ಆನೆ (Elephant )..ಈ ಪ್ರಾಣಿ ಸದಾ ಒಂದು ಅಚ್ಚರಿ. ಅದರ ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಬೃಹದಾಕಾರದ ಶರೀರ..ಘೀಳಿಡುವ ಶೈಲಿಗಳಿಂದ ಸದಾ ವಿಭಿನ್ನವಾಗಿ ನಿಲ್ಲುವ ಪ್ರಾಣಿ ಇದು. ಅದು ಮುದ್ದೂ ಹೌದು..ಭಯವನ್ನೂ ಹುಟ್ಟಿಸಬಲ್ಲದು. ಗಜರಾಜನೆಂದೇ ಕರೆಯಲ್ಪಡುವ ಆನೆಗೆ ಒಂದು ಗತ್ತಿದೆ. ಅಂಥ ಆನೆಗಾಗಿ ಒಂದು ದಿನವನ್ನೂ ಕೂಡ ಆಚರಿಸಲಾಗುತ್ತದೆ. ಇಡೀ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ಆನೆಗಳ ದಿನ(World Elephant Day)ವನ್ನಾಗಿ ಆಚರಿಸಲಾಗುತ್ತದೆ. ಈ ವಿಶ್ವ ಆನೆಗಳ ದಿನಾಚರಣೆ ಮೊದಲು ಪ್ರಾರಂಭವಾಗಿದ್ದು 2012ರ ಆಗಸ್ಟ್ 12ರಂದು. ಅದರಲ್ಲೂ ಏಷ್ಯಿನ್ ಮತ್ತು ಆಫ್ರಿಕನ್ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು.

2025 ರ ವಿಶ್ವ ಆನೆ ದಿನದ ಸಂದರ್ಭದಲ್ಲಿ, ಭಾರತೀಯ ಅಂಚೆ ಇಲಾಖೆ ಶಿವಮೊಗ್ಗ ಅರಣ್ಯ ಇಲಾಖೆ ಸಹಯೋಗದೊಂದಿಗೆ ಆನೆ ಬಿಡಾರ ಶಿಬಿರದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿತು.

ಆನೆ ಸಂರಕ್ಷಣೆ, ಮಾನವ- ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಮಹತ್ವದ ಸಂದೇಶ ಸಾರುವ ಹಾಗೂ ಆನೆಗಳಿಗೆ ಗೌರವ ಸಲ್ಲಿಸುವ ದಿನ ‘ವಿಶ್ವ ಆನೆಗಳ ದಿನ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ ಟಿ ಹನುಮಂತಪ್ಪ ತಿಳಿಸಿದರು.
ಕರ್ನಾಟಕ ಅರಣ್ಯ ಇಲಾಖೆ, ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ಉಪ ವಿಭಾಗ ಸಕ್ರೆಬೈಲು ವನ್ಯಜೀವಿ ವಲಯ, ಅಂಚೆ ಇಲಾಖೆ ಇವರ ವತಿಯಿಂದ ಮಂಗಳವಾರ ಸಕ್ರೆಬೈಲಿನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಆನೆ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂಚೆ ಇಲಾಖೆ ಅಧೀಕ್ಷಕ ಜಯರಾಂ ಶೆಟ್ಟಿ ಮಾತನಾಡಿ ‘ವಿಶ್ವ ಆನೆ ದಿನಾಚರಣೆ ಸ್ಮರಣಾತ್ಮಕವಾಗಿ ಈ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಗಿದೆ’ ಎಂದರು. ‘2000 ಲಕೋಟೆ ಮಾತ್ರ ಮುದ್ರಿಸಿದ್ದು ಅದರ ಮೌಲ್ಯ 30 ರೂಗಳು ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಲಕೋಟೆಯ ಲಭ್ಯತೆ ಸೀಮಿತವಾಗಿರುವ ಕಾರಣಕ್ಕೆ ಮುಂದೆ ಇದರ ಮೌಲ್ಯ ವೃದ್ಧಿಯಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿಶ್ವ ಆನೆ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಲಾದ ವಿಶೇಷ ಅಂಚೆ ಲಕೋಟೆ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂದೇಶಗಳನ್ನು ಮುದ್ರಿಸಲಾಗಿದೆ.
ಕರ್ನಾಟಕ ರಾಜ್ಯದ ಸಕ್ರೆಬೈಲು ಆನೆ ಬಿಡಾರವು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಗ್ರಾಮದಲ್ಲಿ, ತುಂಗಾ ನದಿಯ ದಂಡೆಯಲ್ಲಿ ಸ್ಥಿತವಾಗಿದೆ. ಇದು ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರಕೃತಿಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಆನೆಗಳ ಜೀವನಕ್ರಮ ಹಾಗೂ ಸಂರಕ್ಷಣೆಯ ಕುರಿತು ಅಧ್ಯಯನ ಮಾಡಲು, ಜೊತೆಗೆ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅತ್ಯುತ್ತಮ ಸ್ಥಳವಾಗಿದೆ. ಸದಾ ಆನೆ ಮರಿಗಳನ್ನು ಹೊಂದಿರುವುದರಿಂದ, ಈ ಬಿಡಾರವು “ಅನೆ ಮರಿ ಬಿಡಾರ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಉಪಟಳ ನೀಡುವ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವುದು ಹಾಗೂ ದಸರಾ ಹಬ್ಬದಲ್ಲಿ ಅವುಗಳನ್ನು ಪಾಲ್ಗೊಳಿಸುವುದು ಪ್ರಮುಖ ಚಟುವಟಿಕೆಗಳಾಗಿವೆ. “ಮಾತೃಪ್ರಧಾನರು ಮತ್ತು ನೆನಪುಗಳು” 2025ರ ವಿಶ್ವ ಆನೆ ದಿನದ ಧೈಯವಾಕ್ಯ ಆಗಿದ್ದು, ತಮ್ಮ ಹಿಂಡುಗಳನ್ನು ಮುನ್ನಡೆಸುವ ಹಾಗೂ ಮಾರ್ಗದರ್ಶನ ನೀಡುವ ಹೆಣ್ಣು ಆನೆಗಳು, ಮತ್ತು ಅವು ಹಂಚಿಕೊಳ್ಳುವ ಆಳವಾದ ಹಾಗೂ ಶಾಶ್ವತವಾದ ನೆನಪುಗಳನ್ನು ಸಂಭ್ರಮಿಸುತ್ತವೆ. ವಿಶ್ವ ಆನೆ ದಿನ – 2025ರ ಸ್ಮರಣಾರ್ಥವಾಗಿ ಈ ವಿಶೇಷ ಲಕೋಟೆಯನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅಂಚೆ ಇಲಾಖೆಯ ಅಧೀಕ್ಷಕರು ಸೇರಿದಂತೆ ಎರಡೂ ಇಲಾಖೆಗಳ ಇತರ ಅಧಿಕಾರಿಗಳು ಭಾಗವಹಿಸಿದ್ದರು.