ಬೆಂಗಳೂರು: ಎಸ್‌ಸಿ ಒಳ ಮೀಸಲಾತಿಗೆ ಆ.19ರಂದು ನಡೆದ ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ಆಯೋಗದ ಶಿಫಾರಸುಗಳನ್ನು ಕೆಲವು ಮಾರ್ಪಾಡುಗಳೊಂದಿಗೆ ಅಂಗೀಕರಿಸಿದ್ದೇವೆ. ಸರ್ಕಾರವು ಈಗ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯತೆ ಕಂಡುಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ- ಸರ್ಕಾರದ ತೀರ್ಮಾನ ಕುರಿತಂತೆ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದರು.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಎಡಗೈ ಸಮುದಾಯಕ್ಕೆ 6%, ಬಲ ಸಮುದಾಯಕ್ಕೆ 6% ಹಾಗೂ ಸ್ಪೃಶ್ಯ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ಒಳ ಮೀಸಲಾತಿ ಕಲ್ಪಿಸಲಾಗಿದೆ. A, B, C ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಲಾಗಿದ್ದು, ಒಳ ಮೀಸಲಾತಿ ಹೋರಾಟದ ಮೊಕದ್ದಮೆ ಹಿಂಪಡೆಯಲೂ ತೀರ್ಮಾನಿಸಲಾಗಿದೆ. ಈ ಮೂಲಕ ದಶಗಳ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ ಎಂದರು.
ಬದಲಾವಣೆ ಸುಳಿವು ನೀಡಿದ ಸಿಎಂ
ಎಡಗೈ ಜೊತೆ ಬಲಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಕಲ್ಪಿಸಿ ಸರ್ಕಾರ ಎಚ್ಚರಿಕೆ ಇಟ್ಟಿದೆ. ಆದ್ರೆ ಲಂಬಾಣಿ, ಬೋವಿ, ಅಲೆಮಾರಿ ಸೇರಿ 60 ಪರಿಶಿಷ್ಟ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿರುವುದು ಹೊಸ ಸಂಘರ್ಷಕ್ಕೆ ನಾಂದಿಹಾಡಿದೆ. ಇನ್ನು ಒಳಮೀಸಲಾತಿ ಜಾರಿಗೆ ಸಂಬಂಧ ಕೆಲ ತಪ್ಪುಗಳಾಗಿವೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರಿಸುವಾಗ ಬದಲಾವಣೆ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಈ ಮೂಲಕ ಅಲೆಮಾರಿ ಜನಾಂಗದ ಆಕ್ರೋಶ ಹೆಚ್ಚಾದರೆ ಏನಾದರೂ ಬದಲಾವಣೆ ಮಾಡುವ ಸಾಧ್ಯತೆಗಳಿವೆ.