ಬೆಂಗಳೂರು, ಸೆ.18: ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಅದು ಹಿಂದೂ ಸಂಸ್ಕೃತಿಯ ಆಳವಾದ ಪ್ರತೀಕವಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳು ದಸರಾ ಪರಂಪರೆಯ ಮೂಲ ಸತ್ವಕ್ಕೆ ಧಕ್ಕೆ ತಂದಿವೆ ಎಂದು ಸಂಸದ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಪರಿವರ್ತನಾ ಟ್ರಸ್ಟ್ ಆಯೋಜಿಸಿದ್ದ “ಮೈಸೂರು ದಸರಾ: ಪರಂಪರೆ ಮತ್ತು ಸವಾಲುಗಳು” ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ಸಂವಿಧಾನದಲ್ಲಿ ಜಾತ್ಯತೀತತೆ ಎಂಬ ಪದ ಇರಲಿಲ್ಲ. ಜಾತ್ಯತೀತತೆಯ ತತ್ವವೇ ಭಾರತೀಯರ ಜೀವನ ಶೈಲಿಯಲ್ಲಿ ಸಹಜವಾಗಿತ್ತು. ಆದರೆ ಇಂದು ಆ ಪದವನ್ನು ದುರ್ಬಳಕೆ ಮಾಡಲಾಗುತ್ತಿದೆ. ಸಾಮಾಜಿಕ ನ್ಯಾಯ, ಜಾತ್ಯತೀತತೆ ಎಂಬ ಹೆಸರಿನಲ್ಲಿ ಹಿಂದೂ ಸಮಾಜವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಚಾಮುಂಡಿ ಬೆಟ್ಟದ ಕುರಿತು ವಿವಾದ
ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳ ಆಸ್ತಿಯೇ ಅಲ್ಲ ಎಂದು ಕೆಲವರು ಹೇಳುತ್ತಿರುವುದು ತುಂಬಾ ಬೇಸರಕಾರಿ. ಹಿಂದೂ ಸಮಾಜದಲ್ಲಿ ಸಂಶಯ ಹುಟ್ಟಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ. ಇದನ್ನು ನಾವೆಲ್ಲರೂ ಎದುರಿಸಬೇಕು ಎಂದು ಒಡೆಯರ್ ಸ್ಪಷ್ಟಪಡಿಸಿದರು.
ಮೈಸೂರು ದಸರಾ ಇತಿಹಾಸವನ್ನು ನೆನಪಿಸಿಕೊಂಡ ಅವರು, ವಿಜಯನಗರ ಸಾಮ್ರಾಜ್ಯದ ಕಾಲದಿಂದ ದಸರಾ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು ಎಂದು ತಿಳಿಸಿದರು.
1610ರಲ್ಲಿ ಶ್ರೀರಂಗಪಟ್ಟಣದಲ್ಲಿ ವಾಡೇಯಾರ್ ವಂಶದ ಆಡಳಿತ ಪ್ರಾರಂಭವಾದ ಬಳಿಕ ದಸರಾ ಅಧಿಕೃತವಾಗಿ ಅರಮನೆ ಹಬ್ಬವಾಯಿತು. ಟಿಪ್ಪು ಸುಲ್ತಾನ್ ಕಾಲದಲ್ಲಿ ಮನೆಯೊಳಗೆ ಮಾತ್ರ ಆಚರಣೆ ನಡೆಯಿತು. ಸ್ವಾತಂತ್ರ್ಯ ನಂತರ ಕೆಲವೊಂದು ಸರ್ಕಾರಗಳು ದಸರಾ ಪರಂಪರೆಯನ್ನು ತಿರಸ್ಕರಿಸುವ ನಿಲುವು ತಾಳಿದವು. 1972ರಲ್ಲಿ ರಾಜವಂಶಸ್ಥರ ವಿಶೇಷ ಹಕ್ಕುಗಳನ್ನು ರದ್ದು ಮಾಡಿದ ಬಳಿಕ ನಮ್ಮ ತಾತ ಜಯಚಾಮರಾಜೇಂದ್ರ ಒಡೆಯರ್ ಅವರು ಅರಮನೆಯೊಳಗೆ ಮಾತ್ರ ದಸರಾ ಮಾಡುವ ನಿರ್ಧಾರ ಕೈಗೊಂಡರು. ಆಗಿನಿಂದ 1990ರವರೆಗೂ ಜಂಬೂ ಸವಾರಿ ಇರಲಿಲ್ಲ. ನಂತರ ಸರ್ಕಾರವೇ ಸಾರ್ವಜನಿಕ ದಸರಾವನ್ನು ಆಯೋಜಿಸುವ ಪ್ರಕ್ರಿಯೆ ಆರಂಭಿಸಿತು ಎಂದು ವಿವರಿಸಿದರು.
ಅವರು ಮುಂದುವರಿದು, ಅರಮನೆ ದಸರಾ ಧಾರ್ಮಿಕ ಹಬ್ಬ, ಸರ್ಕಾರ ಆಯೋಜಿಸುವುದು ಸಾಂಸ್ಕೃತಿಕ ಕಾರ್ಯಕ್ರಮ. ಈ ಎರಡರ ನಡುವೆ ಸಮತೋಲನ ಕಾಪಾಡಬೇಕು. ಯಾವುದೇ ಸರ್ಕಾರ ಬಂದರೂ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವಂತಿಲ್ಲ ಎಂದು ಒತ್ತಾಯಿಸಿದರು.
ಮೆಕಾಲೇ ಕಾಲದಲ್ಲಿ ಭಾರತೀಯರ ಸಂಸ್ಕೃತಿ ಕೀಳುಮಟ್ಟದ್ದು ಎಂಬ ಅಭಿಪ್ರಾಯವನ್ನು ಹೇರಲಾಗಿತ್ತು. ಬ್ರಿಟಿಷರು ರೂಪಿಸಿದ ಆಲೋಚನಾ ಚೌಕಟ್ಟು ಇಂದು ಸಹ ಮುಂದುವರಿದಿದೆ. ಸ್ವಾತಂತ್ರ್ಯದ ಬಳಿಕ ಸ್ವದೇಶಿ ದೃಷ್ಟಿಯಲ್ಲಿ ನಾವೇ ನಾವಾಗಿ ದೇಶವನ್ನು ಕಟ್ಟಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇಂದಿಗೂ ಆ ವಸಾಹತುಶಾಹಿ ಚಿಂತನೆಗಳೇ ಸಮಾಜದಲ್ಲಿ ಜೀವಂತವಾಗಿವೆ. ಅವನ್ನು ಎದುರಿಸುವ ಸಮಯ ಬಂದಿದೆ ಎಂದು ಕರೆ ನೀಡಿದರು.
ಹಯವದನರಾವ್ ಬರೆದ “ಮೈಸೂರಿನ ದಸರಾ” ಪುಸ್ತಕದ ಪ್ರಸ್ತಾಪ ಮಾಡುತ್ತಾ, “ಈ ಕೃತಿಯಲ್ಲಿ ದಸರಾ ಕುರಿತು ಸಂಪೂರ್ಣ ಮಾಹಿತಿಯಿದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ಕ್ಷಣದಿಂದ ದಸರಾ ಹಬ್ಬದ ಮೂಲಭೂತ ಅರ್ಥವನ್ನು ತಿಳಿದುಕೊಳ್ಳಬಹುದು” ಎಂದು ಹೇಳಿದರು.
ಯದುವೀರ್ ಒಡೆಯರ್ ಅವರು ಮೈಸೂರು ದಸರಾವನ್ನು ಕೇವಲ ಸಾಂಸ್ಕೃತಿಕ ಹಬ್ಬವಾಗಿ ಮಾತ್ರವಲ್ಲದೆ, ಹಿಂದೂ ಸಮಾಜದ ಏಕತೆ ಮತ್ತು ಭಾರತೀಯ ಪರಂಪರೆಯ ಪ್ರತೀಕವಾಗಿ ಉಳಿಸಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ.