ಚೆನ್ನೈ, ಸೆಪ್ಟೆಂಬರ್ 27: ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ದಳಪತಿ ಅವರು ನಡೆಸಿದ ರ್ಯಾಲಿಯಲ್ಲಿ ಭಾರೀ ನೂಕುನುಗ್ಗಲು ಸಂಭವಿಸಿ 33 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಸಾವಿರಾರು ಜನ ಸೇರಿದ್ದರಿಂದ ನಿಯಂತ್ರಣ ತಪ್ಪಿದ ಜನಸ್ತೋಮದಿಂದ ಕಾಲ್ತುಳಿತ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ. ಕೆಲವರು ಪ್ರಜ್ಞೆ ತಪ್ಪಿ ರಸ್ತೆಯ ಬದಿಯಲ್ಲಿ ಬಿದ್ದುಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಜಯ್ ಭಾಷಣವನ್ನು ಕೇಳಲು ರಸ್ತೆ ತುಂಬಾ ಜನ ಸೇರಿದ್ದರ ಪರಿಣಾಮ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಜನರಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದ್ದಂತೆಯೇ ವಿಜಯ್ ಮೈಕ್ ಮೂಲಕ “ಯಾರೂ ಗಾಬರಿಯಾಗಬೇಡಿ, ಆಂಬ್ಯುಲೆನ್ಸ್ ಬರುತ್ತಿದೆ. ಪೊಲೀಸರೇ, ದಯವಿಟ್ಟು ಸಹಾಯ ಮಾಡಿ” ಎಂದು ಮನವಿ ಮಾಡಿದರು. ಅವರು ತಮ್ಮ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಗಾಯಾಳುಗಳಿಗೆ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡರು.
ಅಸ್ವಸ್ಥರಿಗೆ ನೀರು ವಿತರಣೆ, ಆಂಬ್ಯುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಣೆ ಮತ್ತು ತುರ್ತು ವೈದ್ಯಕೀಯ ತಂಡಗಳ ನಿಯೋಜನೆ ತಕ್ಷಣ ಕೈಗೊಂಡ ಕ್ರಮಗಳಾಗಿ ಗುರುತಿಸಲ್ಪಟ್ಟಿವೆ. ಬೆಂಬಲಿಗರಿಗೆ ದಾರಿಗಳನ್ನು ತೆರವುಗೊಳಿಸಲು ಮತ್ತು ತುರ್ತು ವಾಹನಗಳಿಗೆ ಮಾರ್ಗ ಕಲ್ಪಿಸಲು ವಿಜಯ್ ಸೂಚನೆ ನೀಡಿರುವುದು ದೃಶ್ಯವೊಂದರಲ್ಲಿ ಗೋಚರಿಸುತ್ತದೆ.

ಪೊಲೀಸರು ಇನ್ನೂ ಜನಸ್ತೋಮವನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದು, ಅವಘಡದ ದೃಶ್ಯಗಳು ಜನರಲ್ಲಿ ಆತಂಕ ಉಂಟುಮಾಡಿವೆ. ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗುತ್ತಿರುವುದಾಗಿ ಮೂಲಗಳು ತಿಳಿಸಿವೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ರ್ಯಾಲಿ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ವಿಜಯ್ ಕೈಗೊಂಡಿರುವ ಪ್ರಚಾರ ಕಾರ್ಯಕ್ರಮದ ಭಾಗವಾಗಿದ್ದು, ಜನಸಂದಣಿ ನಿರ್ವಹಣೆಯ ಕೊರತೆಯೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ.







