ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆಯವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸಲಾಗುತ್ತಿದೆ. ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಸತ್ಯ ಹೊರಬರಲಿದೆ ಎಂಬ ವಿಶ್ವಾಸವಿದೆ” ಎಂದು ಅವರು ತಿಳಿಸಿದ್ದಾರೆ.
ಪಿಟಿಐ(PTI)ಗೆ ನೀಡಿದ ಸಂದರ್ಶನದಲ್ಲಿ, 2012ರ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದ ಹೆಗ್ಗಡೆಯವರು, “ನಾನು ಸರ್ಕಾರಕ್ಕೆ ಮಾಹಿತಿ ನೀಡಿ, ತಕ್ಷಣವೇ ಅಪರಾಧಿಯನ್ನು ಪತ್ತೆಹಚ್ಚಲು ಸಹಕರಿಸಿದೆ. ಪೊಲೀಸರಿಗೆ ಮಾಹಿತಿ ನೀಡುವುದನ್ನು ಬಿಟ್ಟರೆ, ಈ ಪ್ರಕರಣಕ್ಕೆ ನಮಗೆ ಯಾವುದೇ ಸಂಬಂಧವಿಲ್ಲ. ಘಟನೆ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ದೇಶದಲ್ಲಿಯೇ ಇರಲಿಲ್ಲ, ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ಆದರೂ, ಸುಳ್ಳು ಆರೋಪಗಳ ಮೂಲಕ ನಮ್ಮನ್ನು ಎಳೆದು ತರಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಕೆಲವರು ಯುವಕರನ್ನು ದೇವಸ್ಥಾನ ಮತ್ತು ಧಾರ್ಮಿಕ ನಂಬಿಕೆಗಳಿಂದ ದೂರವಿಡಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಈ ಸುಳ್ಳು ಸಂದೇಶಗಳಿಂದ ಯುವಕರ ಮನಸ್ಸನ್ನು ಕಲುಷಿತಗೊಳಿಸಲಾಗುತ್ತಿದೆ” ಎಂದು ಖೇದ ವ್ಯಕ್ತಪಡಿಸಿದರು. ಎಸ್‌ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ, ಯಾವುದೇ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಒತ್ತಿಹೇಳಿದರು
ಹೆಗ್ಗಡೆಯವರು, “ಕ್ಷೇತ್ರದ ಕೀರ್ತಿ ಮತ್ತು ಒಳ್ಳೆ ಕೆಲಸಗಳ ಬಗ್ಗೆ ಅಸೂಯೆಯಿಂದ ಈ ಆರೋಪಗಳನ್ನು ಮಾಡಲಾಗುತ್ತಿದೆ. ಭಕ್ತರಿಗೆ ಎಲ್ಲ ವ್ಯವಸ್ಥೆ, ಅನ್ನದಾನ, ಮತ್ತು ಕ್ಷೇತ್ರದ ಖ್ಯಾತಿಯನ್ನು ಉಳಿಸಲು ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದೇವೆ. ವಿದ್ಯೆ, ಆರೋಗ್ಯ, ಮತ್ತು ಕನ್ನಡ ಶಾಲೆಗಳಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಈ ಆರೋಪಗಳ ಹಿಂದೆ ರಾಜಕೀಯ ಷಡ್ಯಂತ್ರವಿಲ್ಲ ಎಂದು ತಿಳಿಸಿದ ಅವರು, “ಕ್ಷೇತ್ರದ ಮೇಲೆ ಅಪವಾದ ಹಾಕಿದರೆ ಹಿಂದೂ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂಬುದು ಈ ಪಿತೂರಿಯ ಹಿಂದಿರುವವರಿಗೆ ಗೊತ್ತಿದೆ. ಸರ್ಕಾರವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.