ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಅವರಿಗೆ ಸಂಬಂಧಿಸಿದ ಎರಡು ಪ್ರಮುಖ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ.
ಪ್ರಾಸಿಕ್ಯೂಷನ್ ಪರ ವಕೀಲರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಮರುಮತ್ತೆ ರಾಜಾತಿಥ್ಯ ಸಿಗುವ ಭೀತಿ ಇರುವುದರಿಂದ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇನ್ನೊಂದು ಕಡೆ, ದರ್ಶನ್ ಪರ ವಕೀಲರು ಹಾಸಿಗೆ ದಿಂಬು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ಈ ಎರಡು ಅರ್ಜಿಗಳ ವಿಚಾರಣೆ ನಡೆಸಲಿದೆ. ದರ್ಶನ್‌ರ ಜೊತೆಗೆ ಆರೋಪಿಗಳಾದ ಜಗದೀಶ್, ಲಕ್ಷ್ಮಣ್, ನಾಗರಾಜ್ ಮತ್ತು ಪ್ರದೋಷ್‌ರನ್ನು ಕೂಡ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಪ್ರಾಸಿಕ್ಯೂಷನ್ ಒತ್ತಾಯಿಸಿದೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದಿದ್ದಾರೆಂಬ ಆರೋಪ ಹಿನ್ನೆಲೆ, ಸುಪ್ರೀಂ ಕೋರ್ಟ್ ಕೂಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆಯನ್ನೂ ನೀಡಿತ್ತು.
ಈ ಹಿನ್ನೆಲೆಯಲ್ಲಿ, ಕೆಳಗಿನ ಕೋರ್ಟ್ ಕೂಡಾ ದರ್ಶನ್‌ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಇಂದು ಮಧ್ಯಾಹ್ನ ತೀರ್ಪು ಬರಲಿದ್ದು, ದರ್ಶನ್ ಯಾವ ಜೈಲಿನಲ್ಲಿ ಇರಬೇಕೆಂಬ ಕುತೂಹಲಕ್ಕೆ ತೆರೆ ಬೀಳಲಿದೆ.