ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ “ಬಸವ ಸಂಸ್ಕೃತಿ ಅಭಿಯಾನ” ಅದ್ಧೂರಿ ಸ್ವಾಗತಕ್ಕೆ ಸಿದ್ದತೆ

On: September 16, 2025 6:26 PM
Follow Us:

ಶಿವಮೊಗ್ಗ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ “ಬಸವ ಸಂಸ್ಕೃತಿ ಅಭಿಯಾನ” ರಾಜ್ಯದಾದ್ಯಂತ ಭಾರೀ ಸ್ಪಂದನೆ ಪಡೆಯುತ್ತಿದ್ದು, ಸೆಪ್ಟೆಂಬರ್ 17, 2025ರಂದು ಶಿವಮೊಗ್ಗದಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ದವಾಗಿದೆ.

ರಾಜ್ಯ ಸರ್ಕಾರವು ಬಸವಣ್ಣನನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಸೆಪ್ಟೆಂಬರ್ 1ರಿಂದ ಅಕ್ಟೋಬರ್ 5ರವರೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಅಭಿಯಾನ ಹಮ್ಮಿಕೊಂಡಿದೆ.

ಬಸವ ಸಂಸ್ಕೃತಿ ಅಭಿಯಾನ: ಮಠಾಧಿಪತಿಗಳ ಒಗ್ಗಟ್ಟಿನ ಸಂದೇಶ

ಶಿವಮೊಗ್ಗದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ “ಬಸವ ಸಂಸ್ಕೃತಿ ಅಭಿಯಾನ”ಗೆ ರಾಜ್ಯಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಸಮಾಜದಲ್ಲಿ ಸಮಾನತೆ, ಸಹಕಾರ ಮತ್ತು ಶಾಂತಿಯ ಸಂದೇಶ ಹರಡುವ ಗುರಿ ಹೊಂದಿದ ಈ ಅಭಿಯಾನದ ಮಹತ್ವವನ್ನು  ಜಗದ್ಗುರುಗಳು ತಮ್ಮ ಸಂದೇಶಗಳನ್ನು ನೀಡಿದ್ದಾರೆ.

ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು (ಬೆಕ್ಕಿನಕಲ್ಮಠ)

“ಬಸವ ಸಂಸ್ಕೃತಿ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಸಮಾಜ ಸುಧಾರಣೆಯ ಚಳವಳಿ. ಬಸವಣ್ಣನ ತತ್ತ್ವಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಗೌರವವಿದೆ. ವಚನಗಳ ಬೋಧನೆ ಜನಮನದಲ್ಲಿ ಬಿತ್ತಿದರೆ, ನವ ಕರ್ನಾಟಕದ ಕನಸು ನನಸಾಗುತ್ತದೆ.”

ಗದಗದ ಶ್ರೀ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು

“ಇಂದಿನ ಸಮಾಜದಲ್ಲಿ ಅಸಮಾನತೆ, ಅಂಧಶ್ರದ್ಧೆ, ವ್ಯಸನಗಳು ಹೆಚ್ಚುತ್ತಿರುವ ಸಂದರ್ಭದಲ್ಲೂ ಬಸವ ತತ್ತ್ವವು ಸತ್ಯ, ದಯೆ, ಕಾಯಕದ ಹಾದಿಯಲ್ಲಿ ಜನರನ್ನು ನಡೆಸುತ್ತದೆ. ಯುವಜನತೆ ಈ ಅಭಿಯಾನದ ಮೂಲಕ ಬಸವ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜ ಸುಧಾರಣೆ ಸಾಧ್ಯ.”

ಸಾಣೆಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

“ಬಸವ ತತ್ತ್ವಗಳು ಶಾಶ್ವತವಾದ ಮಾನವೀಯ ಮೌಲ್ಯಗಳನ್ನು ಹೊತ್ತಿವೆ. ಅಂಧಶ್ರದ್ಧೆ, ಅಸಮಾನತೆ, ಅಹಂಕಾರವನ್ನು ದೂರ ಮಾಡಿ — ಜ್ಞಾನ, ಪ್ರೀತಿ, ಶಾಂತಿ, ಸಹಕಾರದ ಬದುಕಿಗೆ ದಾರಿದೀಪವಾಗುವುದೇ ಈ ಅಭಿಯಾನ.”

ಮುಂಡರಗಿ ಶ್ರೀ ನಿಜಗುಣ ಪ್ರಭುತೋಂಟದಾರ್ಯ ಮಹಾಸ್ವಾಮಿಗಳು

ಬಸವ ಸಂಸ್ಕೃತಿ ಅಭಿಯಾನವು ಸಮಾನತೆ ಮತ್ತು ಸಹೋದರತ್ವದ ಬದುಕಿಗೆ ಪ್ರೇರಕವಾಗಿದೆ. ವಚನಗಳು ಶಾಶ್ವತ ದೀಪಗಳು. ಪಾಲ್ಗೊಳ್ಳುವಿಕೆಯಿಂದ ಸಮಾಜದಲ್ಲಿ ಒಗ್ಗಟ್ಟಿನ ಬಲ ಹೆಚ್ಚುತ್ತದೆ.”

ಬಾಲ್ಕಿಯ ಶ್ರೀ ಡಾ. ಬಸವಲಿಂಗ ಪಟ್ಟಾಧ್ಯಕ್ಷರು (ಹೀರೆಮಠ ಸಂಸ್ಥಾನ)

“ಯುವಜನತೆಯ ಬದುಕಿಗೆ ಬಸವ ತತ್ತ್ವವೇ ನಿಜವಾದ ಪಥಪ್ರದರ್ಶಕ. ಜ್ಞಾನ-ವಿಜ್ಞಾನಗಳ ಪ್ರಗತಿಗೆ ಮಾನವೀಯತೆ ಸೇರುವಂತೆ ಮಾಡುವುದು ಈ ಅಭಿಯಾನದ ಗುರಿ. ‘ಕಾಯಕವೇ ಕೈಲಾಸ’ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.”

ಡಾ. ಬಸವ ಮರುಳಸಿದ್ದ ಮಹಾಸ್ವಾಮಿಗಳು (ಬಸವ ಕೇಂದ್ರ, ಶಿವಮೊಗ್ಗ)

“ಬಸವ ಸಂಸ್ಕೃತಿ ಅಭಿಯಾನವು ನಿಜವಾದ ಸಮಾಜ ಸುಧಾರಣೆಯ ಕ್ರಾಂತಿ. ವಚನಗಳಲ್ಲಿ ಅಡಕವಾದ ಸತ್ಯ–ಧರ್ಮ–ಕಾಯಕದ ಸಂದೇಶ ಜನಮನದಲ್ಲಿ ಬಿತ್ತಿದರೆ, ನೂತನ ಚೇತನ ಮೂಡುತ್ತದೆ. ಯುವಕರು, ಮಹಿಳೆಯರು, ಸಾಮಾನ್ಯ ಜನರು ಕೈಜೋಡಿಸಿದರೆ, ಇದು ಭವ್ಯ ಚಳವಳಿ.”

ಒಗ್ಗಟ್ಟಿನ ಧ್ವನಿ

ಮಠಾಧಿಪತಿಗಳ ಸಂದೇಶಗಳು ಸ್ಪಷ್ಟವಾಗಿ ತೋರುವುದೇನು ಎಂದರೆ — ಬಸವ ಸಂಸ್ಕೃತಿ ಅಭಿಯಾನವು ಕೇವಲ ಧಾರ್ಮಿಕ ಚಟುವಟಿಕೆ ಅಲ್ಲ, ಇದು ಸಮಾಜ ಪರಿವರ್ತನೆಗಾಗಿ ಶಕ್ತಿ ತುಂಬುವ ಮಹಾನ್ ಚಳವಳಿ. ಸಮಾಜದಲ್ಲಿ ಸಮಾನತೆ, ಸುಜ್ಞಾನ, ವ್ಯಸನಮುಕ್ತ ಜೀವನ ಹಾಗೂ ಸಹಬಾಳ್ವೆ ಬೆಳೆಸುವುದೇ ಎಲ್ಲರ ಹಾರೈಕೆ.

“ಬಸವ ತತ್ತ್ವವೇ ನಿಜವಾದ ದಾರಿದೀಪ” ಎಂಬ ಒಗ್ಗಟ್ಟಿನ ಸಂದೇಶವನ್ನು ಎಲ್ಲಾ ಮಹಾಸ್ವಾಮಿಗಳು ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಮಹಾಸ್ವಾಮಿಗಳು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್‌ ರವರು ನಿವೃತ್ತ ಐಎಎಸ್‌ ಅಧಿಕಾರಿಗಳು ಇವರಿಂದ ನಡೆ-ನುಡಿ-ಸಿದ್ದಾಂತ ಬಗ್ಗೆ ಉಪನ್ಯಾಸವಿರುತ್ತದೆ.

ಧಾರ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಜಾಗೃತಿ ಮೂಡಿಸುವುದು, ಸಮಾಜದಲ್ಲಿ ಸಮಾನತೆ, ಸಹಕಾರ ಮತ್ತು ಭ್ರಾತೃತ್ವದ ಸಂದೇಶ ಹರಡುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದ್ದು, ವಚನ ಸಾಹಿತ್ಯದ ಮೌಲ್ಯಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಶಾಲೆ-ಕಾಲೇಜುಗಳಲ್ಲಿ ವಚನ ಪಾಠ, ಕಾವ್ಯ ಪಠಣ, ಚರ್ಚಾಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜ ಜಾಗೃತಿ ಮೂಡಿಸಲಾಗುತ್ತಿದೆ.

“ಕಾಯಕವೇ ಕೈಲಾಸ” ಹಾಗೂ “ಮನುಜನು ಒಕ್ಕೊರಲಾಗಿ ಬದುಕಬೇಕು” ಎಂಬ ಬಸವ ತತ್ತ್ವವನ್ನು ಹಬ್ಬಿಸುವ ಉದ್ದೇಶದಿಂದ ಉಪನ್ಯಾಸ, ಕಾರ್ಯಾಗಾರಗಳು, ಕಲಾ ಪ್ರದರ್ಶನಗಳು ಆಯೋಜನೆಯಾಗುತ್ತಿವೆ.

ರಾಜ್ಯದ ಎಲ್ಲೆಡೆ ಸಕ್ರಿಯವಾಗಿ ನಡೆಯುತ್ತಿರುವ “ಬಸವ ಸಂಸ್ಕೃತಿ ಅಭಿಯಾನ” ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ.

ಅಭಿಯಾನದ ಉದ್ದೇಶಗಳು

  • ಸಾರ್ವಜನಿಕರಲ್ಲಿ ಅಧ್ಯಾತ್ಮದ ಅರಿವು ಮೂಡಿಸುವುದು
  • ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಬೆಳೆಸುವುದು
  • ವ್ಯಸನಮುಕ್ತ ಸಮಾಜ ನಿರ್ಮಾಣ
  • ಸದುಪದೇಶದ ಮೂಲಕ ಯುವಜನತೆಗೆ ದಾರಿದೀಪವಾಗುವುದು
  • ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು
  • ಸಮ ಸಮಾಜ ನಿರ್ಮಾಣ
  • ಮಹಿಳೆಯರ ಘನತೆ ಕಾಪಾಡುವುದು

ಅಭಿಯಾನದ ದಿನ ನಡೆಯುವ ಕಾರ್ಯಕ್ರಮಗಳು (17-09-2025 ಬುಧವಾರ)

  • ಬೆಳಿಗ್ಗೆ 11:00: ಶಿವಮೊಗ್ಗ ನಗರದಲ್ಲಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಚನ ಸಂವಾದ
  • ಸಂಜೆ 4:00 – 6:00: ಶಿವಶರಣರ ಅಕ್ಕಮಹಾದೇವಿ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಪಾದಯಾತ್ರೆ
  • ಸಂಜೆ 6:00 ರಿಂದ: ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಚನಗಾನ, ಉಪನ್ಯಾಸ, ಆಶೀರ್ವಚನ ಮತ್ತು ಪುಸ್ತಕ ಬಿಡುಗಡೆ
  • ರಾತ್ರಿ 8:30: ‘ಜಂಗಮದೆಡೆಗೆ’ ನಾಟಕ ಪ್ರದರ್ಶನ

“ಬನ್ನಿ, ಭಾಗವಹಿಸಿ… ಬಸವ ಸಂಸ್ಕೃತಿ ಅಭಿಯಾನಕ್ಕೆ ಕೈ ಜೋಡಿಸಿ” ಎಂದು  ಅಧ್ಯಕ್ಷರು ಮಾಜಿ ವಿಧಾನಪರಿಷತ್‌ ಸದಸ್ಯರಾದ ಎಸ್. ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು, ಅಭಿಯಾನದ ಪ್ರಧಾನ ಕಾರ್ಯದರ್ಶಿ ಸಿ. ಎಸ್. ಷಡಕ್ಷರಿ ಹಾಗೂ ಬಸವ ಸಂಸ್ಕೃತಿ ಅಭಿಯಾನ  ಶಿವಮೊಗ್ಗದ ಆಯೋಜಕರು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment