ಶಿವಮೊಗ್ಗ: ಇದು ಶಿವಮೊಗ್ಗದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚೌಡೇಶ್ವರಿ ಕಾಲೋನಿಯ ರೈಲ್ವೆ ಸೇತುವೆ ಬಳಿ ಪ್ರತಿ ಮಳೆಗಾಲ ಬಂತೆಂದರೆ ಗುಂಡಿಗಳ ಸಮಸ್ಯೆ ತಪ್ಪಿದ್ದಲ್ಲ. ಶಿವಮೊಗ್ಗದಿಂದ ರೈಲ್ವೆ ಸೇತುವೆ ಮಾರ್ಗವಾಗಿ ಹೊನ್ನಾಳಿ ರಸ್ತೆ ಮಾರ್ಗ ಇದಾಗಿದ್ದು ಪ್ರತಿನಿತ್ಯ ನೂರಾರು ಸಾರಿಗೆ ಬಸ್‌ಗಳು, ಖಾಸಗಿ ವಾಹನಗಳ ಸಂಚಾರ ಅಧಿಕವಾಗಿ ಇದೇ ಮಾರ್ಗದಲ್ಲಿ ಶಿವಮೊಗ್ಗ ನಗರಕ್ಕೆ ಸಂಚರಿಸುತ್ತವೆ.
ರೈಲ್ವೆ ಸೇತುವೆ ಬಳಿ, ರೈಲ್ವೆ ವ್ಯಾಗನ್ ಮೂಲಕ ಬರುವ ಪಡಿತರ ಇನ್ನಿತರೆ ವಸ್ತುಗಳನ್ನು ಸಾಗಿಸಲು ಲಾರಿಗಳ ಅತಿಯಾದ ಸಂಚಾರವೇ ರಸ್ತೆ ಹಾಳಾಗುತ್ತಿರುವುದಕ್ಕೆ ಮುಖ್ಯ ಕಾರಣ.
ಶಿವಮೊಗ್ಗ-ಹೊನ್ನಾಳಿ ಮುಖ್ಯರಸ್ತೆಯ ರೈಲ್ವೆ ಸೇತುವೆ ಬಳಿ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆಯ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿ ಸಂಚಾರ ಕಷ್ಟಕರವಾಗಿದೆ.
ಲಾರಿಗಳೇ ಪ್ರಮುಖ ಕಾರಣ:
ರಾಸಾಯನಿಕ ಗೊಬ್ಬರ, ಸಿಮೆಂಟ್ ಹಾಗೂ ಪಡಿತರವನ್ನು ತುಂಬಿಕೊಂಡು ನೂರಾರು ಲಾರಿಗಳು ಪ್ರತಿದಿನ ಇದೇ ಸೇತುವೆ ಬಳಿ ಸಂಚಾರ ಮಾಡುತ್ತಿರುವುದರಿಂದ ರಸ್ತೆ ದಿನೇದಿನೇ ಹಾಳಾಗುತ್ತಿದೆ. ಭಾರೀ ತೂಕದ ವಾಹನಗಳ ಒತ್ತಡದಿಂದ ರಸ್ತೆ ಕುಸಿದು, ಗುಂಡಿಗಳು ಹೆಚ್ಚಾಗುತ್ತಿವೆ.
ಜನರ ಆಕ್ರೋಶ:
“ಪ್ರತಿದಿನ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಪ್ರಾಣದ ಹಂಗು” ಎಂದು ಬೈಕ್ ಸವಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಸ್ ಮತ್ತು ಕಾರುಗಳು ಸಹ ಅಡೆತಡೆ ಅನುಭವಿಸುತ್ತಿದ್ದು, ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ.
ಮಳೆ ಬಂದರೆ ಗುಂಡಿಗಳು ನೀರಿನಿಂದ ತುಂಬಿ ಇನ್ನಷ್ಟು ಅಪಾಯ ಉಂಟುಮಾಡುತ್ತೀವೆ.

ಸ್ಥಳೀಯರ ಬೇಡಿಕೆ:
ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಂಡು ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹ ವ್ಯಕ್ತವಾಗಿದೆ. “ರಸ್ತೆ ದುರಸ್ತಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಆಂದೋಲನ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ರೈಲ್ವೆ ಸೇತುವೆ ಬಳಿ ಭಾರೀ ಲಾರಿಗಳ ಸಂಚಾರದಿಂದ ರಸ್ತೆ ಹಾಳಾಗಿರುವುದು ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡಿದೆ. ಈ ಸಮಸ್ಯೆ ಬಗೆಹರಿಸಲು ತಕ್ಷಣದ ಶಾಶ್ವತ ಪರಿಹಾರ ಅಗತ್ಯವಾಗಿದೆ.
ರಸ್ತೆ ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲದೆ ರಸ್ತೆಯ ಎರಡು ಕಡೆಯ ಫುಟ್‌ಪಾತ್ ಸಂಪೂರ್ಣವಾಗಿ ಹಾಳಾಗಿ ಹೋಗಿರುವುದರಿಂದ ರಸ್ತೆಯು ಸ್ವಲ್ಪ ಅಡಿ ಆಳಕ್ಕೆ ಕುಸಿದಿದೆ. ಇದರಿಂದ ವಾಹನಗಳು ಗುಂಡಿ ಬೀಳುತ್ತಿವೆ. ಸಂಪರ್ಕ ರಸ್ತೆಯಾಗಿರುವುದರಿಂದ ವಿಸ್ತೀರ್ಣಗೊಂಡಿಲ್ಲ. ಪ್ರತಿನಿತ್ಯವೂ ವಾಹನ ಸವಾರರು ದಾರಿಗಾಗಿ ಜಗಳ ಮಾಡುವಂತಾಗಿದೆ.

ಮಳೆಯಲ್ಲಿ ನಿರ್ಮಾಣವಾದ ಹೊಂಡಗಳು ಮಚ್ಚುಲು ಹೆದ್ದಾರಿ ಇಲಾಖೆ ಇಲ್ಲಿನ ರಸ್ತೆಗಳಿಗೆ ಜಲ್ಲಿ ಪುಡಿ ಮತ್ತು ಮಣ್ಣು ಬಳಸಿದ್ದರಿಂದ ಈಗ ಎಲ್ಲಾ ಕಡೆ ಧೂಳು ಅವರಿಸಿದೆ. ಧೂಳಿನಿಂದಾಗಿ ವಾಹನ ಸವಾರರಲ್ಲದೆ ರಸ್ತೆ ಬದಿಯ ಅಂಗಡಿ ಮುಂಗಟ್ಟು, ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮಳೆರಾಯ ಗುಂಡಿ ನಿರ್ಮಾಣ ಮಾಡಿದರೆ, ಸಂಬಂಧಪಟ್ಟ ಇಲಾಖೆ ಜನತಗೆ ಧೂಳು ನೀಡುತ್ತಿದೆ ಎಂದು ಶಾಪ ಹಾಕುವಂತಾಗಿದೆ. ಶೀಘ್ರ ರಸ್ತೆ ನಿರ್ಮಿಸುವಂತೆ ಚೌಡೇಶ್ವರಿ ಕಾಲೋನಿಯ ನಾಗರಿಕರು ಸಂಬಂಧಪಟ್ಟ ಆಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

ಈ ರಸ್ತೆಯಲ್ಲಿ ಬೈಕ್ ಮತ್ತು ಕಾರು ಚಾಲನೆ ಮಾಡುವುದು ತುಂಬಾ ಕಷ್ಟಕರವಾಗಿದೆ. ಅಷ್ಟರಮಟ್ಟಿಗೆ ರಸ್ತೆ ಹಾಳಾಗಿದೆ. ರಸ್ತೆ ದುರಸ್ತಿಗೊಳಿಸುವ ಸಲುವಾಗಿ ಅನೇಕ ಬಾರಿ ಪಾಲಿಕೆ ಮತ್ತು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿ, ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ.
– ಸಿ.ರಮೇಶ್, ಪರಿಸರ, ಸಾಮಾಜಿಕ ಕಾರ್ಯಕರ್ತ, ಶಾಂತಿನಗರ ನಿವಾಸಿ.
ಗುಂಡಿ ರಸ್ತೆ ಕೇವಲ ಒಂದು ಮೂಲಸೌಕರ್ಯ ಸಮಸ್ಯೆಯಲ್ಲ, ಇದು ಪ್ರಾಣಾಪಾಯದ ಸಮಸ್ಯೆ. ಜನರ ಹಣದಿಂದ ನಿರ್ಮಾಣವಾಗುವ ರಸ್ತೆಗಳು ದೀರ್ಘಕಾಲ ಬಾಳಿಕೆಗೆ ತಕ್ಕಂತೆ ನಿರ್ಮಾಣವಾಗಬೇಕು. ಸಾರ್ವಜನಿಕರ ಧ್ವನಿಯನ್ನು ಆಲಿಸಿ, ಗುಂಡಿ ರಸ್ತೆಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದು ಅಧಿಕಾರಿಗಳ ಜವಾಬ್ದಾರಿ ಅಲ್ಲವೇ,..