ಬೆಂಗಳೂರು, ಸೆ.16: ರಾಜ್ಯ ರಾಜಕೀಯದಲ್ಲಿ ಮತ್ತೆ ಜಾತಿ ಸಮೀಕ್ಷೆ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ವೀರಶೈವ ಲಿಂಗಾಯತ ಸಮುದಾಯದ ಒಗ್ಗಟ್ಟಿಗಾಗಿ ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಸಮಾಜದ ಪ್ರಮುಖ ಮುಖಂಡರು ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ನೀತಿಯನ್ನು ತೀವ್ರವಾಗಿ ಟೀಕಿಸಿದರು.

ಸಭೆಯಲ್ಲಿ ಮಾತನಾಡಿದ ನಾಯಕರು – “ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿಯ ಹೆಸರಿನಲ್ಲಿ ಸಮಾಜದಲ್ಲಿ ಬಿರುಕು ಮೂಡಿಸುವ ಕುತಂತ್ರ ನಡೆಸುತ್ತಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ವಿಭಜಿಸುವ ಯತ್ನ ಇದು ಹೊಸದೇನಲ್ಲ, ಹಿಂದೆಲೂ ಇದೇ ರೀತಿಯ ಕೀಳು ಚಟುವಟಿಕೆ ನಡೆದಿದ್ದು, ಸಮುದಾಯ ಅದನ್ನು ಮರೆತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮುದಾಯ ಒಗ್ಗಟ್ಟು ಕಾಯುವ ನಿರ್ಣಯ
- ಸಭೆಯಲ್ಲಿ ಸಮುದಾಯ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
- ಸಮಾಜದೊಳಗೆ ಗೊಂದಲ ಸೃಷ್ಟಿಸುವ ಯಾವುದೇ ಚಟುವಟಿಕೆಗೆ ಒಗ್ಗಟ್ಟಿನಿಂದ ಪ್ರತಿರೋಧ ನೀಡಲು ತೀರ್ಮಾನಿಸಲಾಯಿತು.
- ಸಮುದಾಯದ ವಿವಿಧ ಮಠಾಧೀಶರು ಹಾಗೂ ಹರಗುರು ಚರಮೂರ್ತಿಗಳ ಮಾರ್ಗದರ್ಶನದಲ್ಲಿ ಒಟ್ಟಾಗಿ ಮುನ್ನಡೆಯಬೇಕೆಂದು ಒತ್ತಿಹೇಳಲಾಯಿತು.
- ಜಾತಿ ಸಮೀಕ್ಷೆಯ ನೆಪದಲ್ಲಿ ನಡೆಯುತ್ತಿರುವ ಕುತಂತ್ರವನ್ನು “ಸಮಾಜ ಒಗ್ಗಟ್ಟಿನ ಶಕ್ತಿಯಿಂದ ಮೆಟ್ಟಿನಿಲ್ಲಬೇಕು” ಎಂಬ ಅಭಿಪ್ರಾಯ ವ್ಯಕ್ತವಾಯಿತು.
- ಪ್ರತಿಯೊಬ್ಬ ಸಮುದಾಯದ ಸದಸ್ಯರೂ ಎಚ್ಚರಿಕೆಯಿಂದ ನಡೆದು, ಒಗ್ಗಟ್ಟನ್ನು ಕಾಪಾಡುವುದು ಕಾಲದ ಅಗತ್ಯ ಎಂದು ಒಮ್ಮತ ವ್ಯಕ್ತವಾಯಿತು.
ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
ಸಭೆಯಲ್ಲಿ ಭಾಗವಹಿಸಿದವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆಕ್ರೋಶ ವ್ಯಕ್ತಪಡಿಸಿ –“ಸಮಾಜವನ್ನು ಉಪಜಾತಿಗಳ ಹೆಸರಿನಲ್ಲಿ ವಿಭಜಿಸಿ, ರಾಜಕೀಯ ಲಾಭ ಪಡೆಯಲು ಸಿದ್ದರಾಮಯ್ಯ ಸರ್ಕಾರ ತಂತ್ರ ರೂಪಿಸಿದೆ. ಇದು ಧಾರ್ಮಿಕ ಹಾಗೂ ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತದೆ” ಎಂದು ಟೀಕಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ. ಸೋಮಣ್ಣ, ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಉದ್ಯಮಿ ವಿಜಯ್ ಸಂಕೇಶ್ವರ್, ಬಿವೈ ವಿಜಯೇಂದ್ರ, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸಭೆಯ ಅಂತ್ಯದಲ್ಲಿ ಸಮಾಜದ ಎಲ್ಲಾ ವಲಯಗಳಿಂದ ಒಗ್ಗಟ್ಟು ಕಾಪಾಡಿ, ಯಾವುದೇ ರೀತಿಯ ಕುತಂತ್ರಗಳಿಗೆ ಬಲಿಯಾಗದೆ, ಸಮಾಜದ ಹಿತ ಕಾಪಾಡಬೇಕು ಎಂಬ ಒಗ್ಗಟ್ಟಿನ ನಿರ್ಣಯ ಕೈಗೊಳ್ಳಲಾಯಿತು.