ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಜಪಾನ್ ಮತ್ತು ಚೀನಾ ಪ್ರವಾಸವನ್ನು ಶ್ಲಾಘಿಸಿದ್ದಾರೆ. ಈ ಕುರಿತಾಗಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.
ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯು ಭಾರತ–ಚೀನಾ–ರಷ್ಯಾ ದೇಶಗಳ ಸಮಾಗಮಕ್ಕೆ ವೇದಿಕೆಯಾದ ಹಿನ್ನೆಲೆಯಲ್ಲಿ ದೇವೇಗೌಡರು ಮೋದಿ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇವೇಗೌಡ ಬರೆದಿರುವ ಪತ್ರದ ಅಂಶಗಳು:
- ಅಮೆರಿಕ ಹೇರುತ್ತಿರುವ ಸುಂಕಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವ ಪ್ರಧಾನಿ ಮೋದಿಯವರ ಪ್ರಯತ್ನ ಶ್ಲಾಘನೀಯ.
- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಬೆಸೆಯುತ್ತಿರುವ ಸ್ನೇಹ ಹೊಸ ಜಾಗತಿಕ ಸಂದೇಶ ನೀಡುತ್ತಿದೆ.
- ಉಕ್ರೇನ್ ಯುದ್ಧ ಕೊನೆಗಾಣಿಸಲು ಮೋದಿಯವರು ಪುಟಿನ್ ಅವರೊಂದಿಗೆ ಚರ್ಚೆ ನಡೆಸಿರುವುದು ಶಾಂತಿಗಾಗಿ ಮಹತ್ವದ್ದು.
- ಭಾರತದ ಆರ್ಥಿಕ, ಜನಸಂಖ್ಯಾ ಮತ್ತು ಪ್ರಜಾಪ್ರಭುತ್ವದ ಶಕ್ತಿ ಅಮೆರಿಕ ಕೂಡ ಮರುಪರಿಶೀಲನೆಗೆ ದಾರಿಯಾಗಲಿದೆ.
- ಪುಟಿನ್ ಮತ್ತು ಜಿನ್‌ಪಿಂಗ್ ಜೊತೆಗಿನ ಮೋದಿ ಅವರ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಜಗತ್ತಿನಾದ್ಯಂತ ರಾಷ್ಟ್ರಾಧ್ಯಕ್ಷರ ಸ್ನೇಹದ ಸಂಕೇತವಾಗಿ ಹರಡುತ್ತಿವೆ.
- ಇದು ಭಾರತವನ್ನು ಜಾಗತಿಕ ಸಮೃದ್ಧಿ ಮತ್ತು ಶಾಂತಿಯ ಕೇಂದ್ರದಲ್ಲಿ ಸ್ಥಾಪಿಸುವ ಹೊಸ ವಿಶ್ವಕ್ರಮದ ಆರಂಭವಾಗಿದೆ.
- ಭಾರತದ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಲು ಮೋದಿ ದೃಢನಿಶ್ಚಯ ಹೊಂದಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರದ ಕೊನೆಯಲ್ಲಿ ದೇವೇಗೌಡರು, “ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.