ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ (ಆಗಸ್ಟ್ 28) ಕೃಷ್ಣಾದಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು 37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ ಗುರಿ ಹೊಂದಿರುವುದಾಗಿ ತಿಳಿಸಿದರು.
ಜುಲೈ ಅಂತ್ಯದವರೆಗೆ 8,69,284 ರೈತರಿಗೆ 8,362.68 ಕೋಟಿ ರೂ. ಸಾಲ ವಿತರಣೆ ಆಗಿದ್ದು, ರೈತರಿಗೆ ಸಕಾಲದಲ್ಲಿ ಸಾಲ ಸಿಗುವಂತೆ ಖಾತ್ರಿಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯ ಮುಖ್ಯಾಂಶಗಳು;
ನಬಾರ್ಡ್ ರಿಯಾಯಿತಿ ಬಡ್ಡಿದರದ ಸಾಲ ಮಿತಿಯನ್ನು ಹಿಂದಿನ ಸಾಲಿನಲ್ಲಿ 5,600 ಕೋಟಿಯಿಂದ 3,236.11 ಕೋಟಿಗೆ ಕಡಿತಗೊಳಿಸಿದ್ದರೂ, ಶೇ.96.07ರಷ್ಟು ಪ್ರಗತಿ ಸಾಧಿಸಲಾಗಿದೆ.
2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ.
ರಾಜ್ಯದ 28,516 ಸಹಕಾರ ಸಂಘಗಳು ಲಾಭದಲ್ಲಿ, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ನಡೆಯದ ಕಾರಣ ನಷ್ಟ ಹೆಚ್ಚಿದ್ದು, ವಸೂಲಾತಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದನೆ ಹೆಚ್ಚಿಸುವ ಜವಾಬ್ದಾರಿ ಸಂಘಗಳ ಕಾರ್ಯದರ್ಶಿಗಳದ್ದು ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅವ್ಯವಹಾರಗಳ ತನಿಖೆ ಡಿಆರ್ಸಿಎಸ್ ಮೂಲಕ ನಡೆಯುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಸಹಕಾರ ಸಂಘಗಳ 126 ಹಿರಿಯ ನಿರೀಕ್ಷಕರ ಹುದ್ದೆಗಳು ಹಾಗೂ 403 ನಿರೀಕ್ಷಕರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ನಿಬಂಧಕರ ಕಚೇರಿಯ ಸೇವೆಗಳನ್ನು ಗಣಕೀಕರಣ ಮಾಡುವ ಕಾರ್ಯವನ್ನು ತ್ವರಿತಗೊಳಿಸಲು ಸೂಚಿಸಿದರು.
ರಾಜ್ಯದಲ್ಲಿ 7,074 ಗಿರವಿದಾರ ಸಂಸ್ಥೆಗಳು ಹಾಗೂ 1,468 ಚೀಟಿ ಸಂಸ್ಥೆಗಳು ವಿವಿಧ ಅಧಿನಿಯಮಗಳಡಿ ನೋಂದಣಿಯಾಗಿದ್ದು, ಅನಧಿಕೃತ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸಭೆಯಲ್ಲಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.