ಬೆಂಗಳೂರು, ಸೆ.18: ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿ (Caste Census) ಮತ್ತೆ ವಿವಾದಕ್ಕೆ ಕಾರಣವಾಗಿದೆ. ಇಂದು (ಸೆಪ್ಟೆಂಬರ್ 18) ನಡೆದ ಸಂಪುಟ ಸಭೆಯಲ್ಲಿ ಕೆಲ ಸಚಿವರು ಏರು ಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ, ಸಮೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಶುರುವಾಗಿದೆ.
ಸಭೆಯಲ್ಲಿ 331 ಹೊಸ ಜಾತಿಗಳ ಸೇರ್ಪಡೆಗೆ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಯಿತು. “ಹೊಸ ಸೇರ್ಪಡೆ ಗೊಂದಲ ಸೃಷ್ಟಿಸಿದೆ. ಮೊದಲು ಗೊಂದಲ ನಿವಾರಣೆ ಮಾಡಿ, ನಂತರವೇ ಜಾತಿಗಣತಿ ಮುಂದುವರಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ದೊಡ್ಡ ತೊಂದರೆಗಳು ಎದುರಾಗಬಹುದು” ಎಂದು ಎಚ್ಚರಿಕೆ ನೀಡಲಾಗಿದೆ.
ಆದರೆ ಸಿಎಂ ಸಿದ್ದರಾಮಯ್ಯ, ಭೈರತಿ ಸುರೇಶ್, ಸಂತೋಷ್ ಲಾಡ್ ಮತ್ತು ಕೆ.ಎಚ್. ಮುನಿಯಪ್ಪ ಮಾತ್ರ ಸಮೀಕ್ಷೆ ಮುಂದುವರಿಸಲು ಒಲವು ತೋರಿದ್ದಾರೆ. ಉಳಿದ ಸಚಿವರು ವಿರೋಧ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಜಾತಿ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್ನರೊಂದಿಗೆ ಮೂಲ ಜಾತಿಯನ್ನು ಪ್ರತ್ಯೇಕವಾಗಿ ತೋರಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಸಮಾಜದೊಳಗೆ ಅನಗತ್ಯ ಒಡೆದಾಟ ನಡೆಯುತ್ತಿದೆ ಎಂದು ಸಚಿವರು ಹಾಗೂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ “ಜಾತಿ ಸಮೀಕ್ಷೆಯ ಹೆಸರಿನಲ್ಲಿ ಕ್ರೈಸ್ತರನ್ನು ಹಿಂದೂ ಜಾತಿಗಳ ನಡುವೆ ಎಳೆದು ಗೊಂದಲ ಉಂಟುಮಾಡುತ್ತಿದೆ” ಎಂದು ಆರೋಪಿಸಿದೆ.
ಇದರ ನಡುವೆ, ಕರ್ನಾಟಕ ಸರ್ಕಾರ 1,561 ಜಾತಿ-ಉಪಜಾತಿಗಳ ಪಟ್ಟಿ (ಎಸ್.ಸಿ., ಎಸ್.ಟಿ. ಹೊರತುಪಡಿಸಿ) ಬಿಡುಗಡೆ ಮಾಡಿದೆ. ಈ ಪಟ್ಟಿ ಆಧರಿಸಿ ರಾಜ್ಯದ 7 ಕೋಟಿಗೂ ಹೆಚ್ಚು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮಧುಸೂಧನ ನಾಯ್ಕ್ ಅವರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸಲಿದೆ.
ಹಿಂದೆ 2015ರಲ್ಲಿ ಕಾಂತರಾಜ್ ವರದಿ ಸಲ್ಲಿಸಿದ್ದರೂ, ಈಗ 10 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಸಲಿದೆ. ಪ್ರತಿ ನಾಗರಿಕರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು, ಯಾರೂ ಹೊರಗುಳಿಯಬಾರದು ಎಂದು ಸರ್ಕಾರ ಸೂಚಿಸಿದೆ. ಸಮೀಕ್ಷೆಗೆ ಆನ್‌ಲೈನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004ಕ್ಕೆ ಸಂಪರ್ಕಿಸಲು ಸೂಚಿಸಲಾಗಿದೆ. ಸಂಪುಟ ಸಭೆಯ ವಾತಾವರಣ, ಸಚಿವರ ಮಧ್ಯೆ ಜಟಾಪಟಿ ಮತ್ತು ವಿರೋಧ ಧ್ವನಿಗಳ ಹಿನ್ನೆಲೆಯಲ್ಲಿ, ಜಾತಿಗಣತಿ ಮುಂದೂಡಿಕೆಯಾಗುತ್ತದೆಯೇ ಎಂಬ ಪ್ರಶ್ನೆ ಗಂಭೀರವಾಗಿ ಮೂಡಿದೆ.