ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಕನ್ನಡವನ್ನು ನನ್ನಷ್ಟು ಬಳಸಿ, ಪ್ರೀತಿಸಿ”– ಬಾನು ಮುಷ್ತಾಕ್ ಟೀಕಾಕಾರರಿಗೆ ಟಾಂಗ್

On: August 26, 2025 8:43 PM
Follow Us:

ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಉದ್ಘಾಟಕರ ಆಯ್ಕೆ ಸುತ್ತ ರಾಜಕೀಯ ತೀವ್ರತೆ ಹೆಚ್ಚಾಗಿದೆ. ಕರುನಾಡಿಗೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಲೇಖಕಿ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೆ ಬಿಜೆಪಿ ಹಾಗೂ ಕೆಲ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ “ಇದರಲ್ಲಿ ರಾಜಕೀಯ ಮಾಡಬೇಡಿ” ಎಂದು ಪ್ರತಿಕ್ರಿಯಿಸಿದೆ.

ಆದರೆ, ಟೀಕಾಕಾರರ ಎಲ್ಲ ವಾದಗಳಿಗೆ ಬಾನು ಮುಷ್ತಾಕ್ ಸ್ವತಃ ಉತ್ತರ ನೀಡಿದ್ದಾರೆ. “ಕೋಟ್ಯಾಂತರ ಕನ್ನಡಿಗರು ನನಗೆ ನೀಡುತ್ತಿರುವ ಪ್ರೀತಿ, ಅಭಿಮಾನವೇ ಸಾಕು. ಒಬ್ಬರಾ ಇಬ್ಬರ ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ಕೊಡಬೇಕು? ಅದರ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

ಟೀಕಾಕಾರರಿಗೆ ತಿರುಗೇಟು

ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಾನು, “ವಿರೋಧ ಪಕ್ಷ ಇರಬೇಕು, ಆಡಳಿತ ಪಕ್ಷ ಇರಬೇಕು. ರಾಜಕೀಯ ಮಾಡಬೇಕು. ಆದರೆ ಯಾವ ವಿಷಯದಲ್ಲಿ ರಾಜಕೀಯ ಮಾಡಬೇಕು, ಯಾವುದರಲ್ಲಿ ಮಾಡಬಾರದು ಎನ್ನುವ ಪ್ರಜ್ಞೆ ರಾಜಕಾರಣಿಗಳಿಗೆ ಇರಬೇಕು,” ಎಂದು ಬಿಜೆಪಿ ನಾಯಕರಿಗೆ ಪರೋಕ್ಷ ಟಾಂಗ್ ಕೊಟ್ಟರು.

ಬೂಕರ್ ಪ್ರಶಸ್ತಿಯ ಮೌಲ್ಯವನ್ನು ನೆನಪಿಸಿದ ಬಾನು, “ಇದೊಂದು ಸುಲಭದ ಸಾಧನೆ ಅಲ್ಲ. ಆದರೆ ಕೆಲವರು ಅರ್ಥವಿಲ್ಲದ ಮಾತುಗಳನ್ನಾಡುತ್ತಾರೆ. ಅವರ ಮಟ್ಟಕ್ಕೆ ತಕ್ಕಂತೆ ಮಾತಾಡ್ತಾರೆ, ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ” ಎಂದರು.

ಕನ್ನಡ ಬಾವುಟದ ಬಗ್ಗೆ ಸ್ಪಷ್ಟನೆ

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ತಮ್ಮ ಭಾಷಣವನ್ನು ತಿರುಚಲಾಗುತ್ತಿದೆ ಎಂದು ಬಾನು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕನ್ನಡವನ್ನು ದೇವರಂತೆ ಪೂಜಿಸುವ ಬದಲು ಭಾಷೆಯಾಗಿ ಬಳಸಬೇಕು. ಬಳಕೆ ಮಾಡಿದಾಗ ಅದು ಬದುಕುತ್ತದೆ. ನಾನು, ನನ್ನ ಮಕ್ಕಳು ಕನ್ನಡ ಶಾಲೆಯಲ್ಲಿ ಓದಿದ್ದೇವೆ. ಕನ್ನಡದ ಬಗ್ಗೆ ನನ್ನ ಬದ್ಧತೆ ಸಾಬೀತಾಗಿದೆ” ಎಂದು ಬಾನು ಹೇಳಿದರು.

ಕನ್ನಡ ಪ್ರೀತಿಯ ಪಾಠ

“ಕನ್ನಡವನ್ನು ನನ್ನಷ್ಟು ಪ್ರೀತಿಸಿ, ನನ್ನಷ್ಟು ಬಳಸಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ನಾನು ಮಾಡಿರುವ ಸಾಧನೆಯಷ್ಟು ಮಾಡಿದವರು ಮಾತ್ರ ಟೀಕೆ ಮಾಡಲು ಅರ್ಹರು” ಎಂದು ಸ್ಪಷ್ಟ ಸಂದೇಶ ನೀಡಿದರು.

ಬೂಕರ್ ಪ್ರಶಸ್ತಿಯ ಸಂತಸ

ಬಾನು ಮುಷ್ತಾಕ್ ತಮ್ಮ ಬೂಕರ್ ಪ್ರಶಸ್ತಿ ನಂತರ ಕನ್ನಡಿಗರಿಂದ ಪಡೆದ ಅಪಾರ ಪ್ರೀತಿ, ಗೌರವದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. “ಬೂಕರ್ ಪ್ರಶಸ್ತಿ ನನಗೆ ಬಂದರೂ, ಅದನ್ನು ಕನ್ನಡಿಗರು ತಮ್ಮದಾಗಿ ಸಂಭ್ರಮಿಸಿದರು. ದಸರಾ ಉದ್ಘಾಟನೆಗೆ ಸರ್ಕಾರ ನೀಡಿದ ಗೌರವಕ್ಕೆ ನಾನು ಕೃತಜ್ಞ” ಎಂದರು.

ಚಾಮುಂಡೇಶ್ವರಿ ತಾಯಿಯ ಕರೆಯೋಲೆ

“ನನ್ನ ಗೆಳತಿ ಮೀನಾ ಮೈಸೂರು ಬೂಕರ್ ಬರಲಿ ಎಂದು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರು. ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಉದ್ಘಾಟನೆಗೆ ಕರೆಸಿಕೊಂಡಿದ್ದಾಳೆ” ಎಂದು ಬಾನು ಹರ್ಷ ವ್ಯಕ್ತಪಡಿಸಿದರು.

ಈ ಮೂಲಕ ಬಾನು ಮುಷ್ತಾಕ್ ತಮ್ಮ ವಿರೋಧಿಗಳಿಗೆ ನೇರ, ಪರೋಕ್ಷವಾಗಿ ತಿರುಗೇಟು ನೀಡುತ್ತಾ ದಸರಾ ಉದ್ಘಾಟನೆಗೆ ತಾವು ಸಜ್ಜಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment