ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಡಕೆ ಬೆಳೆಗಾರರ ಸಂಕಷ್ಟ; ರಾಜ್ಯ ಸಂಸದರ ತಂಡದಿಂದ ಕೇಂದ್ರ ಕೃಷಿ ಸಚಿವರ ಭೇಟಿ

On: August 21, 2025 10:57 PM
Follow Us:

ನವದೆಹಲಿ: ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ  ನೇತೃತ್ವದಲ್ಲಿ ರಾಜ್ಯ ಸಂಸದರ ತಂಡ ಗುರುವಾರ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದೆ. ಅಡಕೆ ಕ್ಯಾನ್ಸರ್‌ ಕಾರಕ ಎಂಬ ವರದಿಯ ಆತಂಕ ಮತ್ತು ಅಡಕೆ ಬೆಳೆಗೆ ತಲೆದೋರಿರುವ ಎಲೆ ಚುಕ್ಕೆ ರೋಗ, ಹಳದಿ ಎಲೆ ಬಾಧಿತ ರೋಗ, ಕೊಳೆ ರೋಗ ಹಾಗೂ ವಿದೇಶಿ ಅಡಕೆ ಆಮದು, ಬೆಲೆ ಅಸ್ಥಿರತೆ ಹೀಗೆ ಬೆಳೆಗಾರರು ಅನುಭವಿಸುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ರಾಜ್ಯ ಸಂಸದರ ತಂಡದ ನಿಯೋಗ ಕೇಂದ್ರ ಕೃಷಿ ಸಚಿವರ ಗಮನ ಸೆಳೆದಿದೆ.

ಬೆಳೆಗಾರರ ಸಮಸ್ಯೆ ತೆರೆದಿಟ್ಟ ಪ್ರಲ್ಹಾದ್ಜೋಶಿ

ರಾಜ್ಯದ ಮಲೆನಾಡು, ಅರೆಮಲೆನಾಡು ಸೇರಿದಂತೆ ಈಗೀಗ ಬಯಲುಸೀಮೆ ಪ್ರದೇಶದಲ್ಲೂ ಅಡಕೆ ಬೆಳೆ ವಿಸ್ತರಣೆ ಕಾಣುತ್ತಿದೆ. ಆದರೆ ಬೆಳೆಗಾರರು ಅಷ್ಟೇ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೋಗಗಳಿಂದಾಗಿ ಬೆಳೆ ಇಳುವರಿ ಕುಸಿತ, ವಿದೇಶಿ ಅಡಕೆ ಆಮದಿನಿಂದ ಮಾರುಕಟ್ಟೆಯಲ್ಲಿ ಬೆಲೆ ಅಸ್ಥಿರತೆ ಉಂಟಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಕೇಂದ್ರ ಕೃಷಿ ಸಚಿವರೆದುರು ಅಡಕೆ ಬೆಳೆಗಾರರ ಸಮಸ್ಯೆಗಳನ್ನು ತೆರೆದಿಟ್ಟರು.

ಅಡಕೆ ಗಿಡ ನೆಟ್ಟು ಫಸಲು ಬರುವವರೆಗೆ ಕಾಯ್ದುಕೊಳ್ಳುವ ಬೆಳೆಗಾರರು ನಂತರದಲ್ಲಿ ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ, ಕೊಳೆ ರೋಗದಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ʼಅಡಕೆ ಕ್ಯಾನ್ಸರ್‌ ಕಾರಕʼ ಎಂಬ ವರದಿ ಬೇರೆ ಬೆಳೆಗಾರರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಹಾಗಾಗಿ ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಪರಿಶೀಲಿಸಿ ಒಂದು ಸ್ಪಷ್ಟ ವರದಿ ಪ್ರಕಟಿಸಿ ರೈತರ ಆತಂಕವನ್ನು ನಿವಾರಿಸಬೇಕಿದೆ ಎಂದು ಸಚಿವ ಜೋಶಿ, ಕೃಷಿ ಸಚಿವರನ್ನು ಒತ್ತಾಯಿಸಿದರು.

ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹೀಗೆ ಹತ್ತಾರು ಜಿಲ್ಲೆಗಳಲ್ಲಿ ಅಡಕೆ ಬೆಳೆ ವಿಸ್ತರಣೆ ಕಂಡಿದೆ. ಅಡಕೆ ಬಹು ವಾರ್ಷಿಕ ಬೆಳೆಯಾಗಿದ್ದರಿಂದ ಅನೇಕ ರೈತರು ಇದರ ಮಧ್ಯೆ ಸಮಗ್ರ ಕೃಷಿ ಪದ್ಧತಿ ಸಹ ಅಳವಡಿಸಿಕೊಂಡಿದ್ದಾರೆ. ಹಾಗಿದ್ದರೂ ಐದಾರು ವರ್ಷ ಅಡಕೆ ಸಸಿ ಜೋಪಾನ ಮಾಡಿ ಇನ್ನೇನು ಫಸಲು ಕೈ ಸೇರಬೇಕು ಎನ್ನುವ ಹಂತದಲ್ಲಿ ಅಡಕೆ ಮರಗಳು ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗಕ್ಕೆ ತುತ್ತಾಗಿ ಬೆಳೆಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕೃಷಿ ಸಚಿವರ ಗಮನಕ್ಕೆ ತಂದರು.

ಇನ್ನು ʼಅಡಕೆ ಕ್ಯಾನ್ಸರ್‌ ಕಾರಕʼ ಹಾಗೂ ʼಕ್ಯಾನ್ಸರ್‌ ಕಾರಕವಲ್ಲʼ ಎಂಬ ದ್ವಂದ್ವ ಬೆಳೆಗಾರರನ್ನು ಆತಂಕಗೊಳಿಸಿದೆ. ಗುಟ್ಕಾದಿಂದ ಅಡಕೆಗೆ ಈ ಕಳಂಕ ಅಂಟಿದೆ ಎನ್ನಲಾಗುತ್ತಿದೆ. ಒಂದೊಂದು ವರದಿಗಳು ಒಂದೊಂದು ವಿಭಿನ್ನ ಅಂಶಗಳನ್ನು ಹೊರಗೆಡವುತ್ತಿವೆ. ಕಳೆದ ಹತ್ತಾರು ವರ್ಷಗಳಿಂದಲೂ ಅಡಕೆ ಕ್ಯಾನ್ಸರ್‌ ಕಾರಕ ಹೌದೋ? ಅಲ್ಲವೋ? ಎಂಬ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದರು.

ವಿಜ್ಞಾನಿಗಳು ಕೆಲವೊಮ್ಮೆ ʼಅಡಕೆ ಕ್ಯಾನ್ಸರ್‌ ಕಾರಕವಲ್ಲʼ ಎಂಬ ವರದಿ ಸಹ ನೀಡಿದ್ದಾರೆ. ಹಾಗಿದ್ದರೂ ಅಡಕೆ ಬೆಳೆಗಾರರಲ್ಲಿನ ದುಗುಡ, ಆತಂಕ ಮಾತ್ರ ಇನ್ನೂ ದೂರವಾಗಿಲ್ಲ. ಈ ಬಗ್ಗೆ ಸ್ಪಷ್ಟ ವರದಿ ಹೊರಬೀಳಬೇಕಿದೆ. ಈ ನಿಟ್ಟಿನಲ್ಲಿ ತಾವು ಹೆಚ್ಚಿನ ಕಾಳಜಿ ವಹಿಸಬೇಕೆಂದು ಶಿವರಾಜಸಿಂಗ್‌ ಚವ್ಹಾಣ್‌ ಅವರಲ್ಲಿ ಮನವಿ ಮಾಡಿದರು.

ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಮತ್ತು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ ಸೇರಿದಂತೆ ರಾಜ್ಯದ ಸಂಸದರು ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರಲ್ಲಿ ಮನವಿ ಮಾಡಿದರು. ಒಂದು ತಾಸಿಗೂ ಹೆಚ್ಚು ಕಾಲ ಕೇಂದ್ರ ಸರ್ಕಾರದ ಈ ಪ್ರತಿನಿಧಿಗಳು ಅಡಕೆ ಬೆಳೆಗಾರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

ಕೃಷಿ ಸಚಿವರ ಅಭಯ

ಸುದೀರ್ಘ ಹೊತ್ತು ನಡೆದ ಸಭೆಯಲ್ಲಿ ಅಡಕೆ ಬೆಳೆಗಾರರ ಸಂಕಷ್ಟ ಬಗ್ಗೆ ಸಮಗ್ರ ಮಾಹಿತಿ ಆಲಿಸಿದ ಕೇಂದ್ರ ಕೃಷಿ‌ ಸಚಿವರು, ಕೇಂದ್ರ ಸರ್ಕಾರ ಈ ಬೆಳೆಗಾರರ ಹಿತ ರಕ್ಷಣೆಗೆ ಬದ್ಧವಾಗಿದೆ ಎಂದರಲ್ಲದೆ, ಈ ಹಿಂದೆ ಸಲ್ಲಿಕೆ ಆಗಿರುವ ವರದಿಗಳನ್ನೆಲ್ಲ ಪರಿಶೀಲಿಸಿ ತ್ವರಿತವಾಗಿ‌ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ಸಹ ನೀಡಿದರು.

ಬೆಳೆ ಹಾನಿ ಪ್ರದೇಶಗಳಿಗೆ ಖುದ್ದು ಭೇಟಿ ಭರವಸೆ

ರಾಜ್ಯದ ನಾನಾ ಭಾಗದಲ್ಲಿ ಅಡಕೆ ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗದಿಂದ ಹಾನಿಯಾದ ಪ್ರದೇಶಗಳಿಗೆ ಶೀಘ್ರದಲ್ಲೇ ತಾವು ಪರಿಣಿತ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡುವುದಾಗಿ ಸಹ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಇದೇ ವೇಳೆ ಭರವಸೆ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Leave a Comment