ಬೆಂಗಳೂರು, ಸೆ. 15 – ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಚರ್ಚೆ ಆರಂಭವಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಮುದಾಯವಾದ ಕುರುಬರನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕಸರತ್ತಿಗೆ ಕೈ ಹಾಕಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ನಾಳೆ (ಸೆ.16) ಬೆಂಗಳೂರಿನ ಬಹುಕಟ್ಟಡದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವ ಹಾಗೂ ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳ ಕುರುಬರು ಗೊಂಡ ಸಮುದಾಯದೊಂದಿಗೆ ಸಾಮ್ಯತೆ ಹೊಂದಿರುವ ಬಗ್ಗೆ ಚರ್ಚೆ ನಡೆಯಲಿದೆ.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತ ನಿರ್ಧಾರದಿಂದಲೇ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿದ್ದರೆ, ಅಲೆಮಾರಿ ಸಮುದಾಯಗಳು ನಾಗಮೋಹನ್ ದಾಸ್ ಸಮಿತಿಯ ಶಿಫಾರಸ್ಸಿನಂತೆ ಪ್ರತ್ಯೇಕ ಮೀಸಲಾತಿ ಕೋರುತ್ತಿವೆ. ಈ ನಡುವೆ ಕುರುಬರನ್ನು ಎಸ್‌ಟಿಗೆ ಸೇರಿಸುವ ಸರ್ಕಾರದ ಯೋಚನೆ ಹೊಸ ವಿವಾದಕ್ಕೆ ಕಾರಣವಾಗುತ್ತಿದೆ.
ಬಿಜೆಪಿ ಶಾಸಕ ಶ್ರೀವತ್ಸ ತೀವ್ರ ಕಿಡಿಕಾರಿದ್ದು – “ಪುತ್ರ ಯತೀಂದ್ರಗೆ ಮೀಸಲು ಕ್ಷೇತ್ರ ಕೊಡಿಸಲು ಸಿದ್ದರಾಮಯ್ಯ ತಂತ್ರ ಮಾಡುತ್ತಿದ್ದಾರೆ. ಕುರುಬರನ್ನು ಎಸ್‌ಟಿಗೆ ಸೇರಿಸುವುದು ಸ್ವಜನ ಪಕ್ಷಪಾತ, ಧೃತರಾಷ್ಟ್ರ ಪ್ರೇಮ. ಇದು ದೊಡ್ಡ ಅಪರಾಧ,” ಎಂದು ಆರೋಪಿಸಿದ್ದಾರೆ.
ಈಗಾಗಲೇ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ ಹಲವು ಪ್ರತಿಭಟನೆಗಳು ನಡೆದಿದ್ದವು. ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆಯೂ ನಡೆದಿತ್ತು. ಆಂದೋಲನಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಬಿಜೆಪಿ ನಾಯಕರೂ ಬೆಂಬಲಿಸಿದ್ದರು. ಆ ವೇಳೆಯಲ್ಲಿ ಸಿದ್ದರಾಮಯ್ಯ ಮೌನವಾಗಿದ್ದರು.
ಆದರೆ ಇದೀಗ ತಮ್ಮ ಸಮುದಾಯದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವುದು ಕುರುಬ ಸಮುದಾಯದಲ್ಲಿ ಸಂತೋಷ ಮೂಡಿಸಿದರೂ, ಇತರ ಸಮುದಾಯಗಳಲ್ಲಿ ಅಸಮಾಧಾನ ಹೆಚ್ಚಿಸಿದೆ.
ಮುಂದಿನ ದಿನಗಳಲ್ಲಿ ಸಭೆಯಲ್ಲಿ ತೆಗೆದುಕೊಳ್ಳಲಿರುವ ನಿರ್ಧಾರಗಳು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೂ, ಕೇಂದ್ರ ಪರಿಶಿಷ್ಟ ಪಂಗಡಗಳ ಆಯೋಗಕ್ಕೂ ಶಿಫಾರಸ್ಸಾಗುವ ಸಾಧ್ಯತೆ ಇದೆ. ಹೀಗಾಗಿ ಕುರುಬರ ಸೇರ್ಪಡೆ ಕುರಿತ ತೀರ್ಮಾನ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಜ್ವಾಲೆ ಎಬ್ಬಿಸುವ ಲಕ್ಷಣಗಳು ಗೋಚರಿಸುತ್ತಿವೆ.