ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯಾದ್ಯಂತ ಗಣೇಶೋತ್ಸವದ 6ನೇ ದಿನದಂದು ಒಟ್ಟು 197 ಗಣಪತಿ ಮೂರ್ತಿಗಳ ವಿಸರ್ಜನೆ ಭಕ್ತರ ಧಾರ್ಮಿಕ ಸಂಭ್ರಮದ ನಡುವೆ ಶಾಂತಿಯುತವಾಗಿ ನೆರವೇರಿತು. ಎಲ್ಲೆಡೆ ಭಕ್ತಿ, ಶಿಸ್ತು, ಸಂಭ್ರಮ ಮತ್ತು ಸೌಹಾರ್ದತೆಯ ದೃಶ್ಯಗಳು ಕಣ್ಣಿಗೆ ಕಾಣುತ್ತಿದ್ದವು.
ತುಂಗಾನಗರದಲ್ಲಿ ಪ್ರಸಾದ ವಿತರಿಸಿದ ಗಣಪತಿ ಮಂಡಳಿ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗಿನ ತುಂಗಾನಗರ ಗಣಪತಿ ಮಂಡಳಿಯವರು, ಟಿಪ್ಪು ನಗರ 7ನೇ ಕ್ರಾಸ್‌ನ ಮುಸ್ಲಿಂ ಬಾಂದವರಿಗೆ ಪ್ರಸಾದ ವಿತರಿಸಿ, ಹಬ್ಬದ ಸಂತೋಷವನ್ನು ಹಂಚಿಕೊಂಡರು. ಧರ್ಮ ಬೇರೆಯಾದರೂ ಹಬ್ಬದ ಹರ್ಷವು ಎಲ್ಲರಿಗೂ ಸೇರಿದೆ ಎಂಬ ಸಂದೇಶವನ್ನು ಅವರು ತಮ್ಮ ನಡೆಗಳಿಂದ ತೋರಿಸಿದರು.
ಜೆಪಿ ನಗರದಲ್ಲಿ ಮಾಲೆ ಅರ್ಪಿಸಿದ ಮುಸ್ಲಿಂ ಸಮುದಾಯ
ಜೆಪಿ ನಗರದ ನಾಗಲಿಂಗೇಶ್ವರ ದೇವಸ್ಥಾನ ಕಮಿಟಿಯ ಗಣಪತಿ ಮೆರವಣಿಗೆ ಸಡಗರದಿಂದ ಸಾಗುತ್ತಿದ್ದ ವೇಳೆ, ಜೆಪಿ ನಗರದ ಝಂಡಾಕಟ್ಟೆ ಮಖಾನ್ ಮತ್ತು ಗೌಸಿಯ ಕಮಿಟಿಯ ಸದಸ್ಯರು ಮೆರವಣಿಗೆಯನ್ನು ಸ್ವಾಗತಿಸಿ ಗಣಪತಿಗೆ ಹೂವಿನ ಮಾಲೆಗಳನ್ನು ಅರ್ಪಿಸಿದರು. ಈ ಘಟನೆಗೆ ಸಾಕ್ಷಿಯಾದ ಜನರು ಭಾವುಕರಾಗಿ ಸೌಹಾರ್ದತೆಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಂಬೇಡ್ಕರ್ ನಗರದಲ್ಲಿ ಹೂಮಾಲೆ ಮತ್ತು ಸಿಹಿ ಹಂಚಿದ ಮುಸ್ಲಿಂ ಮುಖಂಡರು
ಅದೇ ರೀತಿ ಅಂಬೇಡ್ಕರ್ ನಗರ ಟಿಪ್ಪು ನಗರ 7ನೇ ತಿರುವಿನ ವಿನಾಯಕ ದೇವಸ್ಥಾನ ಸೇವಾ ಸಮಿತಿಯ ಗಣಪತಿ ಮೆರವಣಿಗೆ ಯಾ ರಸುಲ್ ಉಲ್ಲಾ ಮಸೀದಿಯ ಬಳಿ ತಲುಪಿದಾಗ, ಮುಸ್ಲಿಂ ಮುಖಂಡರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಗಣಪತಿಗೆ ಹೂವಿನ ಮಾಲೆ ಹಾಕಿ ಸಿಹಿ ಹಂಚುವ ಮೂಲಕ ಭಾವೈಕ್ಯತೆಯ ಅನನ್ಯ ಮಾದರಿಯನ್ನು ತೋರಿಸಿದರು.
ಸೌಹಾರ್ದತೆಯ ಮೆಚ್ಚುಗೆ
ಈ ಘಟನಾವಳಿಗಳು ಜಿಲ್ಲೆಯಲ್ಲಿ ಧಾರ್ಮಿಕ ಭಾವೈಕ್ಯತೆಯ ಶಕ್ತಿಯ ಸಂಕೇತವಾಗಿದ್ದು, ಹಬ್ಬಗಳು ಜನರನ್ನು ಒಂದೇ ಹಾದಿಯಲ್ಲಿ ಕೊಂಡೊಯ್ಯುವ ಸೇತುವೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಸ್ಥಳೀಯರು “ಶಿವಮೊಗ್ಗ ಸೌಹಾರ್ದತೆಯ ನೆಲೆ, ಇಲ್ಲಿ ಹಬ್ಬಗಳು ಎಲ್ಲರಿಗೂ ಹಬ್ಬ” ಎಂದು ಪ್ರತಿಕ್ರಿಯೆ ನೀಡಿದರು.
ಶಾಂತಿಯುತ ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆಯ ಸೂಕ್ತ ಬಂದೋಬಸ್ತ್

ಗಣೇಶೋತ್ಸವದ ಅಂಗವಾಗಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಶ್ಲಾಘನೀಯ ಪಾತ್ರವಹಿಸಿತು. ಜಿಲ್ಲೆಯಾದ್ಯಂತ ವಿಸರ್ಜನೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತುಂಗಾನಗರ ಪೊಲೀಸ್ ಠಾಣೆ ಯಿಂದ ತೀವ್ರ ನಿಗಾವಹಿಸಿ ಬಂದೋಬಸ್ತ್ ಒದಗಿಸಿದರು.
ಮೆರವಣಿಗೆಯ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಹಾಗೂ ಜನಸಂದಣಿಯನ್ನು ನಿಯಂತ್ರಿಸಲು ವಿವಿಧ ಠಾಣೆಗಳ ಪೊಲೀಸರು ಸ್ಥಳದಲ್ಲೇ ನಿಯೋಜಿತರಾಗಿದ್ದರು. ಹಬ್ಬದ ಉತ್ಸಾಹದಲ್ಲಿ ಜನಸಾಮಾನ್ಯರು ಯಾವುದೇ ಅಡಚಣೆ ಎದುರಿಸದೇ ಸಂಭ್ರಮಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ಕೈಗೊಂಡಿತು.
ಮೆರವಣಿಗೆ ಮಾರ್ಗದಲ್ಲಿ ನಿಯೋಜಿಸಲಾದ ಪೊಲೀಸರು ಶಾಂತಿಯುತವಾಗಿ ವಿಸರ್ಜನೆ ಪ್ರಕ್ರಿಯೆ ನೆರವೇರಲು ಸಹಕರಿಸಿದರು. ಸ್ಥಳೀಯ ನಾಗರಿಕರು ಪೊಲೀಸರ ಈ ಬದ್ಧತೆ ಮತ್ತು ಶ್ರಮವನ್ನು ಮೆಚ್ಚಿ ಕೊಂಡರು.
ಈ ಬಾರಿಯೂ ಸಹ, ಜನರ ಸಹಕಾರ ಮತ್ತು ಪೊಲೀಸರ ಜಾಗರೂಕ ಕಾರ್ಯಪದ್ಧತೆಯಿಂದ ಗಣೇಶ ವಿಸರ್ಜನೆ ಕಾರ್ಯಕ್ರಮವು ಎಲ್ಲೆಡೆ ಹರ್ಷೋಲ್ಲಾಸದ ನಡುವೆಯೇ ಶಾಂತಿಯುತವಾಗಿ ಮುಕ್ತಾಯವಾಯಿತು.