ಬೆಂಗಳೂರು, 2025 ಸೆಪ್ಟೆಂಬರ್ 5:
ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಯಂತ್ರ ಬದಿಗಿಟ್ಟು ಮತಪತ್ರ (ಬ್ಯಾಲಟ್ ಪೇಪರ್) ಬಳಕೆಗೆ ನಿರ್ಧರಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಂಪುಟ ತೀರ್ಮಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
“ಈ ನಿರ್ಧಾರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂಬುದನ್ನು ಸ್ವೀಕರಿಸುತ್ತಿರುವಂತೆ. ಇದೇ ಕಾರಣದಿಂದ, 2023ರ ಚುನಾವಣೆಗಳಲ್ಲಿ EVM ಬಳಸಿ ಆಯ್ಕೆಗೊಂಡ 136 ಕಾಂಗ್ರೆಸ್ ಶಾಸಕರಿಂದ ಮೊದಲು ರಾಜೀನಾಮೆ ನೀಡಬೇಕು. ಅದೇ ರೀತಿಯಾಗಿ ರಾಜ್ಯದಿಂದ ಆಯ್ಕೆಯಾದ 9 ಕಾಂಗ್ರೆಸ್ ಲೋಕಸಭಾ ಸದಸ್ಯರು ರಾಜೀನಾಮೆ ನೀಡಿ, ಮತಪತ್ರ ಬಳಸಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬರುವರಂತೆ ಪ್ರಜಾಪ್ರಭುತ್ವ ಪರೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಅವರು ತಮ್ಮ ಅಧಿಕಾರ ಪಡೆಯುವ ಪ್ರಕ್ರಿಯೆ ತಪ್ಪಿತಸ್ಥವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು.”
ಬಿವೈ ವಿಜಯೇಂದ್ರ ಅವರು ಇತಿಹಾಸದಲ್ಲಿ ನಡೆದ ಅಕ್ರಮ ಮತದಾನ, ಮತಗಳ್ಳತನ ಮತ್ತು ಚುನಾವಣಾ ದೌರ್ಜನ್ಯ ಪ್ರಕರಣಗಳನ್ನು ಉದಾಹರಿಸುತ್ತಾ, “ಮತಪತ್ರ ಆಧರಿಸಿದ ಚುನಾವಣೆಯಲ್ಲಿ ಅಕ್ರಮಗಳು ಹೆಚ್ಚು ನಡೆದಿರುವುದನ್ನು ಕಾಂಗ್ರೆಸ್ಸಿಗರು ಸ್ವೀಕರಬೇಕು. 90ರ ದಶಕದಲ್ಲಿ ದಾವಣಗೆರೆಯಲ್ಲಿ ನಡೆದ ಮರು ಎಣಿಕೆ ಪ್ರಕರಣಗಳು ಅದಕ್ಕೆ ಸಾಕ್ಷಿ. ಬಿಜೆಪಿ ಅಭ್ಯರ್ಥಿಯ ಮತಪತ್ರಗಳು ಹೇಗೆ ತಿರಸ್ಕೃತಗೊಂಡವು ಎಂಬುದನ್ನು ಮಾಧ್ಯಮಗಳು ವರದಿ ಮಾಡಿವೆ” ಎಂದು ಹೇಳಿದ್ದಾರೆ.

ಅವರ ಅಭಿಪ್ರಾಯದಲ್ಲಿ, “ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮತಗಳ್ಳತನದ ಆರೋಪದ ಹೆಸರಿನಲ್ಲಿ ಮತಪತ್ರದ ಬಳಕೆಯನ್ನು ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಜಾರಿಗೊಳಿಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಾರದರ್ಶಕ ಚುನಾವಣೆಯನ್ನು ಧಿಕ್ಕರಿಸುವ ಉದ್ದೇಶದಿಂದಾಗಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇದನ್ನು ಬೆಂಬಲಿಸುತ್ತಿದೆ” ಎಂದು ಹೇಳಿದ್ದಾರೆ.
ಬಿವೈ ವಿಜಯೇಂದ್ರ ಕೊನೆಗೆ, “ಇಡೀ ದೇಶ ಮತ್ತು ಜಗತ್ತು ತಂತ್ರಜ್ಞಾನ ಆಧಾರಿತ ವಿಧಾನಗಳತ್ತ ಮುನ್ನುಗ್ಗುತ್ತಿದ್ದಾಗ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಳೆ ವಿಧಾನಗಳಿಗೆ ಮತ್ತೆ ಮತಪತ್ರದ ಬಳಕೆಯನ್ನು ನವೀಕರಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಮತ್ತು ಅಸಮರ್ಪಕ ಕ್ರಮವಾಗಿದೆ” ಎಂದು ಖಂಡಿಸಿದ್ದಾರೆ.