ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆದ ಷಡ್ಯಂತ್ರ ಒಂದೊಂದಾಗಿ ಬಯಲಾಗುತ್ತಿದೆ. ಇತ್ತೀಚೆಗೆ ಕ್ಷೇತ್ರದ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಶಿವ ತಾಂಡವದ ಫೋಟೋ ಹಂಚಿಕೊಳ್ಳಲಾಗಿದ್ದು, “ನಮೋ ಮಂಜುನಾಥ” ಎಂಬ ಕ್ಯಾಪ್ಷನ್ ಜೊತೆಗೆ ವಿರೋಧಿಗಳಿಗೆ ತಿರುಗೇಟು ನೀಡಲಾಗಿದೆ.
ಹಿಂದಿನ ದಿನಗಳಲ್ಲಿ ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಆರೋಪ ಕೋರ್ಟ್ ಮುಂದೆ ತಲೆತಗ್ಗಿಸಿದ್ದು, ಬೆಳ್ತಂಗಡಿ ನ್ಯಾಯಾಲಯವು ಅವನನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದೇ ವೇಳೆ ಧರ್ಮಸ್ಥಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಸಹ ವಶಕ್ಕೆ ಒಳಗಾಗಿದ್ದಾರೆ. ಎಐ ವಿಡಿಯೋ ಮೂಲಕ ಜನರ ದಾರಿ ತಪ್ಪಿಸಿದ್ದ ಸಮೀರ್ ಎಂ.ಡಿ.ಗೆ ನೋಟಿಸ್, ಹಾಗೂ ಸುಜಾತಾ ಭಟ್ ಹೇಳಿದ ಅನನ್ಯಾ ಭಟ್ ಕಥೆ ಸುಳ್ಳು ಎಂಬುದೂ ಬೆಳಕಿಗೆ ಬಂದಿದೆ.
ಇದೇ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಶಿವ ತಾಂಡವದ ಫೋಟೋ ಹಂಚಿ, “ಸತ್ಯಕ್ಕೆ ಜಯ“ ಎಂದು ಸಾರಲಾಗಿದೆ.
ವಿರೋಧಿಗಳ ಸಂಚು ಬಯಲಾಗುತ್ತಿದೆ
ಧರ್ಮಸ್ಥಳದ ವಿರುದ್ಧ ಕಟ್ಟುಕತೆಗಳನ್ನು ಹೆಣೆದಿದ್ದ ಸಮೀರ್ ಎಂ.ಡಿ. ಕೆಲವೇ ದಿನಗಳ ಹಿಂದೆ “ಶಿವ ತಾಂಡವ ಶುರು“ ಎಂದು ಹೇಳಿ ಜನರನ್ನು ಪ್ರಚೋದನೆಗೆ ಒಳಪಡಿಸಲು ಪ್ರಯತ್ನಿಸಿದ್ದರು. ಆದರೆ, ಎಸ್ಐಟಿ ತನಿಖೆ ಆರಂಭವಾದ ನಂತರ ಎಲ್ಲ ಮುಖವಾಡಗಳು ಒಂದೊಂದಾಗಿ ಕಳಚಿಬಿದ್ದಿವೆ.
ಈಗ ಧರ್ಮಸ್ಥಳ ಕ್ಷೇತ್ರದ ಅಧಿಕೃತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು “ಧರ್ಮೋ ರಕ್ಷತಿ ರಕ್ಷಿತಃ“, “ಕೊನೆಗೆ ಸತ್ಯಕ್ಕೆ ಜಯ“ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಚಿನ್ನಯ್ಯ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ್ದು, ಒಂದೊಂದೇ ಸತ್ಯ ಹೊರಗೆ ಬರುತ್ತಿದೆ. ಎಲ್ಲ ಆರೋಪಗಳಿಂದ ತೊಳೆದಂತಾಗಿದೆ. ಸತ್ಯಕ್ಕೆ ಜಯ ಸಿಕ್ಕಿದೆ. ಜನರ ಪ್ರೀತಿ ಕ್ಷೇತ್ರದ ಮೇಲೆ ಹೀಗೆಯೇ ಇರಲಿ. ಎಸ್ಐಟಿ ತನಿಖೆ ಮುಂದುವರಿಯುತ್ತಿರುವುದರಿಂದ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ“ ಎಂದು ತಿಳಿಸಿದ್ದಾರೆ.