಯ ಬರುತ್ತಿದೆ. ಒಂದು ವೇಳೆ ರದ್ದು ಮಾಡಿದರೆ ಪ್ರಾಧಿಕಾರಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದು ತಿಳಿಸಿದರು.
ಟ್ರೇಡ್ ಲೈಸೆನ್ಸ್‌ನಿಂದ ಕಳೆದ ಐದಾರು ತಿಂಗಳಲ್ಲಿ 22 ಕೋಟಿ ರೂಪಾಯಿ ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ 50 ರಿಂದ 60 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರಗಳೇ ಬಳಕೆ ಮಾಡಿಕೊಳ್ಳಲಿವೆ ಎಂದು ಹೇಳಿದರು.
ಮಹಾನಗರ ಪಾಲಿಕೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಗೆ ಅನುಗುಣವಾಗಿ ಕನಿಷ್ಠ ಮತ್ತು ಗರಿಷ್ಠ ಶುಲ್ಕಗಳನ್ನು ನಿಗದಿಪಡಿಸುವ ನೀತಿಯನ್ನು ತರಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲೇ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.