ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರು ಶನಿವಾರ ಹುಟ್ಟು ಹಬ್ಬ ಆಚರಿಸಿಕೊಂಡರು. ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಬಿವೈಆರ್ ಅಭಿಮಾನಿ ಬಳಗ, ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದಿಂದ ಸಂಸದರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಲ್ಲಿ ಮಹಾ ರುದ್ರಯಾಗ ಹೋಮ ಮಾಡುವುದರ ಜೊತೆಗೆ ಭಗವಂತನು ಸಂಸದ ಬಿ.ವೈ. ಆರ್ ಅವರಿಗೆ ಹೆಚ್ಚಿನ ಆಯಸ್ಸು ಆರೋಗ್ಯ ದೊರಕಿಸಿ ಜನಸೇವೆ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಶ್ರವಣ ಉಪಕರಣಗಳನ್ನು ನೀಡುವ ಮೂಲಕ ತಮ್ಮ ಹುಟ್ಟ ಹಬ್ಬವನ್ನು ಆಚರಿಸಿಕೊಂಡರು. ಮಕ್ಕಳೊಂದಿಗೆ ಕೆಲ ಸಮಯ ಬೆರೆತು ಸಿಹಿ ವಿತರಿಸಿ ತಮ್ಮ ಪ್ರೀತಿಪೂರ್ವಕ ಅಭಿಮಾನ ವ್ಯಕ್ತಪಡಿಸಿದರು.

ಅಭಿಮಾನಿಗಳು ಹಾಗೂ ಹಿತೈಷಿಗಳ ಶುಭ ಕೋರಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ನೀವು ತೋರಿಸಿದ ಬೆಲೆ ಕಟ್ಟಲಾಗದ ನಿಸ್ವಾರ್ಥ ಪ್ರೀತಿ ಮತ್ತು ಆಶೀರ್ವಾದ ನನ್ನನ್ನು ಮತ್ತಷ್ಟು ಮಾನಸಿಕವಾಗಿ ಬಲಶಾಲಿಯನ್ನಾಗಿಸಿದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ಹೊಸ ಚೈತನ್ಯ ದೊರಕಿದೆ. ಈ ಮೂಲಕ ನಿಮ್ಮ ಅಶೋತ್ತರಗಳಿಗೆ ಸದಾ ಜೊತೆಯಾಗಿ ನಿಲ್ಲುವ ವಾಗ್ದಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಹುಟ್ಟು ಹಬ್ಬದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ “BYR Cup-2025” ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ ಕೊಡಲಾಯಿತು.

ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ 1 ರಿಂದ 4 ನೇ ತರಗತಿ ಮಕ್ಕಳಿಗೆ ಜಿಲ್ಲೆಯಾದ್ಯಂತ ಉಚಿತವಾಗಿ ನೀಡಲಾಗುತ್ತಿರುವ ಉತ್ತಮ ಗುಣಮಟ್ಟದ ಸ್ವೇಟರ್ ಅನ್ನು ಇಂದು ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ವಿತರಣೆ ಮಾಡಲಾಯಿತು

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಜನ ಪ್ರತಿನಿಧಿಯಾಗಿ ಜನರಿಗೆ ಉತ್ತರದಾಯಿಯಾಗಿರಬೇಕು. ನನ್ನ ಆಸೆ ಮತ್ತು ಜನರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿರಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರೆ ಜಿಲ್ಲೆ ತನ್ನಿಂದ ತಾನೇ ಅಂತರರಾಷ್ಟ್ರೀಯಮಟ್ಟಕ್ಕೆ ಗುರುತಿಸಲ್ಪಡುತ್ತದೆ. ಅದು ಪ್ರವಾಸೋದ್ಯಮದಲ್ಲಿರಬಹುದು, ಕೈಗಾರಿಕೆಯಲ್ಲಿರಬಹುದು. ರೈಲ್ವೆ ಏರ್ ಬೇಸ್ ಯೋಜನೆಗಳಿರಬಹುದು. ಶಿವಮೊಗ್ಗ ಜಿಲ್ಲೆಗೆ ಯಾರೆ ಬಂದರೂ ನೆಮ್ಮದಿಯಿಂದ ಇರುವಂತೆ ಅಭಿವೃದ್ಧಿ ಮಾಡುವ ಪ್ರಯತ್ನ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಅವರು, ಶಾಸಕರುಗಳಾದ ಚನ್ನಬಸಪ್ಪ, ಗುರುರಾಜ್ ಗಂಟಿಹೊಳೆ, ಅರುಣ್, ಧನಂಜಯ ಸರ್ಜಿ ಅವರು, ಮಾಜಿ ಶಾಸಕರಾದ ರುದ್ರೇಗೌಡ ಅವರು, ಹರತಾಳು ಹಾಲಪ್ಪ, ಅಶೋಕ್ ನಾಯ್ಕ್, ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಮಾಲತೇಶ್, ಅವರು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶ್ರೀಮತಿ ಸುವರ್ಣ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.